ವ್ಯಾಯಾಮದಿಂದ ಆರೋಗ್ಯ: ಅಹಮದ್
ಯಾದಗಿರಿ: ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ದಿನನಿತ್ಯ ವ್ಯಾಯಾಮ ಮಾಡುವ ಜೊತೆಗೆ ಕಾಲಕಾಲಕ್ಕೆ ಕ್ರಿಡಾಕೂಟಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಈಶಾನ್ಯ ವಲಯ ಪೊಲೀಸ್ ಮಹಾನಿರ್ದೇಶಕರಾದ ಮಹಮ್ಮದ್ ಜಜೀರ್ ಅಹಮದ್ ಹೇಳಿದ್ದಾರೆ.
ಕಳೆದ 3 ದಿನಗಳಿಂದ ನಡೆಯುತ್ತಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯತಿಥಿಗಳಾಗಿ ಮಾತನಾಡಿದ ಅವರು ಪೊಲೀಸ್ ಸಿಬ್ಬಂದಿ ಸದಾ ಚಟುವಟಿಕೆಯಿಂದ ಇರಬೇಕು. ಇದಕ್ಕಾಗಿ ದಿನ ವ್ಯಾಯಾಮ ಮಾಡುವ ಪ್ರವೃತ್ತಿ ಬೆಳಸಿಕೊಳ್ಳಬೇಕು. ಅದೇರೀತಿ ಕ್ರಿಡಾಕೂಟದಲ್ಲಿಯು ಭಾಗವಹಿಸಿದಲ್ಲಿ ಅವರ ಆರೋಗ್ಯಕಾಪಾಡಿಕೊಳ್ಳಲು ಸಹಕಾರಿ ಎಂದರು.
3 ದಿನಗಳು ನಡೆದ ಈ ಕ್ರೀಡಾಕೂಟಗಳಲ್ಲಿ ಯಾದಗಿರಿ ಡಿಎಆರ್ ತಂಡವು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆಯಿತು. ಅದರಂತೆ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿಯನ್ನು ಪೊಲೀಸ್ ಸುರೇಶ್ ಕದಮ್ ಪಡೆದರು. ಇಂದು ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್, ಎಸ್.ಪಿ. ಲೋಕಾಯುಕ್ತ ಹಣುಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ವಂಶಿಕೃಷ್ಣ ಉಪಸ್ಥಿತರಿದ್ದರು. ಪ್ರಭಾರ ಡಿವೈಎಸ್ಪಿ ಚೌಧರಿ ಸ್ವಾಗತಿಸಿದರು.