ರಾಜ್ಯದ ತೊಗರಿಗೆ ಬೆಂಬೆಲೆಗೆ ರೈತ ಸಂಘಟನೆ ಸ್ವಾಗತ
ಗುಲ್ಬರ್ಗ: ರಾಜ್ಯ ಸರ್ಕಾರ ಪ್ರತಿ ಕ್ವಿಂಟಲ್ ತೊಗರಿಗೆ 4500ಗಳಿಗೆ ಖರೀದಿಸಲು ನಿರ್ಧರಿಸಿರುವ ಕ್ರಮವನ್ನು ಸ್ವಾಗತಿಸಿರುವ ವಿವಿಧ ರೈತಪರ ಸಂಘಟನೆಗಳು, ಕೇವಲ ನಿರ್ಣಯ ಕೈಗೊಂಡರೆ ಸಾಲದು ಕೂಡಲೇ ತೊಗರಿ ಬೆಳೆಗಾರರ ಎಲ್ಲ ತೊಗರಿ ಖದೀರಿಸಬೇಕೆಂದು ಒತ್ತಾಯಿಸಿವೆ.
ತೊಗರಿಯ 3850 ಬೆಂಬಲ ಬೆಲೆಗೆ ರಾಜ್ಯ ಸರ್ಕಾರ 650 ಪ್ರೋತ್ಸಾಹಧನ ನೀಡಿ ಪ್ರತಿ ಕ್ವಿಂಟಲ್ ತೊಗರಿಯನ್ನು 4500 ಬೆಲೆಗೆ ಖರೀದಿರಿಸಲು ಮುಂದಾಗಿರುವುದು ರೈತಪರ ಸಂಘಟನೆಗಳ ಹೋರಾಟಕ್ಕೆ ಸಿಕ್ಕ ಫಲ ಎಂದು ಅಭಿಪ್ರಾಯಪಟ್ಟಿವೆ.
ಕೇಂದ್ರ ಸರ್ಕಾರ ಈ ಹಿಂದೆ ನೀಡುತ್ತಿದ್ದ 500 ಪ್ರೋತ್ಸಾಹಧನ ನೀಡಿ 5 ಸಾವಿರಕ್ಕೆ ತೊಗರಿ ಖದೀರಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ, ಅಖಿಲ ಭಾರತ ಕಿಸಾನ ಸಭಾದ ಮೌಲಾ ಮುಲ್ಲಾ, ಹೈ.ಕ. ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕರಿಸಿದ್ದಪ್ಪ ಪಾಟೀಲ್ ಹರಸೂರ, ಮಾಜಿ ಸಚಿವ ಎಸ್.ಕೆ. ಕಾಂತಾ, ಮಾಜಿ ಶಾಸಕ ಬಿ.ಆರ್. ಪಾಟೀಲ್ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ರಾಜ್ಯ ಇದೀಗ 4500 ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಕೇಂದ್ರ ಈ ಹಿಂದೆ ನೀಡುತ್ತಿದ್ದ 500 ಪ್ರೋತ್ಸಾಹಧನ ಹೆಚ್ಚಿಸಿದರೆ ರೈತರ ಪ್ರತಿ ಕ್ವಿಂಟಲ್ ತೊಗರಿ 5 ಸಾವಿರ ಬೆಲೆಗೆ ಖರೀದಿಸಿದಂತಾಗುತ್ತದೆ. ಆದರೆ, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಭಾಗದ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ಧರ್ಮಸಿಂಗ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಇದೀಗ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
ಪ್ರತಿ ಎಕರೆಗೆ 3 ಕ್ವಿಂಟಲ್ಗಳಂತೆ ಕೇವಲ 15 ಕ್ವಿಂಟಲ್ ತೊಗರಿ ಖದೀರಿಸಲಾಗುವುದು ಎಂದು ರಾಜ್ಯ ಸರ್ಕಾರದ ನಿಯಮ ಸಡಿಲಿಸಿ ಪ್ರತಿಯೊಬ್ಬ ರೈತರಿಂದ 25 ಕ್ವಿಂಟಲ್ ತೊಗರಿ ಖರೀದಿಸುವ ವ್ಯವಸ್ಥೆ ಮಾಡಬೇಕು, ಪ್ರತಿ ಹೋಬಳಿಗೊಂದು ತೊಗರಿ ಖರೀದಿ ಕೇಂದ್ರ ತೆರೆಯಬೇಕೆಂದು ಆಗ್ರಹಿಸಿದರು.
ವಿದೇಶಗಳಿಂದ ಆಮದಾಗುವ ತೊಗರಿ ಮೇಲೆ ಶೇ. 50ರಷ್ಟು ಆಮದು ಸುಂಕ ವಿಧಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು, ತೊಗರಿ ಮಂಡಳಿಗೆ 100 ಕೋಟಿ ಹಣ ಒದಗಿಸಬೇಕು. ಬೇಳೆಕಾಳು ಸಂಶೋಧನಾ ಕೇಂದ್ರ ಗುಲ್ಬರ್ಗದಲ್ಲಿ ತೆರೆಯಬೇಕು, ನಾಫೆಡ್ ಪ್ರಾದೇಶಿಕ ಕಚೇರಿಯನ್ನು ಗುಲ್ಬರ್ಗದಲ್ಲಿ ಸ್ಥಾಪನೆ ಮಾಡಬೇಕು, ತೊಗರಿ ಮಂಡಳಿಯ ಆಡಳಿತವನ್ನು ಕೆಓಎಫ್ ಮತ್ತು ಕೆಎಂಎಫ್ ಮಾದರಿಯಲ್ಲಿ ಪ್ರಜಾಪ್ರಭುತ್ವೀಕರಿಸಬೇಕೆಂದು ಒತ್ತಾಯಿಸಿದರು.