ಎಕರೆಗೆ 11 ಲಕ್ಷ, ಒಬ್ಬರಿಗೆ ಉದ್ಯೋಗಕ್ಕೆ ರೈತರ ಆಗ್ರಹ
ಗುಲ್ಬರ್ಗ/ಶಹಾಬಾದ್: ವಾಡಿಯ ಎಸಿಸಿ ಕಾರ್ಖಾನೆ ಖರೀದಿಸುತ್ತಿರುವ 1,400 ಎಕರೆ ಭೂಮಿಯನ್ನು ರೈತರೊಂದಿಗೆ ಸಭೆ ನಡೆಸದೆ. ಅತ್ಯಂತ ಕಡಿಮೆ ಬೆಲೆಗೆ ಖರೀದಿಸುತ್ತಿರುವುದನ್ನು ವಿರೋಧಿಸಿರುವ ರೈತರು ಪ್ರತಿ ಎಕರೆಗೆ 11 ಲಕ್ಷ ಒಬ್ಬರಿಗೆ ಉದ್ಯೋಗ ನೀಡಬೇಕೆಂದು ಭೂಮಿ ಕಳೆದುಕೊಳ್ಳುತ್ತಿರುವ ರೈತರು ಆಗ್ರಹಿಸಿದರು.
ಇತ್ತೀಚೆಗೆ ಇಂಗಳಿಗೆ ಗ್ರಾಮದ ದರ್ಗದಲ್ಲಿ ರೈತರ ಭೂ ಹಿತರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಎರಡು ಗ್ರಾಮಗಳ ರೈತರ ಸಭೆಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಸಾಬಣ್ಣಾ ಗುಡುಬಾ ಮಾತನಾಡಿದರು. ಈಗ ಖರೀದಿಸುತ್ತಿರುವ ಜಮೀನಿಗೆ ಪ್ರತಿ ಎಕರೆಗೆ 11 ಲಕ್ಷ, ಒಬ್ಬರಿಗೆ ಉದ್ಯೋಗ ನೀಡಬೇಕೆಂದು ಆಗ್ರಹಿಸಿ ಈ ಬಗ್ಗೆ ಸ್ಪಂದಿಸದಿದ್ದರೆ ಎಸಿಸಿ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ನಿರ್ಣಯ ಕೈಗೊಳ್ಳಲಾಯಿತು. ಗ್ರಾಮದ ಮುಖಂಡರಾದ ಅಣ್ಣಾರಾವ ಪ್ರೊ.ಪಾಟೀಲ, ರಾಚಣ್ಣಗೌಡ ಮಾಲಿ ಪಾಟೀಲ, ಶರಣಗೌಡ ಬಿರಾದಾರ, ವೀರಂತಯ್ಯಾ ಸ್ವಾಮಿ ಹೋರಾಟ ಸಮಿತಿ ಉಪಾಧ್ಯಕ್ಷ ಮರಿಬಸಯ್ಯ ಸ್ವಾಮಿ ಸ್ಥಾವರಮಠ, ಬಸವರಾಜ ಅಳ್ಳೊಳ್ಳಿ, ಚಂದ್ರಕಾಂತ ಹೂಗಾರ, ಕಾಶಿನಾಥ ಚನ್ನಗುಂಡ, ಪಾಲ್ಗೊಂಡಿದ್ದರು.
ಕಬ್ಬಿಗೆ ಬೆಂಕಿ ತಗುಲಿ ನಷ್ಟ
ಆಳಂದ: ತಾಲೂಕಿನ ಹೆಬಳಿ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಕಟಾವಿಗೆ ಬಂದ ಸುಮಾರು ಎರಡು ಎಕರೆ ಕಬ್ಬು ಸುಟ್ಟು ಕರಕಲಾದ ಘಟನೆ ನಡೆದಿದೆ. ಗ್ರಾಮದ ದಯಾನಂದ ಕಳಸಪ್ಪಾ ಶೇರಿಕಾರ ಅವರಿಗೆ ಸೇರಿದ ಸರ್ವೆ ನಂಬರ್ 371/2 ಜಮೀನಿನಲ್ಲಿನ ಕಬ್ಬು ಸುಟ್ಟು ಕರಕಲಾಗಿ ಸುಮಾರು 2 ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಮೊದಲೆ ಸಂಕಷ್ಟದಲ್ಲಿದ್ದ ರೈತ ಕುಟುಂಬಕ್ಕೆ ಕಬ್ಬು ಬೆಂಕಿಗಾಹುತಿಯಾದ ಹಿನ್ನೆಲೆಯಲ್ಲಿ ಬರಸಿಡಿಲು ಬಡಿದಂತಾಗಿದೆ. ಸ್ಥಳಕ್ಕೆ ಗ್ರಾಮಲೇಖ ಪಾಲಕ ಲಕ್ಷ್ಮಣರಾವ್ ತಲಾಕುಣಿ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.