'ಸದೃಢ ರಾಷ್ಟ್ರ ನಿರ್ಮಾಣಕ್ಕೆ ವಿಎಚ್‌ಪಿ ಸಂಕಲ್ಪ'
ಜೇವರ್ಗಿ: ಸುಭದ್ರ ಹಾಗೂ ಸದೃಢ ರಾಷ್ಟ್ರ ನಿರ್ಮಾಣವೇ ವಿಎಚ್‌ಪಿ ಸಂಕಲ್ಪವಾಗಿದ್ದು, ಆ ನಿಟ್ಟಿನಲ್ಲಿ ಗುರಿ ಮುಟ್ಟಿಸುವಲ್ಲಿ ಕಾರ್ಯಕರ್ತರು ಶ್ರಮಿಸಬೇಕಾಗಿದೆ ಎಂದು ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಹೇಳಿದರು.
ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಸಂಘಟನೆಯನ್ನು ಗ್ರಾಮಾಂತರ ಪ್ರದೇಶದಲ್ಲಿ ಕೆಳಹಂತದಿಂದ ಸಂಘಟಿಸಿ ದೇಶದ ಒಳತಿಗಾಗಿ ಶ್ರಮಿಸಬೇಕಾಗಿದೆ ಎಂದರು.
ಸಭೆಯಲ್ಲಿ ತಾಲೂಕು ಅಧ್ಯಕ್ಷ ಶರಣಗೌಡ ರಾಸಣಗಿ, ಮಲ್ಲಿಕಾರ್ಜುನ ಅದ್ವಾನಿ, ಮಲಶೇಟ್ಟೆಪ್ಪಗೌಡ ಹಿರೇಗೌಡ, ಪರಮೇಶ್ವರ ಬಿರಾಳ, ವಿಶ್ವನಾಥ ಕಲ್ಲಾ, ಶಂಕರ ಇಜೇರಿ, ರಾಜು ಪೂಜಾರಿ, ಸಂಗಣ್ಣ ಇಜೇರಿ ಉಪಸ್ಥಿತರಿದ್ದರು.
ಶಾಸಕ ಮಾಲೀಕಯ್ಯ ಹೇಳಿಕೆಗೆ ಖಂಡನೆ
ಅಫಜಲ್ಪುರ: ಅಫಜಲ್ಪುರ ಕ್ಷೇತ್ರವನ್ನು ಪ್ರತಿನಿಧಿಸಿರುವ ಶಾಸಕ ಮಾಲೀಕಯ್ಯ ಗುತ್ತೇದಾರ ಕ್ಷೇತ್ರದಲ್ಲಿ ಯಾವುದೇ ರೀತಿಯ ಕುಂದು ಕೊರತೆಗಳಿಲ್ಲ ಎಂದಿರುವ ಶಾಸಕಮಾಲೀಕಯ್ಯ ಅವರಿಗೆ ಸಮಸ್ಯೆಗಳು ಬೆಟ್ಟದಷ್ಟಿದ್ದರೂ ಕೂಡ ಸಮಸ್ಯೆಗಳಿಲ್ಲವೆಂದು ಹೇಳಿರುವುದು ಖಂಡನೀಯ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರಮೇಶ ನೀಲಗಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ಆಗದೆ ಸುಮಾರು ವರ್ಷಗಳೇ ಕಳೆದಿವೆ. ರಸ್ತೆ, ಗ್ರಾಮಾಭಿವೃದ್ಧಿ, ಪಟ್ಟಣದ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಹೀಗೆ ಸಮಸ್ಯೆಗಳ ಪಟ್ಟಿ ದೊಡ್ಡದಿದ್ದರೂ ಶಾಸಕರು ಯಾವುದೇ ಸಮಸ್ಯೆಗಳಿಲ್ಲವೆಂದು ಹೇಳಿ ವಿದೇಶ ಪ್ರವಾಸಕ್ಕೆ ಹೋಗುತ್ತಿರುವುದು ಸರಿಯಲ್ಲ ಎಂದು ಖಾರವಾಗಿ ನುಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರುಗಳಾದ ಅವ್ವಣ್ಣ ಮ್ಯಾಕೇರಿ, ಮಲ್ಲಿಕಾರ್ಜುನ ನಿಂಗದಳ್ಳಿ, ಶರಣಬಸು ಕುಂಬಾರ, ಚಂದ್ರಾಮ ಪೂಜಾರಿ, ರಾಘವೇಂದ್ರ, ರಮೇಶ ಸೇರಿದಂತೆ ಇತರರು ಇದ್ದರು.
ಶೇರಿಕಾರ್‌ಗೆ ಮಾಳವಿಯಾ ಪ್ರಶಸ್ತಿ
ಗುಲ್ಬರ್ಗ: ಹೈ.ಕ. ಶಿಕ್ಷಣ ಸಂಸ್ಥೆಯ ಪಿಡಿಎ ತಾಂತ್ರಿಕ ಮಹಾವಿದ್ಯಾಲಯದ ಸಿರಾಮಿಕ್ ಮತ್ತು ಸಿಮೆಂಟ್ ವಿಭಾಗದ ಪ್ರಾಧ್ಯಾಪಕ ಬಾಬುರಾವ್ ಎನ್. ಶೇರಿಕಾರ್ ಅವರಿಗೆ ಇಂಡಿಯನ್ ಸಿರಾಮಿಕ್ ಸೊಸೈಟಿಯ ಪ್ರಸಕ್ತ ಸಾಲಿನ ಮಾಳವಿಯಾ ಪ್ರಶಸ್ತಿ ಲಭಿಸಿದೆ. ದ್ರವಣ ದಹನ ಕ್ರಿಯಾ ಉತ್ಸನ್ನ ವಸ್ತುಗಳ ಗುಣಧರ್ಮಗಳ ಮೇಲೆ ದಹನ ಕ್ರಿಯಾಜ್ವಾಲೆಯ ಪರಿಣಾಮ ಎಂಬ ಅವರ ಲೇಖನಕ್ಕೆ ಅತ್ಯುತ್ತಮ ಲೇಖನ ಎಂದು ಪರಿಗಣಿಸಿ, ಈಚೆಗೆ ಜೆಮ್‌ಶೆಡ್‌ಪುರ (ಟಾಟಾ ನಗರ)ದಲ್ಲಿ ನಡೆದ ಇಂಡಿಯನ್ ಸಿರಾಮಿಕ್ ಸೊಸೈಟಿಯ ವಾರ್ಷಿಕ ಸಮ್ಮೇಳನದಲ್ಲಿ ಮಾಳವಿಯಾ ಪ್ರಶಸ್ತಿ ನೀಡಲಾಗಿದೆ.
ಹಟಗಾರ ಸಮಾಜದ ಸಭೆ
ಗುಲ್ಬರ್ಗ: ಗದಗ ಜಿಲ್ಲೆಯ ಗಜೇಂದ್ರಗಢನಲ್ಲಿ ಈಚೆಗೆ ಕರ್ನಾಟಕ ಹಟಗಾರ ಸಮಾಜದ ಸಭೆ ನಡೆಯಿತು.ಸಮಾಜದ ರಾಜ್ಯಾಧ್ಯಕ್ಷ ಆರ್.ಸಿ. ಘಾಳೆ, ಗೌರವ ಅಧ್ಯಕ್ಷ ಎಂ.ಎಸ್. ದಡ್ಡೆ, ಮುರಗೇಸಿ ಕಡ್ಲಿಮಟ್ಟಿ, ಬಾಗಲಕೋಟೆ ಜಿಲ್ಲಾ ಅಧ್ಯಕ್ಷ ಶಿವಪೂಜಿ ಪಾಲ್ಗೊಂಡು ಉತ್ತರ ಕರ್ನಾಟಕದ ಹಟಗಾರ ನೇಕಾರ ಜನಾಂಗದವರಿಗೆ ರಾಷ್ಟ್ರೀಯ ಪಕ್ಷಗಳು ಸೂಕ್ತ ಸ್ಥಾನಮಾನ ನೀಡದೆ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡದೆ ವಂಚಿಸಿವೆ ಎಂದರು. ಸಿಂಹಾಸನ, ಈರಪ್ಪ ಜೂಜನಿ, ಪರಮೇಶ್ವರ ಯಂಕಂಚಿ, ರಾಮಣ್ಣ ಸಿಂಹಾಸನ, ಪಂಪನಗೌಡ ಸಿನ್ನೂರ, ಶ್ರೀಶೈಲಪ್ಪ ಮಸೂದಿ ಇತರರು ಉಪಸ್ಥಿತರಿದ್ದರು.
ಕಾರ್ಯಕರ್ತರ ಸಭೆ
ಗುಲ್ಬರ್ಗ: ಡಿ.30 ರಂದು ಬೆಳಗ್ಗೆ 11.30ಕ್ಕೆ ನಗರದ ಹೋಟಲ್ ರಾಜರಾಜೇಶ್ವರಿಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ (ಅ) ಗುಲ್ಬರ್ಗ ವಿಭಾಗ ಮಟ್ಟದ ಕಾರ್ಯಕರ್ತರ ಸಭೆ ಮತ್ತು ನೂತನ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ಎ.ಬಿ. ಹೊಸಮನಿ ಸಭೆ ಉದ್ಘಾಟಿಸಲಿದ್ದಾರೆ. ರಾಜ್ಯ ಉಪಾಧ್ಯಕ್ಷ ವೆಂಕಟರಾವ ಶಿಂಧೆ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಘಟಕದ ಪ್ರಮುಖರು ಈ ಸಭೆಗೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಪದಾಧಿಕಾರಿಗಳು ಭಾಗವಹಿಸಬೇಕೆಂದು ಕೋರಲಾಗಿದೆ.
ಅರ್ಜಿ ಆಹ್ವಾನ
ಗುಲ್ಬರ್ಗ: ಕರ್ನಾಟಕ ಪೊಸ್ಟಲ್ ವಿಭಾಗವು ಪೋಸ್ಟ್‌ಮನ್ ಮತ್ತು ಮೇಲ್‌ಗಾರ್ಡ್ ಹುದ್ದೆಗಳಿಗೆ (ರೇಲ್ವೆ ಮೇಲ್ ಸರ್ವಿಸ್ ಡಿವಿಜನ್) ಅರ್ಜಿ ಆಹ್ವಾನಿಸಲಾಗಿದೆ. ಪೋಸ್ಟ್‌ಮನ್-248 ಮತ್ತು ಮೇಲ್‌ಗಾರ್ಡ್ 10 ಹುದ್ದೆಗಳಿವೆ. ಅರ್ಜಿ ಸಲ್ಲಿಸಲು ಜನವರಿ 3 ಕೊನೆದಿನ. ಮಾಹಿತಿಗೆ ಕರ್ನಾಟಕ ಪೋಸ್ಟ್ ವೆಬ್ ವಿಳಾಸ ಢಿಢಿಢಿ.್ಝಟಿಜ್ಝಛಠ್ಟಡಡಿ.್ಜ್ಟಢ.್ಝಟಿ ಮತ್ತು ಢಿಢಿಢಿ.್ಞಛ್ಠಟಿಛಡಿಛ್ಞಛಠ್ಟಡಡಿ.್ಜ್ಟಢ.್ಝಟಿ ಸಂಪರ್ಕಿಬಹುದು.
ಸಂಗೀತ ಸಮ್ಮೇಳನ
ಗುಲ್ಬರ್ಗ: ಅಫಜಲ್ಪುರ ತಾಲೂಕಿನ ಸುಕ್ಷೇತ್ರ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ಜ.3 ಮತ್ತು 4ರಂದು ಸಂಗೀತ ಸಮ್ಮೇಳನ ನಡೆಯಲಿದೆ. ನರಸಿಂಹ ಸರಸ್ವತಿ ಜನ್ಮೋತ್ಸವ ನಿಮಿತ್ತ ನಡೆಯುವ 19ನೇ ಸಂಗೀತ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯದ ಸೇರಿದಂತೆ ವಿವಿಧ ರಾಜ್ಯಗಳಿಂದ ಖ್ಯಾತ ಸಂಗೀತ ಕಲಾವಿದರು ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತ ಕಲಾವಿದರು, ಸಂಗೀತಾಸಕ್ತರು ಪಾಲ್ಗೊಳ್ಳಲು ದತ್ತಾತ್ರೇಯ ದೇವಸ್ಥಾನ ಸಮಿತಿ ಅಧ್ಯಕ್ಷ ಖೇಮಲಿಂಗ್ ಬಿರಾದಾರ ಮತ್ತು ಸಂಗೀತ ಸೇವಾ ಸಮಿತಿ ಅಧ್ಯಕ್ಷ ಗೋವಿಂದರಾವ ಪೂಜಾರಿ ಕೋರಿದ್ದಾರೆ.
ತಾಪಂ ಚುನಾವಣೆ
ಚಿಂಚೋಳಿ: ತಾಲೂಕಿನ ನಿಡಗುಂದಾ ಗ್ರಾಮ ಪಂಚಾಯ್ತಿ ಖಾಲಿ ಇರುವ ಅಧ್ಯಕ್ಷ ಸ್ಥಾನಕ್ಕೆ(ಪರಿಶಿಷ್ಟ ಜಾತಿ) ಡಿ. 30 ರಂದು ಚುನಾವಣೆ ನಡೆಯಲಿದೆ ಎಂದು ತಹಸೀಲ್ದಾರ್ ಮೋಹನ ಜೋಶಿ ತಿಳಿಸಿದ್ದಾರೆ. ಗ್ರಾಪಂ ಕಾರ್ಯಾಲಯದಲ್ಲಿ ಬೆಳಗ್ಗೆ 10ಗಂಟೆ ಒಳಗಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಬಹುದಾಗಿದೆ. ಮಧ್ಯಾಹ್ನ 12ಕ್ಕೆ ನಾಮಪತ್ರ ಪರಿಶೀಲಿಸಿದ ನಂತರ ನೂತನ ಅಧ್ಯಕ್ಷರ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಚಿಂಚೋಳಿ ತಾಲೂಕಿನ ಗಡಿಲಿಂಗದಳ್ಳಿ ಗ್ರಾಪಂ ಖಾಲಿ ಇರುವ ಉಪಾಧ್ಯಕ್ಷ ಸ್ಥಾನಕ್ಕೆ ಜ.3 ಎಂದು ಚುನಾವಣೆ ನಡೆಯಲಿದೆ ಎಂದು ತಹಸೀಲ್ದಾರ್ ಮೋಹನ ಜೋಶಿ ತಿಳಿಸಿದ್ದಾರೆ. ಗಡಿಲಿಂಗದಳ್ಳಿ ಗ್ರಾಪಂ ಉಪಾಧ್ಯಕ್ಷ ಸ್ಥಾನವು ಬಿಸಿಎ ಮಹಿಳೆಗೆ ಮೀಸಲಾತಿ ನೀಡಲಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಬೆಳಗ್ಗೆ 10ಕ್ಕೆ ಒಳಗಾಗಿ ನಾಮಪತ್ರ ಸಲ್ಲಿಸಲು ತಿಳಿಸಲಾಗಿದೆ.