'ಕನ್ನಡ ಭಾಷೆ ಬದುಕನ್ನು ಕಟ್ಟಿಕೊಡುತ್ತದೆ'
ಗುರುಮಠಕಲ್: ಕನ್ನಡನಾಡಿಗೆ ಹಿರಿದಾದ ಇತಿಹಾಸ ಭವ್ಯ ಪರಂಪರೆಯಿದೆ. ಕನ್ನಡಭಾಷೆ ಬದುಕನ್ನು ಕಟ್ಟಿಕೊಡುತ್ತದೆ ಎಂದು ನುಡಿ ಸಿರಿ ಜಿಲ್ಲಾ ಘಟಕದ ಉಪಾಧ್ಯಕ್ಷ ವಿಶ್ವನಾಥ ಶಿರವಾರ ನುಡಿದರು.
ಸಗರನಾಡು ಸೇವಾ ಪ್ರತಿಷ್ಠಾನದ ವತಿಯಿಂದ ಗುರುಮಠಕಲ್ನ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ, ಸಾಹಿತಿ ಮಾಹಿತಿ ಕನ್ನಡದ ಜಾಗೃತಿ ಸಾಪ್ತಾಹಿಕ ಸರಣಿ ಮಾಲಿಕೆ- 5, ಅಡಿ ಎಂ. ಗೋಪಾಲಕೃಷ್ಣ ಅಡಿಗರ ಕುರಿತು ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿ ಮಾತನಾಡಿದರು. ಆದಿ ಕವಿ ಪಂಪನಿಂದ ಹಿಡಿದು ರಾಷ್ಟ್ರಕವಿ ಕುವೆಂಪು ಪ್ರಸ್ತುತ ಕವಿ ಚಂಪನವರೆಗೆ ಕನ್ನಡ ಸಾರಸ್ವತ ಲೋಕಕ್ಕೆ ಅನೇಕ ಜನ ಕವಿ ಪುಂಗವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆ ಸಾಲಿನಲ್ಲಿ ನವೋದಯ ಕವಿಗಳ ಕೊಡುಗೆ ಕೂಡ ಮಹತ್ತರದ್ದು ಎಂದರು.
ಬಾಲ್ಯದಿಂದಲೇ ರಚನೆ: ಅಡಿಗರ ಕುರಿತು ಉಪನ್ಯಾಸ ನೀಡಿದ ಸಾಹಿತಿ ಅಶೋಕ ಚೌದರಿ ಮಾತನಾಡಿ, ಪುರೋಹಿತ ಮನೆತನಕ್ಕೆ ಸೇರಿದ ಅಡಿಗರು ಬಾಲ್ಯದಿಂದಲೇ ಸಂಸ್ಕೃತ ಶ್ಲೋಕ ಹಾಗೂ ಕನ್ನಡ ದೇಶ ಭಕ್ತಿಗೀತೆಗಳನ್ನು ರಚಿಸುತ್ತಿದ್ದರು.
ಯಕ್ಷಗಾನ ಅಚ್ಚುಮೆಚ್ಚು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಯಕ್ಷಗಾನ ಕಲೆ ಇವರ ಅಚ್ಚುಮೆಚ್ಚಿನ ಹವ್ಯಾಸವಾಗಿತ್ತು. ವೃತ್ತಿಜೀವನದಲ್ಲಿ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಕಾರ್ಯನಿರ್ವಹಿಸಿ ಸಾಕ್ಷಿ ಎಂಬ ಪತ್ರಿಕೆಯ ಸಂಪಾದಕರಾಗಿಯೂ ಕೂಡ ಕರ್ತವ್ಯ ನಿರ್ವಹಿಸಿದರು.
ಇವರ ವರ್ಧಮಾನ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಧ್ಯಪ್ರದೇಶ ಸರ್ಕಾರ ಕಬೀರ ಸನ್ಮಾನ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಲಭಿಸಿವೆ ಎಂದರು.
ಮುಖ್ಯ ಅತಿಥಿಗಳಾಗಿ ಪಂಚ ಜಿಲ್ಲಾ ಜನಪರ ಹೋರಾಟ ಸಮಿತಿಯ ಅಧ್ಯಕ್ಷ ದೇವರಾಜ ವರಕನಳ್ಳಿ, ಬಸವಶ್ರೀ ಸಂಸ್ಥೆಯ ಅಧ್ಯಕ್ಷ ಬಸವರೆಡ್ಡಿ ಎಂ.ಟಿ. ಹಳ್ಳಿ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಖಾಸಾಮಠದ ಶಾಂತವೀರ ಶ್ರೀ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಮುಖ್ಯಗುರು ಎಸ್.ಎಂ. ಭೂತಾಳ ಅಧ್ಯಕ್ಷತೆ ವಹಿಸಿದ್ದರು.