ಕಲ್ಲಿದ್ದಲು ಸಾಗಾಣಿಕೆ ಸಮಸ್ಯೆ; ಸ್ವಚ್ಛತೆಗೆ ಅಭಿರಾಮ ಆದೇಶ
ಸೇಡಂ: ತಾಲೂಕಿನ ಕುರಕುಂಟಾ ಗ್ರಾಮದಿಂದ ವಿಕಟ್ ಸಾಗರ ಕಂಪನಿಗೆ ಸರಬರಾಜು ಆಗುತ್ತಿರುವ ಕಲ್ಲಿದ್ದಲು ಸಾಗಾಣಿಕೆ ಕುರಿತು ನೂತನ ಸಹಾಯಕ ಆಯುಕ್ತ ಅಭಿರಾಮ ಸಂಕರ ಅವರಿಂದ ಸಭೆ ಕರೆಯಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಕರ ಅವರು, ಕಲ್ಲಿದ್ದಲನ್ನು ಖಾಲಿ ಮಾಡುವ ಸಮಯದಲ್ಲಿ ಧೂಳು ಹೊರಹೋಗದಂತೆ ರಕ್ಷಾ ಕವಚ ಅಳವಡಿಸಬೇಕು, ಪ್ರತಿ ಮೂರು ಗಂಟೆಗೆ ಒಂದು ಬಾರಿ ನೀರು ಸಿಂಪಡಿಸಬೇಕು ಎಂದರು. ಈ ಗ್ರಾಮದ ರೈಲು ನಿಲ್ದಾಣದಿಂದ ಚೆಟ್ಟಿನಾಡು ಸಿಮೆಂಟ್ಸ್ ಮತ್ತು ವಿಕಟ್ ಸಾಗರ ಕಂಪನಿಗಳಿಗೆ ಕಲ್ಲಿದ್ದಲು ಸಾಗಾಣಿಕೆಯಾಗುತ್ತಿದ್ದು, ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡುವಂತೆ ಗುತ್ತಿಗೆದಾರರಿಗೆ ಆದೇಶಿಸಿದರು. ವಿಕಟ್ ಸಾಗರ ಕಂಪನಿ ವ್ಯವಸ್ಥಾಪಕ ಕೋದಂಡರಾಮರೆಡ್ಡಿ ಮಾತನಾಡಿ, ಕೇವಲ ನಾಲ್ಕು ತಿಂಗಳವರೆಗೆ ಈ ನಿಲ್ದಾಣದಿಂದ ಕಲ್ಲಿದ್ದಲ್ಲು ಸಾಗಾಣಿಕೆ ನಡೆಯಲಿದ್ದು, ನಂತರದ ದಿನಗಳಲ್ಲಿ ಕಂಪನಿ ಆವರಣಕ್ಕೆ ನೇರವಾಗಿ ರೇಲ್ವೆ ಹಳಿ ಹಾಕಿಕೊಳ್ಳಲಾಗುತ್ತಿದೆ. ಆದ್ದರಿಂದ ರಕ್ಷಾ ಕವಚ ಅಳವಡಿಸಲಾಗುವುದು, ಸ್ವಚ್ಛತೆಗಾಗಿ ಕಾರ್ಮಿಕರನ್ನು ನೇಮಿಸಿಕೊಳ್ಳುವಂತೆ ಸೂಚಿಸಲಾಗುವುದು ಮತ್ತು ರಸ್ತೆಗೆ ನೀರು ಸಿಂಪಡಿಸಲಾಗುವುದು ಎಂದು ಒಪ್ಪಿಕೊಂಡರು.
ಸಭೆಯಲ್ಲಿ ತಹಸೀಲ್ದಾರ್ ಪ್ರಕಾಶ ಕುದುರಿ, ಮೋಟಾರ್ ವಾಹನ ನಿರೀಕ್ಷಕ ಈರಣ್ಣ ಬೋರಾಬಂಡಾ, ಲೋಕೋಪಯೋಗಿ ಅಧಿಕಾರಿಗಳು, ಸುಭಾಷ, ಗ್ರಾಪಂ ಉಪಾಧ್ಯಕ್ಷ ಸಂತೋಷ ಕಲಾಲ, ಕಾಂಗ್ರೆಸ್ ಮುಖಂಡ ಅಬ್ದುಲ್ ಗಫೂರ್, ಎಂಆರ್‌ಎಲ್ ಟ್ರಾನ್ಸ್‌ಪೋರ್ಟ್ ಮಾಲೀಕ ಪಾಶಾ, ಪ್ರೆಸ್‌ಕ್ಲಬ್ ಅಧ್ಯಕ್ಷ ಜಗನ್ನಾಥ ತರನಳ್ಳಿ ಇದ್ದರು.
ಅಕ್ಕಿ ದಾಸ್ತಾನು ಪರಿಶೀಲನೆಗೆ 3 ತಂಡ
ಗುಲ್ಬರ್ಗ: ಜಿಲ್ಲೆಯಲ್ಲಿ ನಿಗದಿಪಡಿಸಿದ ಅಕ್ಕಿ ದಾಸ್ತಾನು ಸಂಗ್ರಹಕ್ಕಿಂತ ಹೆಚ್ಚಿದ್ದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಿ, ಅಗತ್ಯ ದಾಖಲೆಗಳೊಂದಿಗೆ ಮುಂದಿನ ಕ್ರಮ ಕೈಗೊಳ್ಳಲು 3 ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ್ ತಿಳಿಸಿದ್ದಾರೆ. ಅಧಿಸೂಚನೆ ಅನುಸಾರ ಎಲ್ಲ ರೈಸ್ ಮಿಲ್‌ಗಳು ಹಾಗೂ ಸಗಟು ವ್ಯಾಪಾರಿಗಳ ವ್ಯಾಪಾರ ಸ್ಥಳಗಳು, ಗೋದಾಮುಗಳು ಹಾಗೂ ಸಹಾಯಕ ಆಯುಕ್ತರನ್ನೊಳಗೊಂಡ ತನಿಖಾ ತಂಡಗಳನ್ನು ರಚಿಸುವಂತೆ ಸರ್ಕಾರ ಆದೇಶಿಸಿದೆ.