ಜನಪದ ಕಲೆ ಬೆಳೆಸಿರಿ: ವಗ್ಗನೋರ್
ಶಹಾಪುರ: ನಮ್ಮ ಸಂಸ್ಕೃತಿ, ಹಳೆಯ ತಲೆಮಾರಿನ ಪರಂಪರೆಯ ರಕ್ಷಣೆಯ ಮುಖ್ಯ ಭಾಗವಾಗಿರುವ ಜನಪದ ಕಲೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಮುಖ್ಯ ಕರ್ತವ್ಯ ಎಂದು ಮುಖಂಡ ಬಸವರಾಜ ವಗ್ಗನೋರ್ ತಿಳಿಸಿದರು.
ಪಟ್ಟಣದ ಹಳೇಪೇಟೆಯ ಜ್ಞಾನಗಂಗೋತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿನ ವಿಶೇಷ ಘಟಕ ಯೋಜನೆಯಡಿಯಲ್ಲಿ ಜನಪದ ಕಲಾವಿದೆ ಲಕ್ಷ್ಮೀಬಾಯಿ ರೇವಲ್ ಬಾಲನಾಗಮ್ಮನಕಥೆ, ಬುರ್ರಕಥೆ ಆಯೋಜಿಸಿದ್ದ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲಾವಿದೆ ಲಕ್ಷ್ಮೀಬಾಯಿ ರೇವಲ್ ತನ್ನ ಸಮೂಹದ ಸ್ತ್ರೀಯರ ಹಾಡಿನೊಂದಿಗೆ ಬಾಲನಾಗಮ್ಮನಳ ಕಥೆಯನ್ನು ಕಣ್ಣಿಗೆ ಕಟ್ಟುವ ಹಾಗೆ ತಿಳಿಸಿದರು. ಜನಪದ ರೀತಿಯಲ್ಲಿ ಸ್ತ್ರೀಯರಿಗೆ ಇರುವ ಮೌಲ್ಯಗಳು ತ್ಯಾಗ, ಬಲಿದಾನ, ಸಹಗಮನ, ಪಾತಿವ್ರತಕ್ಕೆ ಸಂಬಂಧಿಸಿದಂತೆ ಹಲವಾರು ನಿದರ್ಶನಗಳನ್ನು ಜನಪದ ಶೈಲಿಯಲ್ಲಿ ಹೇಳುವ ಮೂಲಕ ಗಮನ ಸೆಳೆದರು. ವಾಮನಾಚಾರ್ಯ, ರಾಮಕೃಷ್ಣ, ಮಧ್ವಾಚಾರ್ಯ, ಕೊನೆರಾಚಾರ್ಯ, ಸೇತುರಾವ, ಜನಪದ ಕಲಾವಿದರಾದ ದೇವಮ್ಮ ಇತರಿದ್ದರು.
ಎರಡನೇ ವಾರ್ಡ್‌ನಲ್ಲಿ ಶೌಚಾಲಯ ಸಮಸ್ಯೆ
ಶಹಾಪುರ: ಪಟ್ಟಣದ ವಾರ್ಡ್ ಸಂಖ್ಯೆ 2ರಲ್ಲಿ ದೇವಿನಗರ, ಬುದ್ಧನಗರ ವೆಂಬ ದೊಡ್ಡ ಬಡಾವಣೆಗಳಿದ್ದು ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯವಿಲ್ಲದೆ ತೊಂದರೆ ಪಡುವಂತಾಗಿದೆ.
ಪುರಸಭೆಯ ಗಮನಕ್ಕೆ ತಂದರೂ ನಿರ್ಲಕ್ಷ್ಯವಹಿಸಿದ್ದಾರೆಂದು ಕಾಂಗ್ರೆಸ್ ಯುವ ಮುಖಂಡ ಅಪ್ಪಣ್ಣ ಆರೋಪಿಸಿದ್ದಾರೆ. ಪುರಸಭೆಯ ಗಮನಕ್ಕಿದ್ದರೂ ಕೇವಲ ಶೌಚಾಲಯಕ್ಕಾಗಿ ನಿವೇಶನ ಗುರುತಿಸುವ ಕೆಲಸದ ನೆಪದಲ್ಲೆ ಕಾಲಹರಣ ಮಾಡುತ್ತಿದ್ದಾರೆ ಎಂದಿದ್ದಾರೆ.
--