ಹೈ-ಕ ಹೋರಾಟ ಸಮಿತಿ ರೂವಾರಿ ವೈಜನಾಥ ಪಾಟೀಲ ಜನಾಂದೋಲನಕ್ಕೆ ಸಂದ ಜಯ
ಜೇವರ್ಗಿ: ಸಂವಿಧಾನದ ಕಲಂ 371(ಜೆ) ಫಲ ಹೈ-ಕ ನೆಲಕ್ಕೆ ದಕ್ಕುವಂತಾಗಲು ಈ ಭಾಗದಲ್ಲಿ ನಡೆದ ಮೂರು ದಶಕಗಳ ಹೋರಾಟವೇ ಕಾರಣ. ಇದು ಹೋರಾಟದ ಸಿಹಿಫಲ ಎಂದು ಹೈ-ಕ ಹೋರಾಟ ಸಮಿತಿ ರೂವಾರಿ ವೈಜನಾಥ ಪಾಟೀಲ್ ಹೇಳಿದ್ದಾರೆ.
ಜೇವರ್ಗಿಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಕಳೆದ ಹಲವು ದಶಕಗಳ ಹಿಂದೆ ಹೈ- ಕ ಭಾಗಕ್ಕೆ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸಲು ಮುಂದಾದಾಗ ಜೇವರ್ಗಿಯಲ್ಲಿಯೇ ಜನತೆಯನ್ನು ಹಿಡಿದು ತಂದು ತಿದ್ದುಪಡಿ ಕುರಿತು ಜನರಿಗೆ ತಿಳಿಸಬೇಕಿತ್ತು ಎಂದರು.
ಆಗಿನ ಹೋರಾಟ ವೈಜನಾಥ ಪಾಟೀಲರಿಗೆ ನೆಲವೇ ವೇದಿಕೆಯಾಗಿತ್ತು. ವೈಜನಾಥ ಪಾಟೀಲರ ಹೋರಾಟ ಕ್ರಮೇಣ ಹೊಸ ತಿರುವು ಪಡೆದು ಇಂದು ಹೈ- ಕ ಭಾಗದ ಜನರಿಗೆ ಅವರ ಪರಿಶ್ರಮದ ಫಲದಿಂದ ಕೇಂದ್ರ ಸರ್ಕಾರ ತಿದ್ದುಪಡಿಗೆ ಸಮ್ಮತಿ ಸೂಚಿಸಿತು ಎಂದು ತಿಳಿಸಿದರು.
ಪ್ರತ್ಯೇಕ ಸ್ಥಾನಮಾನ ಕಲ್ಪಿಸುವ ಸಂಕಲ್ಪವಿತ್ತು: ಈ ಭಾಗಕ್ಕೆ ಪ್ರತ್ಯೇಕ ಸ್ಥಾನಮಾನ ಕಲ್ಪಿಸುವ ಸಂಕಲ್ಪ ತಮ್ಮದಾಗಿತ್ತು. ಆ ನಿಟ್ಟಿನಲ್ಲಿ ಅಂದಿನಿಂದ ನಡೆದ ಹೋರಾಟದ ಪ್ರತಿಫಲ ಇಂದು ನಮ್ಮ ಭಾಗಕ್ಕೆ ಲಭ್ಯವಾಗಿದೆ. ಇದರಿಂದ ಈ ಭಾಗಕ್ಕೆ ಶೈಕ್ಷಣಿಕ, ಆರ್ಥಿಕ, ಉದ್ಯೋಗ, ಅಭಿವೃದ್ಧಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ದೊರೆಯಲಿದೆ ಎಂದರು.
ಸುಲಫಲ ಮಠದ ಮಹಾಂತ ಸ್ವಾಮಿಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೊನ್ನದ ಶಿವಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಈಶಾನ್ಯ ವಲಯ ಶಿಕ್ಷಕರ ವೇದಿಕೆಯ ಅಧ್ಯಕ್ಷ ಪ್ರೊ. ಎಂ.ಬಿ. ಅಂಬಲಗಿ 371(ಜೆ)ನೇ ಕಲಂನಲ್ಲಿ ಅಡಕವಾಗಿರುವ ಅಂಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕೃತಜ್ಞತೆ: ತಾಲೂಕಿನ ಯುವ ಗೆಳೆಯರ ಬಳಗ ಕಲಂ 371(ಜೆ)ರ ರೂವಾರಿ ವೈಜನಾಥ ಪಾಟೀಲರಿಗೆ ಸಾವಿರಾರು ಸಂಖ್ಯೆಯ ಯುವ ಸಮೂಹದಿಂದ ಅದ್ಧೂರಿ ಮೆರವಣಿಗೆ ನಡೆಸಿ ಸನ್ಮಾನಿಸುವುದರ ಮೂಲಕ ಕೃತಜ್ಞತೆ ಸಲ್ಲಿಸಿದರು.