ವಿಠ್ಠಲ್ ಹೇರೂರ್ ಕಟ್ಟೆ ಧ್ವಂಸ: ಇಟಗಾದಲ್ಲಿ ಪ್ರತಿಭಟನೆ
ಜೇವರ್ಗಿ: ಇತ್ತೀಚೆಗೆ ನಿಧನರಾದ ಕೋಲಿ ಸಮಾಜದ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ವಿಠ್ಠಲ್ ಹೇರೂರ್ ಅವರ ಹೆಸರಿನಲ್ಲಿ ತಾಲೂಕಿನ ಇಟಗಾ ಕ್ರಾಸ್ ಬಳಿ ನಿರ್ಮಿಸಲಾಗಿದ್ದ ಕಟ್ಟೆಯನ್ನು ಕಿಡಿಗೇಡಿಗಳು ಭಾನುವಾರ ರಾತ್ರಿ ಧ್ವಂಸಗೊಳಿಸಿರುವುದನ್ನು ಖಂಡಿಸಿ ಹೇರೂರ್ ಅಭಿಮಾನಿಗಳು ಹಾಗೂ ಕೂಲಿ ಸಮಾಜದ ಮುಖಂಡರು ಇಟಗಾ ಕ್ರಾಸ್ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು. ವಿಠ್ಠಲ್ ಹೇರೂರ್ ಹೆಸರಿನಲ್ಲಿ ನಿರ್ಮಿಸಲಾಗಿದ್ದ ಕಟ್ಟೆಯನ್ನು ಧ್ವಂಸಗೊಳಿಸಿ ಹೇರೂರ್ ಭಾವಚಿತ್ರವನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಈ ದುಷ್ಕೃತ್ಯವೆಸಗಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಎಎಸ್‌ಪಿ ಸಂತೋಷಬಾಬು ಕೆ., ತಹಸೀಲ್ದಾರ್ ಮಲ್ಲಿಕಾರ್ಜುನರೆಡ್ಡಿ ಪಾಟೀಲ್, ಜೇವರ್ಗಿ ಸರ್ಕಲ್ ಇನ್ಸಪೆಕ್ಟರ್ ಬಾಸು ಚವ್ಹಾಣ, ನೆಲೋಗಿ ಪಿಎಸ್‌ಐ ಕೆ.ಜಿ.ಜಗದೀಶ, ಗಾಣಗಾಪುರ ಪಿಎಸ್‌ಐ ನಿಂಗಪ್ಪ, ಯಡ್ರಾಮಿ ಪಿಎಸ್‌ಐ ಮಹಾಂತೇಶ ಪಾಟೀಲ್ ಸೇರಿದಂತೆ ಸಿಬ್ಬಂದಿಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.
ದೂರು: ವಿಠ್ಠಲ್ ಹೇರೂರ್ ಕಟ್ಟೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದುವರೆಗೂ ಯಾರನ್ನು ಬಂಧಿಸಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೇಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಡಿಎಆರ್ ತುಕಡಿ ನಿಯೋಜಿಸಲಾಗಿದೆ. ಚಂದ್ರಕಾಂತ ಅವಧೂತ ನೀಡಿದ ದೂರಿನನ್ವಯ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.