'ವೃತ್ತಿ ಗೌರವ ನೈತಿಕ ಮಟ್ಟ ಹೆಚ್ಚಿಸುತ್ತದೆ'
ಶಹಾಪುರ: ವೃತ್ತಿ ಗೌರವ, ಪ್ರಾಮಾಣಿಕ ಸ್ಪಂದನೆ ಪ್ರತಿಯೊಬ್ಬರ ನೈತಿಕ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಬಡ್ತಿ ಹೊಂದಿದ ತಹಸೀಲ್ದಾರ್ ಎಂ.ರಾಚಪ್ಪ ಅವರು ಹೇಳಿದರು.
ಸ್ಥಳೀಯ ತಹಸೀಲ್ದಾರ್ ಕಾರ್ಯಾಲಯ ಮತ್ತು ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಬೀಳ್ಕೊಡುಗೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿದರು.
ಆಡಳಿತಾವಧಿಯಲ್ಲಿ ಸಿಬ್ಬಂದಿ ಸಹಕಾರ, ವಿಶ್ವಾಸದೊಂದಿಗೆ ಜನಪರವಾಗಿ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಯಿತು. ಸರ್ಕಾರದ ಆಡಳಿತದ ಪಾರದರ್ಶಕತೆ ಮತ್ತು ಯೋಜನೆಗಳು ಸರ್ವರಿಗೂ ತಲುಪಿಸುವಲ್ಲಿ ಸಾಧ್ಯವಿರುವಷ್ಟು ಶ್ರಮಿಸಿದ ತೃಪ್ತಿಯಿದೆ. ಅದರ ಶ್ರೇಯಸ್ಸು ಕೇವಲ ತಹಸೀಲ್ದಾರರಿಗಲ್ಲದೆ ಸಮಸ್ತ ಸಿಬ್ಬಂದಿಗೂ ಸಲ್ಲುತ್ತದೆ. ಶಹಾಪುರದಲ್ಲಿ ಸಲ್ಲಿಸಿದ ಸೇವೆ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದರೊಂದಿಗೆ ಮುಂದಿನ ದಿನಗಳಲ್ಲಿ ಜವಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ಖಜಾನೆ ಅಧಿಕಾರಿ ದೋರೆಪ್ಪ ಕರಿಗೇರ, ನಿವೃತ್ತ ಅಧಿಕಾರಿಗಳಾದ ಶಿವರಾಜ ಘಂಟಿ, ಸತ್ಯನಾರಾಯಣ ಎಕ್ಕೇಲಿ, ರೇಖು ಚವ್ಹಾಣ, ಶಿವಶರಣಪ್ಪ ಕಟ್ಟೋಳಿ, ರಾಜಶೇಖರ, ಕೆ.ಎಚ್. ಪರಿವಾರ, ಆರೀಫ್ ಉಲ್ಲಾಹುಸೇನ್ ಇದ್ದರು.