ವಾರಾಬಂದಿ ಶುರು; ಕಾಲುವೆಗೆ 5 ದಿನ ನೀರು ಸ್ಥಗಿತ
ಹುಣಸಗಿ: ಜ.1ರಿಂದ ಕಾಲುವೆಯಲ್ಲಿ ಐದು ದಿನಗಳವರೆಗೆ ವಾರಾಬಂದಿ ಪದ್ಧತಿಯಂತೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗುವುದೆಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ನಿಗಮದ ಹಿರಿಯ ಅಧಿಕಾರಿಗಳ ಸೂಚನೆಯಂತೆ ಮಂಗಳವಾರ ಮಧ್ಯ ರಾತ್ರಿಯಿಂದಲೇ ಮುಖ್ಯ ಕಾಲುವೆ ಸೇರಿದಂತೆ ಇತರ ವಿತರಣಾ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗುವುದೆಂದು ಕೃಷ್ಣಾಭಾಗ್ಯ ಜಲ ನಿಗಮದ ನಾರಾಯಣಪುರ ಅಣೆಕಟ್ಟು ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರಾದ ರಂಗರಾವ್ ತಿಳಿಸಿದ್ದಾರೆ.
ನ.18ರಂದು ಆಲಮಟ್ಟಿಯಲ್ಲಿನ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ನಡೆದ ಕೃಷ್ಣಾ ಅಚ್ಚಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ವಾರಾಬಂದಿ ಮೂಲಕ ಮಾರ್ಚ್ ಹತ್ತರವರೆಗೆ ನೀರು ಹರಿಸಲು ನಿಶ್ಚಯಿಸಲಾಗಿದ್ದು ಸ್ಮರಿಸಬಹುದು. ರೈತರು ನೀರನ್ನು ವ್ಯರ್ಥ ಪೋಲು ಮಾಡದೆ ಮಿತವಾಗಿ ಬಳಸುತ್ತಾ, ವಾರಾಬಂದಿಗೆ ಕೃಷ್ಣಾಭಾಗ್ಯ ಜಲ ನಿಗಮದ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ರಂಗರಾಮ್ ಮನವಿ ಮಾಡಿದ್ದಾರೆ.
ಲಾರಿ ಹರಿದು 18 ಕುರಿ ಸಾವು
ಜೇವರ್ಗಿ: ತಾಲೂಕಿನ ಚಿಗರಳ್ಳಿ ಕ್ರಾಸ್ ಬಳಿ ಲಾರಿ ಹರಿದು 18 ಕುರಿಗಳು ಮೃತಪಟ್ಟಿದ್ದು, 16 ಕುರಿಗಳಿಗೆ ಗಂಭೀರ ಗಾಯಗಳಾದ ಘಟನೆ ಮಂಗಳವಾರ ಬೆಳಗಿನ ಜಾವ ಸಂಭವಿಸಿದೆ. ಕುರಿಗಳ ಹಿಂಡು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಗರಿಹಾಳ ಗ್ರಾಮದ ಹಣಮಂತರಾಯ ಬಸವರಾಜ ಉಡಿಗೇರ್ ಎಂಬುವರಿಗೆ ಸೇರಿವೆ. ಬೆಳಗಿನ ಜಾವ ಕುರಿಗಳ ಹಿಂಡು ಜೇವರ್ಗಿ ಕಡೆಗೆ ಹೊರಟ್ಟಿದ್ದಾಗ ಜೇವರ್ಗಿ ಕಡೆಯಿಂದ ಶಹಾಪುರ ಕಡೆಗೆ ಲಾರಿಯೊಂದು ಹಿಂಡಿನ ಮೇಲೆ ಹರಿದು ದುರ್ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಜೇವರ್ಗಿ ಸರ್ಕಲ್ ಇನ್ಸ್ಪೆಕ್ಟರ್ ಬಾಸು ಚವ್ಹಾಣ, ಎಎಸ್ಐ ಮಹ್ಮದ್ ನಿಸ್ಸಾರುದ್ದೀನ್, ಸಿಬ್ಬಂದಿ ಭೇಟಿ ನೀಡಿ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಲಾರಿ ಚಾಲಕ ನಾಪತ್ತೆಯಾಗಿದ್ದಾನೆ.
ಕೆಲ ಗ್ರಾಮಸ್ಥರಿಂದ ಶಾಲೆ ಮುಖ್ಯಸ್ಥರಿಗೆ ಬೆದರಿಕೆ
ಶಹಾಪುರ: ತಾಲೂಕಿನ ರಸ್ತಾಪುರ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಂಬಂಧಿಸಿದ ಗೋಡೆಯ ಕಿಟಕಿ ಬಾಗಿಲು ಧ್ವಂಸಗೊಳಿಸಿ ಅದಕ್ಕೆ ಹೊಂದಿಸಿಕೊಂಡೆ ಆಕ್ರಮವಾಗಿ ಮನೆಗಳನ್ನು ನಿರ್ಮಿಸುತ್ತಿದ್ದು, ಈ ಕುರಿತು ವಿಚಾರಿಸಿದರೆ ಶಾಲೆಯ ಸಿಬ್ಬಂದಿಯನ್ನು ಹೆದರಿಸುತ್ತಿದ್ದಾರೆಂದು ಮುಖ್ಯಗುರುಗಳು ಎಸ್ಡಿಎಂಸಿಯವರು ಮತ್ತು ಸಮಸ್ತ ಶಿಕ್ಷಕ ಸಿಬ್ಬಂದಿ ಸೇರಿ ಜಿಲ್ಲಾಧಿಕಾರಿಗೆ ದೂರೊಂದನ್ನು ಸಲ್ಲಿಸಿದ್ದಾರೆ. ಶಾಲಾ ನಿವೇಶನದಲ್ಲಿಯೆ ಆಕ್ರಮವಾಗಿ ಮನೆಗಳನ್ನು ಕಟ್ಟುವುದು ಮತ್ತು ಸದ್ಯ ಇರುವ ಕಿಟಕಿ, ಬಾಗಿಲುಗಳನ್ನು ಮುರಿಯುವುದು, ಶಾಲಾ ಕಂಪೌಂಡ್ಗೆ ಹತ್ತಿಸಿಕೊಂಡೆ ನಳದ ಪೈಪ್ಗಳನ್ನು ಜೋಡಿಸಿ ಶಾಲಾ ಬುನಾದಿಗಳಿಗೆ ತೊಂದರೆ ಮಾಡಿದ್ದಲ್ಲದೇ ಶಾಲಾ ಶಿಕ್ಷಕರನ್ನೆ ಹೆದರಿಸುವಂಥ ಪ್ರವೃತ್ತಿಗೆ ಇಳಿದಿದ್ದು, ತೊಂದರೆಯಾಗುತ್ತಿದೆ. ತಕ್ಷಣವೇ ಈ ಕುರಿತು ಪರಿಶೀಲಿಸಿ ಆಕ್ರಮವಾಗಿ ಮನೆ ನಿರ್ಮಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಾಲಾಯವರು ಡಿಸಿಗೆ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಮನವಿ ಮಾಡಿದ್ದಾರೆ.
ಪ್ರೋತ್ಸಾಹಧನಕ್ಕೆ ಅಭಿನಂದನೆ
ಗುರುಮಠಕಲ್: ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ, ಅವರು ನಿರ್ವಹಿಸುವ ಕೆಲಮೊಂದು ಮೂಲ ಚಟುವಟಿಕೆಗಳ ಆಧಾರದ ಮೇಲೆ ಪ್ರತಿಯೊಬ್ಬ ಕಾರ್ಯಕರ್ತೆಗೂ ಪ್ರತಿ ತಿಂಗಳು ಕನಿಷ್ಠ 1000 ಪ್ರೋತ್ಸಾಹಧನ ನಿಗದಿಪಡಿಸಿರುವುದನ್ನು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಹಾರ್ಥಿಕವಾಗಿ ಸ್ವಾಗತಿಸುತ್ತದೆಂದು ಅಧ್ಯಕ್ಷ ಕೆ.ಸೋಮಶೇಖರ್ ತಿಳಿಸಿದ್ದಾರೆ. ಸರಿಸಮ ಪ್ರೋತ್ಸಾಹಧನ ಮುಂದುವರೆಯುವುದಲ್ಲದೆ, ಅವುಗಳ ಜೊತೆಗೆ ಈ ಕಾರ್ಯನಿರ್ವಹಣೆ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಹೋರಾಟದ ಫಲವಾಗಿ ದೊರಕಿದ ವಿಜಯಕ್ಕೆ ಸಂಘವು ಸರ್ಕಾರದ ಕ್ರಮವನ್ನು ಸ್ವಾಗತಿಸಿ ಅಭಿನಂದಿಸುತ್ತದೆ ಎಂದರು.
ಗೋಶಾಲೆ ಆರಂಭ
ಗುರುಮಠಕಲ್: ಇಲ್ಲಿಗೆ ಸಮೀಪದ ನಾಜರಪುರ ಗ್ರಾಮದಲ್ಲಿ ದಿವಾಂಗತ ಮನೋಜ ಕುಮಾರ ಅವರ ಹೆಸರಿನಲ್ಲಿ ಗೋಶಾಲೆಯನ್ನು ಇಂದು ಪ್ರಾರಂಭಿಸಲಾಯಿತು. ಸತ್ಯಾತ್ಮ ತೀರ್ಥ ಉತ್ತರಾದಿ ಮಠ ಗೋಶಾಲೆಯನ್ನು ಉದ್ಘಾಟಿಸಿದರು ಪ್ರಾರಂಭೋತ್ಸವದಲ್ಲಿ ಕೀಶನರಾವ ಚಂಡರಕಿ, ಧಿರಜ ಚಂಡರಕಿ, ಅನಂದಚಾರ್ಯ, ಗಂಟಿ ರಾಮಚಾರ್ಯ, ದಿವಾನ, ಶೇಶಗೀರಾಚರ್ಯ, ಲಕ್ಷ್ಮೀ ರಡ್ಡಿ, ಯಾದವ ರಡ್ಡಿ ಇತರರು ಇದ್ದರು.