ಗ್ರಾಮೀಣಾಭಿವೃದ್ಧಿ: ಜನಪ್ರತಿನಿಧಿಗಳ ಪಾತ್ರ ಮುಖ್ಯ
ಯಾದಗಿರಿ: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಪಾತ್ರ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದಲ್ಲಿ ಮಾತ್ರ ಬದಲಾವಣೆ ಕಾಣಬಹುದು ಎಂದು ವೀರೇಶ್ವರ ದಾಸಬಾಳ ಮಠದ ವೀರೇಶ ಸ್ವಾಮೀಜಿ ನುಡಿದರು. ಸೋಮವಾರ ನಗರದ ಹೊರವಲಯದಲ್ಲಿರುವ ದಾಸಬಾಳ ಮಠದಲ್ಲಿ ಮುಂಡರಗಿ ಗ್ರಾಪಂ ನೂತನ ಅಧ್ಯಕ್ಷೆ ಗೌರಮ್ಮ ಹಾಗೂ ಸದಸ್ಯರನ್ನು ಸನ್ಮಾನಿಸಿ ಆಶೀರ್ವಚನ ನೀಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಹಲವಾರು ದಶಕಗಳು ಕಳೆದರೂ ಹಳ್ಳಿಗಳಲ್ಲಿ ಅನೇಕ ಜ್ವಲಂತ ಸಮಸ್ಯೆಗಳು ಜನತೆಯನ್ನು ಕಾಡುತ್ತಿವೆ. ಜನಪ್ರತಿನಿಧಿಗಳು ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿ ಬಡ ಜನತೆಗೆ ಸ್ಪಂದಿಸಿದಲ್ಲಿ ಮಾತ್ರ ತಮ್ಮ ಹೆಸರು ಶಾಸ್ವತವಾಗಿ ಉಳಿಯಲು ಸಾಧ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಂಡರಗಿ ಗ್ರಾಪಂ ಅಧ್ಯಕ್ಷೆ ಗೌರಮ್ಮ ಕಾವಲಿ, ಸದಸ್ಯರಾದ ಸುಭಾಶ ಗುತ್ತೆದಾರ, ಮಹಾಲಿಂಗಪ್ಪ, ಪರ್ವತರಡ್ಡಿ, ನಿವೃತ್ತ ತಹಸೀಲ್ದಾರ್ ಶರಣಪ್ಪ ನಾಗೂರೆ, ಮಲ್ಲಣಗೌಡ ಮಾಲಿಪಾಟೀಲ್, ಡಾ. ಬಸವರಾಜ ಹೂಗಾರ, ಭೀಮುನಾಯಕ ಇದ್ದರು.
ನಕಲಿ ಜಾತಿ ಪ್ರಮಾಣ ಪತ್ರ, ದಸಂಸ ಆರೋಪ
ಯಾದಗಿರಿ: ಶಹಾಪುರ ತಾಲೂಕಿನ ಬೆಂಡೆಬೆಂಬಳಿ ಗ್ರಾಪಂ ಅಧ್ಯಕ್ಷ ಸಂಗಪ್ಪಗೌಡ ಅವರು ನಕಲಿ ಜಾತಿ ಪ್ರಮಾಣ ಪತ್ರ ಸೃಷ್ಟಿಸಿ ತಮ್ಮ ಪತ್ನಿ ಹೆಸರಿನಲ್ಲಿ ಇಂದಿರಾ ಅವಾಸ್ ಯೋಜನೆಯಡಿ ಮನೆ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಪಂ ಸಿಇಒ ಅವರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ. ಸಂಗಪ್ಪಗೌಡ ಅವರ ಪತ್ನಿ ಲಿಂಗಾಯಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ ಪರಿಶಿಷ್ಟ ಜಾತಿ ಹೆಸರಿನಲ್ಲಿ ಮನೆ ಮಂಜೂರಾತಿ ಮಾಡಿಸಿಕೊಂಡಿದ್ದಾರೆ. ಸುಳ್ಳು ಜಾತಿ ಪ್ರಮಾಣ ಪತ್ರ ಸೃಷ್ಟಿಸಿ ಮನೆ ಪಡೆದುಕೊಂಡಿರುವ ಇವರ ಮೇಲೆ ಪ್ರಕರಣ ದಾಖಲಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದಲ್ಲದೇ ಗ್ರಾಪಂ ಸದಸ್ಯೆ ಪಾರ್ವತಿ ಮತ್ತು ಬಸಯ್ಯ ಚನ್ನಯ್ಯ ಅವರು ಕೂಡ ನಕಲಿ ಜಾತಿ ಪ್ರಮಾಣ ಪತ್ರ ಸೃಷ್ಟಿಸಿ ಮನೆಯನ್ನು ಮಂಜೂರಾತಿ ಮಾಡಿಸಿಕೊಂಡಿದ್ದಾರೆ. ಇದಲ್ಲದೇ ತಮ್ಮ ಹೆಸರಿಗೆ ನೋಂದಣಿ ಕೂಡ ಮಾಡಿಸಿಕೊಂಡಿದ್ದಾರೆ ಎಂದು ಆಪಾದಿಸಿದ್ದಾರೆ. ಗ್ರಾಪಂ ಅಧ್ಯಕ್ಷ ಸಂಗಪ್ಪಗೌಡ ಮತ್ತು ಸದಸ್ಯೆ ಪಾರ್ವತಿ ಅವರ ಸದಸ್ಯತ್ವ ರದ್ದುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇದಲ್ಲದೇ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಪ್ರಕರಣ ದಾಖಲಿಸುವಂತೆ ವಿನಂತಿಸಿದ್ದಾರೆ. ಒಂದು ವೇಳೆ ಕ್ರಮ ಕೈಗೊಳ್ಳಲು ನಿರ್ಲಕ್ಷಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ನಿಂಗಣ್ಣ ಕದರಾಪುರ, ಎನ್.ಎಂ. ಘಂಟಿ, ಶರಣಪ್ಪ ನರಬೋಳಿ ಇದ್ದರು.