ದೇವರಾಜ ಅರಸು ನಿಗಮಕ್ಕೆ 215 ಕೋಟಿ ಸಾಲ ಬಾಕಿ
ಯಾದಗಿರಿ: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಈವರೆಗೆ ಸುಮಾರು 6 ಲಕ್ಷ ಫಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಅವುಗಳ ಪೈಕಿ 131 ಕೋಟಿ ಅಸಲು ಹಾಗೂ 84 ಕೋಟಿ ರು. ಬಡ್ಡಿ ಸೇರಿದಂತೆ 215 ಕೋಟಿ ಸಾಲ ವಸೂಲಿ ಬಾಕಿ ಇದೆ ಎಂದು ನಿಗಮದ ಅಧ್ಯಕ್ಷ ಅಶೋಕ ಗಸ್ತಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿಗಮದ ವತಿಯಿಂದ 2008ರ ವರೆಗೆ ಸಾಲ ಪಡೆದ 2.97 ಲಕ್ಷ ಫಲಾನುಭವಿಗಳ ಪೈಕಿ 94,106 ಫಲಾನುಭವಿಗಳು ಸಾಲ ಮರುಪಾವತಿಸಿದ್ದಾರೆ. ಬಾಕಿ 2.03 ಲಕ್ಷ ಫಲಾನುಭವಿಗಳು ಸಾಲ ಮರುಪಾವತಿ ಮಾಡಬೇಕಾಗಿದ್ದು, ಇವರಿಂದ 215 ಕೋಟಿ ಸಾಲ ವಸೂಲು ಆಗಬೇಕಾಗಿದೆ. ಆದ್ದರಿಂದ ಬಡ್ಡಿಯ ಮೊತ್ತವಾದ 84 ಕೋಟಿ ಮನ್ನಾ ಮಾಡುವಂತೆ ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಸಾಲ ವಿತರಿಸಲು 274 ಕೋಟಿ ಲಭ್ಯ: ನಿಗಮದಿಂದ ಫಲಾನುಭವಿಗಳಿಗೆ ಸಾಲ ಸೌಲಭ್ಯ ವಿತರಿಸಲು ಸದ್ಯ 274 ಕೋಟಿ ಲಭ್ಯವಿದೆ. 2012- 13ನೇ ಸಾಲಿಗೆ 190 ಕೋಟಿ ಸಾಲ ವಿತರಿಸುವ ಉದ್ದೇಶದೊಂದಿಗೆ ಈಗಾಗಲೇ ಅರ್ಜಿ ಆಹ್ವಾನಿಸಿ ಸಾಲ ವಿತರಿಸಲಾಗುತ್ತಿದೆ. ಷೇರು ಬಂಡವಾಳಕ್ಕಾಗಿ 25 ಕೋಟಿ, ಸಹಾಯಧನಕ್ಕಾಗಿ 15 ಕೋಟಿ, ಗಂಗಾಕಲ್ಯಾಣ ಯೋಜನೆಯಡಿ 95 ಕೋಟಿ, ಕರಕುಶಲಕರ್ಮಿಗಳು ಮತ್ತು ವೃತ್ತಿದಾಯಕ ಗುಂಪುಗಳಿಗೆ 55 ಕೋಟಿ ನಿಗದಿಪಡಿಸಲಾಗಿದೆ. ಆದರೆ ಈ ಅನುದಾನ ಕಡಿಮೆಯಾಗುವ ಹಿನ್ನೆಲೆಯಲ್ಲಿ ಬರುವ ಬಜೆಟ್‌ನಲ್ಲಿ ನಿಗಮಕ್ಕೆ 500 ಕೋಟಿ ಒದಗಿಸುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗಿದೆ ಎಂದು ಅವರು ಹೇಳಿದರು.
ಗಂಗಾ ಕಲ್ಯಾಣ- 139 ಕೋಟಿ ಅಗತ್ಯ: ಪ್ರಸಕ್ತ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ರಾಜ್ಯದಲ್ಲಿ ಈವರೆಗೆ 21,858 ಕೊಳವೆ ಬಾವಿ ಕೊರೆಯಿಸಿ, 1,425 ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ಇನ್ನೂ 7,063 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿದ್ದು, ಇದಕ್ಕಾಗಿ 139 ಕೋಟಿ ಅವಶ್ಯಕತೆ ಇದೆ. ಯಾದಗಿರಿ ಜಿಲ್ಲೆಯಲ್ಲಿ 402 ಕೊಳವೆಬಾವಿ ಕೊರೆಯಿಸಲಾಗಿದೆ. ನಿಗಮದ ವತಿಯಿಂದ ಸಣ್ಣ ರೈತರಿಗೆ ಏತ ನೀರಾವರಿ ಯೋಜನೆಗಳ ಮೂಲಕ 2 ಕಿಮೀ.ವರೆಗಿನ ಪೈಪ್‌ಲೈನ್ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.
ವೃತ್ತಿಪರ ಶಿಕ್ಷಣಕ್ಕೆ ಸಾಲ ಸೌಲಭ್ಯ: ವೃತ್ತಿ ಆಧಾರಿತ ಶೈಕ್ಷಣಿಕ ಕೋರ್ಸುಗಳ ಪ್ರೋತ್ಸಾಹಕ್ಕೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಿಂದುಳಿದ ವರ್ಗಗಳ ಇಲಾಖೆ ಮತ್ತು ದೇವರಾಜ್ ಅರಸು ನಿಗಮದಿಂದ ನೂತನ ವಸತಿ ನಿಲಯಗಳನ್ನು ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ. ಹಿಂ.ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆರಂಭಿಸುವ ಬಗ್ಗೆಯೂ ನಿರ್ಧರಿಸಲಾಗಿದೆ ಎಂದರು.