ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹಸಿರು ಉಳಿಸಲು ವರವಾಯ್ತು ಮಾಹಿತಿ ಹಕ್ಕು ನಿಯಮ

Vishwanath S
Updated On : 30 Dec 2013, 12:01 pm

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಡಿ.29
ತನ್ನ ಸುತ್ತಲಿನ ಪರ- ವಿರೋಧ ಚರ್ಚೆಯಿಂದಾಗಿ ಸದಾ ಸುದ್ದಿಯಲ್ಲಿರುವ ಮಾಹಿತಿ ಹಕ್ಕು ಅಧಿನಿಯಮ- 2005ನ್ನು ಜಾಣ್ಮೆಯಿಂದ, ಸಮುದಾಯದ ಬೆಳವಣಿಗೆ ಉದ್ದೇಶದೊಂದಿಗೆ ಬಳಸಲ್ಪಟ್ಟರೆ ಸುಪರಿಣಾಮ ನಿಶ್ಚಿತ ಎನ್ನಲು ಇಲ್ಲಿದೆ ಸಾಕ್ಷಿ.
ಹೆಚ್ಚುತ್ತಿರುವ ನಗರೀಕರಣದಿಂದಾಗಿ ಒತ್ತುವರಿಯಾಗುತ್ತಿರುವ ಉದ್ಯಾನವನ, ಬಯಲು ಜಾಗ, ಆಟದ ಮೈದಾನಗಳ ಸಂರಕ್ಷಣೆಗೆ 1985ರಲ್ಲಿ ಸರ್ಕಾರವೇ ಕಾಯ್ದೆ- ನಿಯಮಾವಳಿ ರೂಪಿಸಿದ್ದರೂ ಅದು ಕಡತದಲ್ಲೇ ಕೊಳೆಯುತ್ತಿತ್ತು.
ಬಡಿದೆಚ್ಚರಿಸಿದ ಅರ್ಜಿ: ಗುಲ್ಬರ್ಗದ ಮಾಹಿತಿಹಕ್ಕು ಕಾರ್ಯಕರ್ತ ದೀಪಕ ಗಾಲಾ ಉದ್ಯಾನವನ, ಆಟದ ಮೈದಾನ ಮತ್ತು ಬಯಲು ಜಾಗೆಗಳ (ರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆ- ನಿಯಮಾವಳಿ 1985ರ ಅನುಷ್ಠಾನದ ಕುರಿತಂತೆ ಮಾಹಿತಿ ಕೋರಿ ಸಲ್ಲಿಸಿದ್ದ ಅರ್ಜಿ ಸರ್ಕಾರವನ್ನೇ ಬಡಿದೆಚ್ಚರಿಸಿದ್ದಲ್ಲದೆ, ನಗರಾಭಿವೃದ್ಧಿ ಸಚಿವಾಲಯದ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು.
ಅಷ್ಟೇ ಅಲ್ಲ, ಉದ್ಯಾನ, ಬಯಲು, ಮೈದಾನಗಳ ಭದ್ರತೆಗಿರುವ ಕಾಯಿದೆ ಅನುಷ್ಠಾನಕ್ಕೆ ನಗರಾಭೀವೃದ್ಧಿ ಇಲಾಖೆ ತನ್ನಡಿಯಲ್ಲಿ ಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ತಾಕೀತು ಮಾಡಿ ಸುತ್ತೋಲೆ ಹೊರಡಿಸುವಂತಾಯ್ತು.
ಮಾಹಿತಿಗಾಗಿ ಸತತ ಕಸರತ್ತು: ಉದ್ಯಾನವನ- ಬಯಲು ಜಾಗೆ, ಮೈದಾನಗಳ ರಕ್ಷಣೆಯ ಉದ್ದೇಶದ 1985ರಲ್ಲಿ ಜಾರಿಗೊಂಡಿರುವ ಕಾಯ್ದೆ- ನಿಯಮಾವಳಿ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿರುವ ಉದ್ಯಾನವನ, ಬಯಲು, ಆಟದ ಮೈದಾನಗಳ ಮಾಹಿತಿ, ಅವುಗಳ ಸ್ಥಿತಿಗತಿ ಬಗ್ಗೆ ಪ್ರತಿವರ್ಷ ಸರ್ಕಾರಕ್ಕೆ ಸಲ್ಲಿಸಬೇಕು. ಈ ಬಗ್ಗೆ ಮಾದರಿಯನ್ನೂ ಕಾಯಿದೆಯಲ್ಲಿ ನೀಡಲಾಗಿದೆ.
ಇಷ್ಟೊಂದು ಸೂಕ್ಷ್ಮತೆ ಇರುವ ಕಾಯಿದೆ ಇದ್ದರೂ ಅದರ ಅಸ್ತಿತ್ವ ಕಿಂಚಿತ್ತು ಕಾಣುತ್ತಿಲ್ಲವಲ್ಲ ಎಂಬ ಬೇಸರದಿಂದ ಹೈ-ಕ ಪರಿಸರ ಸಂರಕ್ಷಣೆ ಸಮಿತಿ ಅಧ್ಯಕ್ಷ, ಮಾಹಿತಿ ಹಕ್ಕು ಕಾರ್ಯಕರ್ತ ದೀಪಕ ಗಾಲಾ 2008ರ ಆಗಸ್ಟ್ 12ರಂದು ನಗರಾಭಿವೃದ್ಧಿ ಇಲಾಖೆಗೆ ಅರ್ಜಿ ಹಾಕಿ ಕಾಯಿದೆ ಅನುಷ್ಠಾನದ ಮಾಹಿತಿ ಕೋರಿದ್ದರು.
ಕಾಯಿದೆಯನ್ವಯ ಕಲಂ 11ರಂತೆ ಉದ್ಯಾನ, ಬಯಲು ಹಾಗೂ ಮೈದಾನಗಳ ಮಾಹಿತಿ ನೀಡಿರುವ ಸ್ಥಳೀಯ ಸಂಸ್ಥೆವಾರು ಅನುಪಾಲನಾ ವರದಿ, ಈ ಕಾಯಿದೆ ಅನುಷ್ಠಾನದಲ್ಲಿ ಲೋಪ ಎಸಗಿದ ಸಂಸ್ಥೆಗಳ ವಿರುದ್ಧ ಕೈಗೊಂಡ ಕ್ರಮಗಳ ಕುರಿತಂತೆ ಮಾಹಿತಿ ಕೋರಿದ್ದ ಗಾಲಾ ಅವರ ಅರ್ಜಿಗೆ ನಗರಾಭೀವೃದ್ಧಿ ಸಚಿವಾಲಯ 10 ತಿಂಗಳಾದರೂ ಮಾಹಿತಿ ನೀಡಿರಲೇ ಇಲ್ಲ.
ಮಾಹಿತಿ ಕೋರಿ ಅರ್ಜಿ: 2009ರ ಮೇ ತಿಂಗಳಲ್ಲಿ ಮತ್ತೆ ಗಾಲಾ ಮಾಹಿತಿ ನೀಡದ್ದಕ್ಕೆ ಕಾರಣ ಕೇಳಿ ಮತ್ತು ಮೇಲಿನಂತೆ ಎಲ್ಲಾ ಮಾಹಿತಿ ಕೋರಿ ಅರ್ಜಿ ನೀಡಿದಾಗ ನಗರಾಭಿವೃದ್ಧಿ ಇಲಾಖೆ ಪ್ರ. ಕಾರ್ಯದರ್ಶಿಗಳನ್ನು ಅದನ್ನು ಪೌರಾಡಳಿತ ಇಲಾಖೆಯ ನಿರ್ದೇಶಕರಿಗೆ ವರ್ಗಾಯಿಸಿ ಮಾಹಿತಿ ನೀಡಲು ಸೂಚಿಸಿದ್ದರು. ನಗರಾಭೀವೃದ್ಧಿ ಇಲಾಖೆ ಪ್ರ. ಕಾರ್ಯದರ್ಶಿಗಳೇ ಈ ಮಾಹಿತಿ ನೀಡುವ ಸರಿಯಾದ ಸಂಸ್ಥೆಯಾಗಿತ್ತು. ಹೀಗಾಗಿ ಅರ್ಜಿ ವರ್ಗಾವಣೆ ಕಾಯಿದೆ ಬಾಹೀರವಾಗಿತ್ತು.
ಈ ಲೋಪವನ್ನು ಅರ್ಜಿದಾರರು ಮಾಹಿತಿ ಹಕ್ಕು ಆಯೋಗದ ಗಮನಕ್ಕೆ ತಂದಾಗ 2010 ರ ಫೆ.2ರಂದು ಆಯೋಗ ಆದೇಶ ಹೊರಡಿಸಿ 10 ತಿಂಗಳಲ್ಲಿ ಅರ್ಜಿದಾರರಿಗೆ ಕೇಳಿದ ಸೂಕ್ತ ಮಾಹಿತಿ ಒದಗಿಸಬೇಕೆಂದು ಆದೇಶಿಸಿತ್ತು.
ಕಣ್ಣು ತೆರೆದ ಇಲಾಖೆ: ಮಾಹಿತಿಗಾಗಿ ಆಗ್ರಹಿಸಿ ಕಸರತ್ತು ನಡೆಸಿದ್ದ ಗಾಲಾ ಅವರಿಗೆ ಕೊನೆಗೂ ನಗರಾಭೀವೃದ್ಧಿ ಇಲಾಖೆ ಪತ್ರ ಬರೆದು ತಮ್ಮ ಬಳಿ ಮಾಹಿತಿ ಇಲ್ಲ. ಸ್ಥಳೀಯ ಸಂಸ್ಥೆಗಳಿಗೆ ಪತ್ರ ಬರೆಯಲಾಗಿದ್ದು, ಅದಕ್ಕಾಗಿ ಅವಕಾಶ ನೀಡುವಂತೆ ಕೋರಿತ್ತಲ್ಲದೆ ಈ ಕಾಯಿದೆ ಅನುಷ್ಠಾನದ ವಿಚಾರದಲ್ಲಿನ ಲೋಪಗಳ ಬಗ್ಗೆ ವಿಷಾದ ಸಹ ವ್ಯಕ್ತಪಡಿಸಿತ್ತು.
ಇನ್ನು ಮುಂದೆ ಪ್ರತಿವರ್ಷ ಮೇ 30 ರೊಳಗಾಗಿ ಈ ಮಾಹಿತಿ ಎಲ್ಲಾ ಸ್ಥಳೀಯ ಸಂಸ್ಥೆಗಳು ಸರ್ಕಾರಕ್ಕೆ ಸಲ್ಲಿಸುವಂತಹ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅದು ಪಾಲನೆಯಾಗುವಂತೆಯೂ ನೋಡಿಕೊಳ್ಳಲಾಗುತ್ತದೆ. ಈ ವಿಷಯ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ನಿರಂತರ ಪರಿಶೀಲನೆ, ಪರಿವೀಕ್ಷಣೆಗಳನ್ನು ನಡೆಸಲಾಗುತ್ತದೆ. ಇಂತಹ ಲೋಪಗಳು ಪುನರಾವರ್ತನೆಯಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ನಗರಾಭೀವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ದೀಪಕ ಗಾಲಾರಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಈಚೆಗೆ ಮೈಸೂರಿನಲ್ಲಿ ನಡೆದ ಮಾಹಿತಿ ಹಕ್ಕು ಅಧಿನಿಯಮ ಅನುಷ್ಠಾನದ ದಕ್ಷಿಣ ಭಾರತ ಪ್ರಾದೇಶಿಕ ಕಾರ್ಯಾಗಾರದಲ್ಲಿ ಈ ಯಶೋಗಾಥೆ ಸರ್ವರ ಮೆಚ್ಚುಗೆ ಗಳಿಸಿದ್ದಲ್ಲದೆ 5000 ಬಹುಮಾನ ಗಿಟ್ಟಿಸಿದೆ. ಈ ಹಣವನ್ನು ದೀಪಕ ಗಾಲಾ ಹೈ-ಕ ಪರಿಸರ ಜಾಗೃತಿ- ಸಂರಕ್ಷಣೆ ಸಂಘದ ಚಟುವಟಿಕೆಗಳಿಗೇ ನೀಡಿದ್ದು ವಿಶೇಷ.
ಸಮುದಾಯದ ಪ್ರಗತಿ ಗಮನದಲ್ಲಿರಲಿ
ಮಾಹಿತಿ ಹಕ್ಕು ಅಧಿನಿಯಮ ಬಳಸುವವರು ಸಮುದಾಯದ ಹಿನ್ನೆಲೆ ಪ್ರಧಾನವಾಗಿಟ್ಟುಕೊಂಡರೆ ಚೆಂದ. ಹಸಿರು ವನಸಿರಿಗೆ ಪೂರಕವಾಗುವ ಕಾಯಿದೆಯೇ ಅನುಷ್ಠಾನಗೊಳ್ಳದ ಸಂಗತಿ ಬೇಸರ ತಂದಾಗ ಮಾಹಿತಿ ಹಕ್ಕು ಮೊರೆ ಹೋದೆ. ಆಗ ಸರ್ಕಾರ ಕಾಯಿದೆ ಅನುಷ್ಠಾನದಲ್ಲಿ ತುಂಬ ಅಲಕ್ಷತನ ತೋರಿದ್ದು ಬಯಲಿಗೆ ಬಿತ್ತಲ್ಲದೆ, ಕೊನೆಗೆ ತನ್ನ ತಪ್ಪಿನ ಅರಿವಾಗಿ ಸದರಿ ವಿಷಯ ಗಂಭೀರವಾಗಿಯೂ ಪರಿಗಣಿಸುವ ವಾಗ್ದಾನ ಮಾಡಿತು. ಮಾಹಿತಿ ಹಕ್ಕು ಕಾರ್ಯಕರ್ತನಾಗಿ ನನಗೆ ಈ ಪ್ರಸಂಗ ತುಂಬ ಖುಷಿ ನೀಡಿದೆ.
 -ದೀಪಕ ಗಾಲಾ, ಮಾಹಿತಿ ಹಕ್ಕು ಕಾರ್ಯಕರ್ತ
ಹೈ-ಕ ಪರಿಸರ ಜಾಗೃತಿ ಸಂರಕ್ಷಣೆ ಸಂಘದ ಅಧ್ಯಕ್ಷರು, ಗುಲ್ಬರ್ಗ



-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement