ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜ್ಞಾನಿ, ಭಜಕರ ಭವ- ಭಯ ನಿವಾರಕ ಜಿತಾಮಿತ್ರರು

Lingaraj Badiger
Updated On : 31 Dec 2013, 11:13 am

ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಕೊನೆಯಂಚಿನ ಗ್ರಾಮ ಶಿವಪುರ ಸಮೀಪ ಕೃಷ್ಣಾ- ಭೀಮಾ ಸಂಗಮದ ಜಿತಾಮಿತ್ರರ ನಡುಗಡ್ಡೆಯಲ್ಲಿ ರುದ್ರಾಂಶ ಸಂಭೂತರಾದ ಜಿತಾಮಿತ್ರತೀರ್ಥರ ಆರಾಧನಾ ಮಹೋತ್ಸವದ ಮಧ್ಯಾರಾಧನೆ ಜ.1ರ ಎಳ್ಳ ಅಮಾವಾಸ್ಯೆಯಂದು ನಡೆಯಲಿದ್ದು, ಹತ್ತು ಹಲವು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ.
ಶಿವಪುರದ ಶಾನುಭೋಗರ ಮನೆತನದಲ್ಲಿ ಜನಸಿದ ಜಿತಾಮಿತ್ರರ ಪೂರ್ವಾಶ್ರಮದ ಹೆಸರು ಅನಂತಪ್ಪ. ಚಿಕ್ಕಂದಿನಲ್ಲೇ ತಂದೆ- ತಾಯಿಗಳನ್ನು ಕಳೆದುಕೊಂಡಿದ್ದ ಅವರು ಅಕ್ಕನ ಮನೆಯಲ್ಲಿರುತ್ತಾರೆ. ಒಮ್ಮೆ ವೈಷ್ಣವ ಪೀಠಾಧಿಪತಿ ವಿಭುದೇಂದ್ರತೀರ್ಥರ ದರ್ಶನಕ್ಕೆ ನಿಂತ ಸಂದರ್ಭದಲ್ಲಿ ಕೊರಳಲ್ಲಿನ ಜನಿವಾರ ಮಾಯವಾಗಿತ್ತು. ಇದನ್ನು ಗಮನಿಸಿದ ಗುರುಗಳು ಮತ್ತೊಂದು ಜನಿವಾರ ನೀಡಿ ದಿನಾಲು ಸಂಧ್ಯಾವಂದನೆ ಮಾಡಿ ಸಾಲಿಗ್ರಾಮಕ್ಕೆ ಅಭಿಷೇಕ, ನೈವೇದ್ಯ ಮಾಡಿ ಉಣಿಸಬೇಕೆಂದು ತಿಳಿಸುತ್ತಾರೆ.
ಶಿಲೆಗೆ ಉಣಿಸಿದ ಅನಂತಪ್ಪ: ಗುರುಗಳ ಮಾತನ್ನು ಪಾಲಿಸಿದ ಅನಂತಪ್ಪ ಶ್ರದ್ಧಾ ಭಕ್ತಿಯಿಂದ ಪೂಜಾಕಾರ್ಯದಲ್ಲಿ ತೊಡಗಿ ಸಾಲಿಗ್ರಾಮಕ್ಕೆ ನೈವೇದ್ಯ ಉಣ್ಣಲು ಹೇಳಿದರು. ಇಲ್ಲದಿದ್ದರೆ ತಲೆ ಒಡೆದುಕೊಳ್ಳುತ್ತೇನೆಂದು ಉದ್ಗಾರ ತೆಗೆದರು. ಸಾಲಿಗ್ರಾಮ ರೂಪಿ ಭಗವಂತನು(ಸಾಲಿಗ್ರಾಮ ಶಿಲೆಗೆ) ಬಾಯಿ ತೆರೆದು ನಿತ್ಯ ಉಣ್ಣಲು ಪ್ರಾರಂಭಿಸಿದನು. ಇದರಿಂದ ಆತನಲ್ಲಿಯ ಮೂಢಭಕ್ತಿಯು ಭಗವಂತನೆಡೆಗೆ ಆಚಲವಾಗಿ ಸಾಗಿತ್ತು.
ಆನಂತರ ಮತ್ತೊಮ್ಮೆ ಆಗಮಿಸಿದ ವಿಭುದೇಂದ್ರತೀರ್ಥರು, ಅನಂತಪ್ಪ ಸಾಲಿಗ್ರಾಮ ಶಿಲೆಗೆ ಉಣಿಸುವುದನ್ನು ಕಂಡು ಅಚ್ಚರಿಪಟ್ಟರು. ಪ್ರತಿಮಾಯಂತು ಸಾನಿಧ್ಯಂ ಅರ್ಚಕಸ್ಯ ತಪೋ ಬಲಾತ್ ಎನ್ನುವಂತೆ ಶ್ರೀಗಳು ಪ್ರಸನ್ನ ಚಿತ್ತರಾಗಿ ಅನಂತಪ್ಪನಿಗೆ ಜಿತಾಮಿತ್ರತೀರ್ಥರೆಂದು ನಾಮಕರಣ ಮಾಡಿದರು. ಗುರುಗಳ ಅನುಗ್ರಹ ಪಡೆದ ಜಿತಾಮಿತ್ರರು ಸಕಲ ಶಾಸ್ತ್ರ ಪ್ರವೀಣರಾಗಿ ಹಲವಾರು ಶಿಷ್ಯರಿಗೆ ನದಿಯ ದಡದ ಮೇಲೆ ಪಾಠ ಪ್ರವಚನ ಮಾಡುತ್ತಿದ್ದರು.
ಸಮಾರಾಧನೆ ಆಚರಣೆ: ಹೀಗೆ ಪಾಠ- ಪ್ರವಚನ ಮಾಡುತ್ತಿದ್ದಾಗ ಪರಮೇಶ್ವರನು ಜಂಗಮ ವೇಷಧಾರಿಯಾಗಿ ಬಂದು ಪಾಠ ಕೇಳುತ್ತಿದ್ದರು ಎಂಬ ಪ್ರತೀತಿ ಇದೆ. ಜಿತಾಮಿತ್ರರ ಗುರುಗಳ ವೃಂದಾವನಸ್ಥರಾದ ನಂತರ ಅವರ ಸಮಾರಾಧನೆಯನ್ನು ವೈಭವದಿಂದ ಆಚರಿಸುತ್ತಿದ್ದರು.
ಶಿವಪುರವೆಂಬ ನಿರ್ಜನ ಪ್ರದೇಶ ಸಂಗಮದ ನಡುಗಡ್ಡೆಯಲ್ಲಿ ಯಥಾ ಪ್ರಕಾರ ಪ್ರವಚನ ಮಾಡುತ್ತಿರುವ ಸಂದರ್ಭದಲ್ಲಿ ಕೃಷ್ಣೆ ಉಕ್ಕೇರಿ ಬಂದಾಗ ಶಿಷ್ಯರೆಲ್ಲ ದಿಕ್ಕಾಪಾಲಾಗಿ ಓಡಿದರು. ಆದರೆ ಜಿತಾಮಿತ್ರರು ಮಾತ್ರ ಧ್ಯಾನಾಸಕ್ತರಾಗಿ 7 ದಿನಗಳವರೆಗೆ ಕುಳಿತಿದ್ದು ನದಿಯ ಆರ್ಭಟ ಕಡಿಮೆಯಾದ ಮೇಲೆ ನೋಡಿದರೂ ಜಿತಾಮಿತ್ರರು ಧ್ಯಾನಾಸಕ್ತರಾಗಿಯೇ ಕುಳುತಿದ್ದರು.
ಜಿತಾಮಿತ್ರರ ಬದಲಿಗೆ ಮಣ್ಣಿನ ಗುಡ್ಡೆ ಪ್ರತ್ಯಕ್ಷ: ಮತ್ತೊಮ್ಮೆ ಧ್ಯಾನಾಸಕ್ತರಾಗಿ ಕುಳಿತ ಸಂದರ್ಭ ಪ್ರವಾಹ ಉಕ್ಕೇರಿ ಬಂದಾಗ ಜಿತಾಮಿತ್ರರು ಹೊರಗಡೆಯೂ ಕಾಣಲಿಲ್ಲ. ಪ್ರವಾಹ ಇಳಿದರೂ ನದಿಯಲ್ಲೂ ಕಾಣಲಿಲ್ಲ. ಬದಲಿಗೆ ನದಿಯ ಮಧ್ಯದಲ್ಲಿ ಮಣ್ಣಿನ ಗುಡ್ಡೆಯೊಂದು ಕಂಡಾಗ ಶಿಷ್ಯ ಮಂಡಳಿ ವಿಸ್ಮಯಗೊಂಡರು.
ನಂತರ ಸ್ವಪ್ನದಲ್ಲಿ ಗುರುಗಳ ಅಶರೀರವಾಣಿ ನುಡಿಯಂತೆ ಭೂಮಿಯ ಮೇಲೆ ನಮ್ಮ ಅವತಾರ ಮುಗಿದಿದೆ. ಇಂದಿನಿಂದ 2 ವರ್ಷದ ನಂತರ ಸ್ಥಳದಲ್ಲಿ ಗೋನದವೃಕ್ಷ ಕಾಣಿಸುತ್ತದೆ. ಆ ವೃಕ್ಷದ ರೂಪದಲ್ಲಿ ನಾವಿರುತ್ತೇವೆ ಎಂದು ನುಡಿದಂತೆ ಗೋನದ ವೃಕ್ಷ ಎರಡೂ ನದಿಯ ಮಧ್ಯದಲ್ಲಿ ಬೆಳೆದು ನಿಂತಿದೆ ಎಂದು ಹೇಳಲಾಗುತ್ತದೆ.
ಅದಕ್ಕಾಗಿ ಸಮಸ್ತ ಭಕ್ತ ಸಮೂಹ ಜಿತಾಮಿತ್ರತೀರ್ಥರ ಸನ್ನಿಧಾನದಲ್ಲಿ ಇಂದಿಗೂ ಶ್ರದ್ಧೆಯಿಂದ ಪೂಜೆಗೈಯುತ್ತಾರೆ. ಮಂತ್ರಾಲಯದ ಸ್ವಾಮಿಗಳು ನಡುಗಡ್ಡೆಯಲ್ಲಿರುವ ಜಿತಾಮಿತ್ರತೀರ್ಥರ ಪವಿತ್ರ ಸ್ಥಳವು ಪ್ರವಾಹಕ್ಕೆ ಯಾವುದೇ ರೀತಿ ತೊಂದರೆಯಾಗಬಾರದೆಂದು ಸರ್ವರ ಸಹಕಾರದಿಂದ ಕಾಂಪೌಂಡ್ ನಿರ್ಮಿಸಿ ಸೂಕ್ತ ರಕ್ಷಣೆ ಒದಗಿಸಿದ್ದಾರೆ.
ಇಷ್ಟಾರ್ಥ ದಯಪಾಲಿಸುತ್ತಾರೆ: ಆರಾಧನೆಗಾಗಿ ಬರುವ ಭಕ್ತ ಸಮೂಹಕ್ಕೆ ಶಿವಪುರದ ಜಿತಾಮಿತ್ರ ಗುರುಗಳ ಪೂರ್ವಾಶ್ರಮದ ವಂಶಿಕರು ಮತ್ತು ಇತರ ಭಕ್ತವೃಂದ ಎಲ್ಲ ರೀತಿಯ ಸಹಾಯ ಸಹಕಾರ ಕಲ್ಪಿಸಿದ್ದಾರೆ. ಜಿತಾಮಿತ್ರತೀರ್ಥರು ರುದ್ರಾಂಶ ಸಂಭೂತರಾಗಿ ಬೇಡಿದ ಇಷ್ಟಾರ್ಥಗಳನ್ನು ಇಂದಿನವರೆಗೂ ಭಕ್ತರಿಗೆ ದಯಪಾಲಿಸುತ್ತಿದ್ದಾರೆ ಎನ್ನುತ್ತಾರೆ ಬಿಜಾಪುರದ ಕೆ.ಕೆ. ಕುಲಕರ್ಣಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement