ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನೀರಾವರಿ ಫಲಾನುಭವಿಗಳು ರೈತರಲ್ಲ, ಎಂಜಿನಿಯರ್!

Lingaraj Badiger
Updated On : 31 Dec 2013, 11:12 am

ಕ.ಪ್ರ. ವಾರ್ತೆ, ಗುಲ್ಬರ್ಗ, ಡಿ.30
ಗುಲ್ಬರ್ಗ ಜಿಲ್ಲೆಯ ನೀರಾವರಿ ಯೋಜನೆಗಳಿಂದ ಯಾರಿಗೆ ಲಾಭ ರೈತರಿಗೋ- ಯೋಜನೆಗಳ ನಿರ್ವಹಣೆಯಲ್ಲಿರುವ ಅಧಿಕಾರಿಗಳಿಗೋ?
ಹೀಗೊಂದು ಸ್ವಾರಸ್ಯಕರ ಚರ್ಚೆಗೆ ಇಂದಿಲ್ಲಿ ಸೇರಿದ್ದ ಕರ್ನಾಟಕ ಪ್ರಗತಿ ಪರಿಶೀಲನೆಯ ತ್ರೈಮಾಸಿಕ ಸಭೆ ವೇದಿಕೆಯಾಯ್ತು. ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಜಿಲ್ಲೆಯ ನೀರಾವರಿ ಯೋಜನೆಗಳ ಕುರಿತಂತೆ ಚರ್ಚಿಸುವಾಗ ಕೆಲವು ಯೋಜನೆಗಳಿಗೆ ಕಾಯಕಲ್ಪ ನೀಡುವ ವಿಚಾರ ಪ್ರಸ್ತಾಪಿಸಿದರಲ್ಲದೆ ಇಂಜಿನಿಯರ್‌ಗಳಿಗೆ ತಕ್ಷಣ ಯೋಜನಾ ವರದಿ ಸಿದ್ಧಪಡಿಸುವಂತೆ ಸೂಚಿಸಿದರು.
ಹಣದ ಸದ್ವಿನಿಯೋಗ: ಈ ಹಂತದಲ್ಲಿ ತುಂಬ ಬೇಸರ ಹೊರಹಾಕಿದ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಯೋಜನೆಗಳಿಗೆ ಕಾಯಕಲ್ಪ ನೀಡುವುದಕ್ಕಿಂತ ಯೋಜನೆಯಲ್ಲಿರುವ ಕೆಲಸ ಮಾಡದ, ಲಂಚಬಾಕ ಅಧಿಕಾರಿಗಳನ್ನು ಎತ್ತಂಗಡಿ ಮಾಡುವ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಜೊತೆಗೇ ಯೋಜನೆಗೆ ಹಣ ಹಾಕುವುದಕ್ಕಿಂತ ಬಂದಿರುವ ಹಣದ ಸದ್ವಿನಿಯೋಗದ ವಿಚಾರ ಚರ್ಚಿಸಬೇಕಾಗಿದೆ ಎಂದಾಗ ಸಭೆಗೆ ಸಭೆಯೇ ಅವಾಕ್ಕಾಯ್ತು.
ಬೆಣ್ಣೆತೊರಾ, ಅಮರ್ಜಾ, ಮುಲ್ಲಾಮಾರಿ, ಭೀಮಾ ಏತ, ಗಂಡೋರಿ ನೀರಾವರಿ ಯೋಜನೆಗಳ ಮೇಲೆ ಬಹುಕೋಟಿ ರುಪಾಯಿ ವೆಚ್ಚವಾದರೂ ಇಂದಿಗೂ ರೈತರ ಹೊಲಗದ್ದೆ ಹಸಿಯಾಗಿಲ್ಲ. ಇವೆಲ್ಲ ಯೋಜನೆಗಳು ಕಡತಗಳಲ್ಲೇ ಗುರಿ ಸಾಧಿಸಿವೆಯೇ ಹೊರತು, ವಾಸ್ತವದಲ್ಲಿ ಎಲ್ಲವೂ ಶೂನ್ಯ, ಈ ಯೋಜನೆಗಳಲ್ಲಿರುವ ಜೆಇಯಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗಿರುವ ಲ್ಲರನ್ನು ಅದಲು ಬದಲು ಮಾಡಬೇಕು, ನಿಷ್ಠಾವಂತರನ್ನು ಇಲ್ಲಿಗೆ ಕರೆತಂದಾಗ ಮಾತ್ರ ಯೋಜನೆಗಳು ಮೇಲೇಳಬಹುದೇನೋ... ಎಂದು ಪ್ರಿಯಾಂಕ್ ಖರ್ಗೆ ಮಾತಿನ ಚಾಟಿ ಬೀಸಿದಾಗಲಂತೂ ಸಚಿವದ್ವಯರಾದಿಯಾಗಿ ಸಭೆಯಲ್ಲಿ ಹಾಜರಿದ್ದ ಸಹ ಶಾಸಕರು, ಜಿಪಂ ಅಧ್ಯಕ್ಷ- ಉಪಾಧ್ಯಕ್ಷರು, ಸದಸ್ಯರೆಲ್ಲರೂ ಬೆರಗು.
ಮರುಕ್ಷಣವೇ ಶಾಸಕ ಪ್ರಿಯಾಂಕ್ ಮಾತಿಗೆ ಪೂರಕವಾಗಿ ಮಾತನಾಡಿದ ಸಚಿವ ಡಾ. ಶರಣಪ್ರಕಾಶ ಯೋಜನೆಗಳ ಸದುಪಯೋಗವಾಗಬೇಕಾಗಿರುವುದು ನಿಜ. ಅಧಿಕಾರಿಗಳು ಈ ವಿಚಾರದಲ್ಲಿ ಗಂಭೀರವಾಗಬೇಕು ಎಂದರೆ, ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಇದು ತುಂಬ ಗಂಭೀರ ವಿಚಾರ ಎಂದು ಹೇಳುತ್ತ ರೈತರಿಗೆ ನೆರವಾಗದ ಯೋಜನೆಗಳಿಂದ ಪ್ರಯೋಜನವೇನು?ಕೇವಲ ಹಣ ವೆಚ್ಚವಾಗುವ ಯೋಜನೆಗಳಿಂದ ಲಾಭವೇ ಇಲ್ಲ. ಅಧಿಕಾರಿಗಳು ಶಾಸಕರಿಂದ ಕೇಳಿಬಂದಂತಹ ಅಭಿಪ್ರಾಯದ ಬಗ್ಗೆ ಎಚ್ಚರವಾಗಿರಬೇಕು ಎಂದರು.
ಬೆಣ್ಣೆತೊರಾ ಟೆಂಡರ್: ಬೆಣ್ಣೆತೊರಾ ಯೋಜನೆಯಲ್ಲಿ ಕಾಲುವೆ ದುರಸ್ಥಿಗಂದು 20 ಕೋಟಿ ರು ಹಣ ಬಂದಿದ್ದು ಈ ಪೈಕಿ ಎಡ- ಬಲ ದಂಡೆಯ ತಲಾ 7 ಕಿಮೀ ಉದ್ದದ ಕಾಲುವೆ ನವೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಬಲದಂಡೆ 6 ಕಿಮೀ ಕೆಲಸವಾಗಿದೆ. ಇಲ್ಲಿಯವರೆಗೂ ಅದೆಷ್ಟು ಕಿಮೀ ವರೆಗೂ ನೀರು ಹರಿದಿದೆ ಎಂಬುದಕ್ಕೆ ಇಲ್ಲಿ ಉತ್ತರವಿಲ್ಲ.
ಬೆಣ್ಣೆತೊರಾ, ಕೆಳದಂಡೆ ಮುಲ್ಲಾಮಾರಿ ಯೋಜನೆಗಳ ನವೀಕರಣಕ್ಕೆ ಯೋಜನೆ ಸಿದ್ಧಪಡಿಸುವುದಕ್ಕಿಂತ ಮೊದಲು ಅವುಗಳ ಆಡಳಿತ ವ್ಯವಸ್ಥೆಯಲ್ಲಿನ ದೋಷಗಳನ್ನು ಸರಿಪಡಿಸಬೇಕಾಗಿದೆ. ಇದಕ್ಕಾಗಿ ಕ್ರಮ ಕೈಗೊಳ್ಳಿ ಎಂದು ಶಾಸಕ ಪ್ರಿಯಾಂಕ್ ಸಭೆಯ ಗಮನ ಸೆಳೆದರು.
ಭೀಮಾ ನೀರಾವರಿ ಯೋಜನೆ ಗೋಳು: ರು. 588 ಕೋಟಿ ರು ವೆಚ್ಚದ ಅಫಜಲ್ಪುರ ತಾಲೂಕಿನ ಭೀಮಾ ಏತ ನೀರಾವರಿ ಯೋಜನೆಯಲ್ಲಿ ಇದುವರೆಗೂ ರು. 400ಕೋಟಿ ವೆಚ್ಚವಾಗಿದ್ದರೂ ರೈತರ ಹೊಲಗದ್ದೆಗೆ ಹರಿದ ನೀರು ಅಷ್ಟಕ್ಕಷ್ಟೆ. 24, 400 ಹೆಕ್ಟರ್ ನೀರಾವರಿಯಾಗಬೇಕಿರುವ ಈ ಯೋಜನೆಯಲ್ಲಿ 600 ರಿಂದ 1 ಸಾವಿರ ಹೆಕ್ಟರ್ ಮಾತ್ರ ನೀರಾವರಿಗೊಳಪಟ್ಟಿದೆ ಎಂಬುದು ಅಧಿಕಾರಿಗಳ ವಿವರಣೆ
ಹೊಲಗಾಲುವೆಗಳಾಗಿಲ್ಲ, ವಿತರಣಾ ಕಾಲುವೆಗಳಿಲ್ಲ, ಈಗಾಗಲೇ 2013- 14 ರಲ್ಲಿ ಯೋಜನೆಗೆ 192 ಕೋಟಿ ರು ಬಂದರೂ ಇಲ್ಲಿ ಯೋಜಿತ ರೂಪದಲ್ಲಿ ಕೆಲಸಗಳನ್ನು ಕೈಗೆತ್ತಿಕೊಂಡಿಲ್ಲ. ಹೀಗಾಗಿ ಈ ಯೋಜನೆ ರೈತರಿಗೆ ಪ್ರಯೋಜನವಾಗಿಲ್ಲ.
ಮೌನವಾದ ಅಧಿಕಾರಿಗಳು: ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ಮಾತನಾಡುತ್ತ ಮುಖ್ಯ ಕಾಲುವೆ ಕಾಮಗಾರಿ ಜೊತೆಗೇ ಹೊಲಗಾಲುವೆ, ವಿತರಣಾ ಕಾಲುವೆಗಳ ಕೆಲಸ ಯಾಕೆ ಕೈಗೆತ್ತಿಕೊಂಡಿಲ್ಲ ಎಂದು ಪ್ರಶ್ನಿಸಿದಾಗ ಅಧಿಕಾರಿಗಳು ಮೌನವಾದರು. ಏಕಕಾಲಕ್ಕೇ ಎಲ್ಲ ಕೆಲಸಗಳು ಪ್ಯಾಕೇಜ್ ರೂಪದಲ್ಲಿ ಮಾಡಿದ್ದರೆ ಇಷ್ಟೊತ್ತಿಗಾಗಲೇ ರೈತರ ಹೊಲಕ್ಕೆ ನೀರು ತಲುಪುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಯ್ತು.
ಗಂಡೋರಿ, ಲೋವರ ಮುಲ್ಲಾಮಾರಿ, ಅಮರ್ಜಾ ಯೋಜನೆಗಳಲ್ಲಿಯೂ ಇದೇ ರೀತಿಯ ಲೋಪದೋಷಗಳು ಸಭೆಯಲ್ಲಿ ಎತ್ತಿ ತೋರಿಸಿದ ಶಾಸಕರಾದ ಪ್ರಿಯಾಂಕ್ ಖರ್ಗೆ, ಬಿಆರ್ ಪಾಟೀಲ್, ಡಾ. ಜಾಧವ ಉಮೇಶ ಮೊದಲಾದವರು ಜಿಲ್ಲೆಯ ನೀರಾವರಿ ಯೋಜನೆಗಲಿಂದ ರೈತರಿಗೆ ಲಾಭವಾಗಿದ್ದಕ್ಕಿಂತ ಹೆಚ್ಚಿಗೆ ಅಧಿಕಾರಿಗಳಿಗೆ, ಇಂಜಿನಿಯರ್‌ಗಳಿಗೇ ಲಾಭವಾಗಿದೆ ಎಂದು ದೂರಿದರು.
ಅಮರ್ಜಾ ಯೋಜನೆಯ ಸಭೆಗೆ ಕಂದಾಯ, ಕೃಷಿ, ಜೆಸ್ಕಾಂ ಅಧಿಕಾರಿಗಳು ಬಂದಿರಲೇ ಇಲ್ಲ, ಕ್ರಮಕ್ಕೆ ಶಿಫಾರಸು ಮಾಡಿ ಎಂಬ ಶಾಸಕ ಬಿಆರ್ ಬಿಗಿ ಪಟ್ಟಿಗೆ ಮಣಿದ ಅಧಿಕಾರಿಗಳು ಕಾರಣ ಕೇಳುವ ನೋಟಿಸ್ ನೀಡುವುದಾಗಿ ಹೇಳಿದರು.
ಇನ್ನು ತ್ರೈಮಾಸಿಕ ಕೆಡಿಪಿ, ತಾಲೂಕು ಕೆಡೆಪಿ ಸಭೆಗಳಿಗೂ ಅಧಿಕಾರಿಗಳು ಬರುತ್ತಿಲ್ಲ ಎಂಬ ಶಾಸಕರ ದೂರನ್ನು ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಯಾರು ಸಭೆಗೆ ಸಕಾರಣವಿಲ್ಲದೆ ಗೈರು ಹಾಜರಾಗುವರೋ ಅಂತಹ ಅಧಿಕಾರಿಗಳ ವಿರುದ್ಧ ಬಿಗಿ ಕ್ರಮಕ್ಕೆ ಸೂಚಿಸಿದರಲ್ಲದೆ ಜಿಲ್ಲಾ ಹಂತದ ಅಧಿಕಾರಿಗಳು ಗೈರು ಹಾಜರಾದರೆ ಅಂತಹವರ ಮಾಹಿತಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೂ ಕಳುಹಿಸಲಾಗುತ್ತದೆ ಎಂದರು. ಶಾಸಕರು ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗಳಿಗೆ ಅಧಿಕಾರಿಗಳು ಗೈರು ಹಾಜರಿ ಆಗದೆ ಅಲ್ಲಿ ಹಾಜರಾಗಬೇಕು. ಅಭಿವೃದ್ಧಿ ವಿಚಾರಗಳ ಚರ್ಚೆಗೆ ನಡೆಯುವ ಸಭೆಗಳಿಗೆ ಅಧಿಕಾರಿಗಳು ಹೋಗದೆ ಪೂರಕ ಸಿಬ್ಬಂದಿಗೆ ಕಳುಹಿಸುವುದು ಸರಿಯಲ್ಲ. ಇಂತಹ ಬೆಳವಣಿಗೆಗಳು ಗಮನಕ್ಕೆ ಬಂದಲ್ಲಿ ತಕ್ಷಣ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಜಿಪಂ ಸಿಇಓ ಅವರಿಗೆ ಇಸ್ಲಾಂ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement