ಜನಕಲ್ಯಾಣ ಯೋಜನೆ ಅನುಷ್ಠಾನ: ಆಳಂದ ಹಿಂದೆ
ಗುಲ್ಬರ್ಗ: ಆಳಂದದ ಆಯಾ ಗ್ರಾಪಂ ಮಟ್ಟದಲ್ಲಿ ಗುರಿ ಹೊಂದಲಾದ ಉದ್ಯೋಗ ಖಾತ್ರಿ, ಬಿಆರ್ಜಿಎಫ್, ನಿರ್ಮಲ ಭಾರತ ಅಭಿಯಾನ ಯೋಜನೆಯ ಎಲ್ಲ ಕಾಮಗಾರಿ ಫೆಬ್ರುವರಿ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ಜಿಪಂ ಸಿಇಒ ಪಲ್ಲವಿ ಅಕುರಾತಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತಾಲೂಕಿನ ಗ್ರಾಪಂ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಯೋಜನೆ ಅನುಷ್ಠಾನಗೊಳಿಸುವಲ್ಲಿ ಇಲ್ಲಿಯ ಗ್ರಾಪಂ.ಗಳು ತೀರಾ ಹಿಂದುಳಿದುಕೊಂಡಿವೆ ಎಂದು ಪುನರುಚ್ಚರಿಸಿದ ಅವರು, ನಿರ್ಮಲ ಭಾರತ ಅಭಿಯಾನದಡಿ ಜಿಲ್ಲೆಗೆ ಶೌಚಾಲಯ ನಿರ್ಮಾಣದ ಪ್ರೋತ್ಸಾಹ ಧನ 10 ಕೋಟಿ ಕಾದಿರಿಸಲಾಗಿದೆ.
ಪ್ರೋತ್ಸಾಹಧನಕ್ಕೆ ಒತ್ತಾಯ: ಜನರಿಗೆ ಹಣವಿಲ್ಲವೆಂದು ಕುಳಿತುಕೊಳ್ಳದೆ, ಅದನ್ನು ಬಳಸಿಕೊಳ್ಳಬೇಕು. ಈಗಾಗಲೇ ಶೌಚಾಲಯ ಕಟ್ಟಿಸಿಕೊಂಡ ಫಲಾನುಭವಿಗಳಿಗೆ ಹಣ ನೀಡದೆ ಇರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು. ಕಟ್ಟಿಕೊಳ್ಳುವ ಜನರಿಗೆ ತಕ್ಷಣವೇ 4,700 ಪ್ರೋತ್ಸಾಹ ಧನ ನೀಡಬೇಕೆಂದರು.
ಶೌಚಾಲಯ ನಿರ್ಮಾಣ ಕುರಿತು ಹೊಂದಿದ ಗುರಿಯನ್ನು ಯಾವುದೇ ಸಂದರ್ಭದಲ್ಲಿ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಕ್ರಮ ಜರುಗಿಸಲಾಗುವುದು. 39 ಗ್ರಾಪಂ ಪೈಕಿ ತಡಕಲ್ ಪಂಚಾಯತ್ ಮಾತ್ರ 35 ತನ್ನ ಗುರಿ ಪೂರ್ಣಗೊಳಿಸಿದೆ. ಇದು ಪರವಾಗಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಪಿಡಿಒ ಶ್ರೀಶೈಲ ಕಾರ್ಯವನ್ನು ಇತರ ಅಧಿಕಾರಿಗಳು ಅನುಸರಿಸುವಂತೆ ಸಲಹೆ ನೀಡಿದರು.
ಸದಸ್ಯರಿಗೆ ಮನವರಿಕೆ ಮಾಡಿ: ಶೌಚಾಲಯ ನಿರ್ಮಾಣ ಕಾರ್ಯದಲ್ಲಿ ಗ್ರಾಪಂ. ಸದಸ್ಯರನ್ನು ಗಮನಕ್ಕೆ ತೆಗೆದುಕೊಂಡು ಅವರ ಮೂಲಕ ಜನರಿಗೆ ಮನವರಿಕೆ ಮಾಡಿ ಪ್ರಗತಿ ಸಾಧಿಸಬೇಕು ಎಂದರು.
ಉದ್ಯೋಗ ಖಾತ್ರಿ ಕಾಮಗಾರಿ ನಿರುಗುಡಿ, ನರೋಣಾ ಪಂಚಾಯಿತಿ ಪ್ರಗತಿಗೆ ತೃಪ್ತಗೊಂಡ ಅವರು, ಕುಡಿವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಕರ ಸಂಗ್ರಹ ಸೇರಿದಂತೆ ಇತರ ಯೋಜನೆಗಳ ಕಾರ್ಯದ ಕಡತಗಳು ಪರಿಶೀಲನೆ ಕೈಗೊಂಡರು.
ಜಿಪಂ ಉಪ ಕಾರ್ಯದರ್ಶಿ ಎಸ್.ಎಂ. ಕೆಂಚಣ್ಣನವರ, ಮುಖ್ಯ ಲೆಕ್ಕಾಧಿಕಾರಿ ಪಟವೆಗಾರ, ಯೋಜನಾಧಿಕಾರಿ ವಿರುಪಾಕ್ಷಪ್ಪ ಕಿರಣಗಿ, ತಾಪಂ ಇಒ ಅಬ್ದುಲ ಸಲಾಂ, ಜಿಪಂ ಕಾರ್ಯನಿರ್ವಾಹಕ ಅಭಿಯಂತರ ಶಾಂತಪ್ಪ ಠಕ್ಕಳಕಿ, ವ್ಯವಸ್ಥಾಪಕ ಬಸವರಾಜ ಪಾಟೀಲ, ಯೋಜನಾಧಿಕಾರಿ ಗುರುನಾಥ ಗೌಡಪ್ಪನವರ ಪಿಡಿಒ ಗ್ರಾಪಂ ಅಧಿಕಾರಿಗಳು ಹಾಜರಿದ್ದರು.