ತೊಗರಿ ಮಂಡಳಿಗೆ ರು. 100 ಕೋಟಿ ನೀಡಿ
ಕ.ಪ್ರ. ವಾರ್ತೆ ಗುಲ್ಬರ್ಗ ಡಿ. 31
ಇಲ್ಲಿನ ತೊಗರಿ ಮಂಡಳಿಗೆ ಬಡ್ಡಿರಹಿತ ರು. 100 ಕೋಟಿ ಅನುದಾನ ರಾಜ್ಯ ಸರ್ಕಾರ ನೀಡುವುದರ ಜತೆಗೆ ಪ್ರತಿ ಹೋಬಳಿಯಲ್ಲಿ ಖರೀದಿ ಕೇಂದ್ರ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ, ವಿವಿಧ ರೈತ ಪರ ಸಂಘಟನೆಗಳು ಜ. 9 ರಂದು ಹೈ.ಕ. ಬಂದ್ಗೆ ಕರೆ ನೀಡಿವೆ.
ಬುಧವಾರ ರೈತರ ನಿಯೋಗವೊಂದು ಬೆಂಗಳೂರಿಗೆ ತೆರಳಿ ಅಲ್ಲಿ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಸಚಿವ ಟಿ. ವಿ. ಜಯಚಂದ್ರ ಅವರೊಂದಿಗೆ ಚರ್ಚೆ ನಡೆಸಿ ಗುರುವಾರ ನಡೆಯುವ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳದಿದ್ದರೆ ಜ. 9 ರಂದು ಹೈ. ಕ. ಬಂದ್ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿವೆ.
ಹೋರಾಟ: ತೊಗರಿ ಬೆಳೆಗಾರರ ಈ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ವಿಭಿನ್ನ ರೀತಿಯ ಹೋರಾಟ ಮಾಡಿದರೂ, ಸರ್ಕಾರಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ರೈತ ಮುಖಂಡ ಬಸವರಾಜ ಇಂಗಿನ್ ಮತ್ತು ಮೌಲಾ ಮುಲ್ಲಾ ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಾ.ಎ.ಎಸ್. ಸ್ವಾಮಿನಾಥನ್ ಶಿಫಾರಸನ್ನು ಅನುಷ್ಠಾನಕ್ಕೆ ತರಬೇಕು. ತೊಗರಿ, ಕಡಲೆ, ಉದ್ದು, ಹೆಸರು ಕ್ವಿಂಟಲಿಗೆ ರು. 6450 ಬೆಲೆ ನಿಗದಿಪಡಿಸಬೇಕು. ಕೂಡಲೇ ಮಾರುಕಟ್ಟೆ ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು.
ತೊಗರಿ ಹಾಗೂ ಇತರೆ ಬೇಳೆ ಕಾಳುಗಳನ್ನು ವಿದೇಶಗಳಿಂದ ತೆರಿಗೆ ರಹಿತವಾಗಿ ಆಮದು ಆಗುವುದನ್ನು ತಡೆಯಲು ಆಮದು ಸುಂಕ ಶೇ. 30ರಷ್ಟು ಹಾಕಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಬೇಳೆಕಾಳುಗಳು ರಾಷ್ಟ್ರದಲ್ಲಿ ರಾಶಿಯಾದ ನಾಲ್ಕಾರು ತಿಂಗಳು ನಂತರ ಅವಶ್ಯವಿದ್ದಲ್ಲಿ ಮಾತ್ರ ಆಮದಿಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ವಿದೇಶಿ ನೀತಿ: ಬೇಳೆಕಾಳುಗಳ ಮತ್ತು ತೊಗರಿ ಅರೆಯುವ ಕಾರ್ಖಾನೆಗಳು 300ಕ್ಕೂ ಹೆಚ್ಚು ಇದ್ದು, ದಾಲ್ ಕ್ಲಸ್ಟರ್ ಮಂಜೂರಾತಿ ನೀಡಬೇಕು. ಸಾವಿರ ಕೋಟಿ ರು. ಅನುದಾನ ನೀಡಬೇಕು. 1996 ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತ ಹಾಗೂ ಸ್ಥಳೀಯ ವ್ಯಾಪಾರಿಗಳ ವಿರೋಧಿಯಾಗಿದ್ದು, ವಿದೇಶಿ ಬಹುರಾಷ್ಟ್ರೀಯ ಕಂಪನಿಗಳ ಪರವಾಗಿದ್ದು, ಅದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ವಿದೇಶಿ ನೇರ ಬಂಡವಾಳದಿಂದ ರೈತರಿಗೂ, ಜನಸಾಮಾನ್ಯರಿಗೂ ತೊಂದರೆಯಾಗಲಿದ್ದು, ಅದನ್ನು ಕೈ ಬಿಡಬೇಕು. ಇತ್ತೀಚೆಗೆ ತೊಗರಿ ಹೂವು ಉದುರಿ ಬೆಳೆ ನಾಶವಾಗಿದೆ. ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಗಳು ಜಂಟಿಯಾಗಿ ಸರ್ವೆ ನಡೆಸಿ ನಷ್ಟಕ್ಕೆ 15 ದಿನದೊಳಗಾಗಿ ಸರ್ಕಾರ ಪರಿಹಾರ ಎಕರೆಗೆ ರು. 15 ಸಾವಿರ ಮತ್ತು ಬೆಳೆ ವಿಮೆ ಸಹ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಉಮಾಕಾಂತ ನಿಗ್ಗುಡಗಿ, ಬಸವರಾಜ ಹಡಗಿಲ್ ಇತರರು ಉಪಸ್ಥಿತರಿದ್ದರು.