ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಹನಿ'ಯುತಿದೆ ಯಾಕೋ ಇಂದು, ಆಹಾ ಎಂಥ ಮಧುರ...

Lingaraj Badiger
Updated On : 8 Feb 2013, 10:39 am

ಗುಲ್ಬರ್ಗ: ಅನಿಸುತಿದೆ ಯಾಕೋ ಏನೋ... ಎಂದು ಮುಂಗಾರು ಮಳೆ ಸಿನಿಮಾ ಹಾಡಿನಿಂದಲೇ ಜನಪ್ರಿಯತೆ ಗಳಿಸಿರುವ ಮಳೆಹಾಡಿನ ಕವಿ ಜಯಂತ್ ಕಾಯ್ಕಿಣಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶುಕ್ರವಾರ ಗುಲ್ಬರ್ಗ ಸಂಚಾರದಲ್ಲಿರುವ ದಿನವೇ ಬಿರುಸಿನ ಮಳೆ ಸುರಿಯಿತು.
ಇದರಿಂದಾಗಿ ಕಾಯ್ಕಿಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರ ಗುಲ್ಬರ್ಗ ಭೇಟಿಯ ಚೊಚ್ಚಲ ಕಾರ್ಯಕ್ರಮ ಈ ಅಕಾಲಿಕ ಮಳೆಯ ಅನಿರೀಕ್ಷಿತ ಆಗಮನದಿಂದಾಗಿ ಅಡಚಣೆಗಳಿಗೆ ತುತ್ತಾಯ್ತು.
 ಇಲ್ಲಿನ ಸಂಗಮೇಶ್ವರ ಮಹಿಳಾ ಮಂಡಳದ 37ನೇ ವಾರ್ರ್ಷಿಕೋತ್ಸವ ಸಮಾರಂಭದಲ್ಲಿ ಮಳೆ ಭಾರಿ ಅಡಚಣೆ ಒಡ್ಡಿತ್ತಲ್ಲದೆ ಸಾಹಿತಿಯ ಮಾತು ಕೇಳಲು ಬಂದವರು ಕಿರಿಕಿರಿ ಅನುಭವಿಸಿ ಮೂಡ್ ಆಫ್ ಆಗಿ ಮನೆ ದಾರಿ ಹಿಡಿಯುವಂತಾಯ್ತು.
ಮಾತಿನ ಮಳೆ: ಆದಾಗ್ಯೂ ಪಟ್ಟು ಬಿಡದಂತೆ ಕಾಯ್ಕಿಣಿ ಹೊರಗೆ ಮಳೆ ಸುರಿದರೇನೆಂತೆ, ಒಳಗೆ ಮಾತಿನ ಮಳೆಯನ್ನೇ ಸುರಿಸೋಣ ಎಂಬ ಸಂಕಲ್ಪ ಮಾಡಿದಂತೆ ಕಂಡರಲ್ಲದೆ ಅದನ್ನು ಅಕ್ಷರಶಃ ಸಾಧಿಸಿ ತೋರಿಸಿದರು.
  ಸಭಿಕರನ್ನು ಮಳೆಯ ಕಿರಿಕಿರಿ ಮೂಡನಿಂದ ಹೊರತರುವಲ್ಲಿ ಯಶಸ್ವಿಯಾದ ಕಾಯ್ಕಿಣಿ ಸಿನಿಮಾ, ಟಿವಿ ಜಗತ್ತು, ಸಾಹಿತ್ಯ ರಂಗ, ಸಂಸ್ಕೃತಿ ಹೀಗೆ ಹಲವು ಕ್ಷೇತ್ರಗಳ ಸುದ್ದಿ ಮಾತನಾಡುತ್ತ ಸೇರಿದ್ದ ಸಭಿಕರೊಂದಿಗೆ ಸುದೀರ್ಘಕಾಲ ಸಂವಾದಿಸಿದರು.
ಗುಲ್ಬರ್ಗದಲ್ಲಿ ಮಳೆಗಾಲದಲ್ಲೇ ಮಳೆ ಅಪರೂಪದ ಅತಿಥಿ, ಅದರಲ್ಲೂ ಚಳಿಗಾಲದಲ್ಲಿ ಮಳೆ ಹನಿಯುವುದು ಅಂದ್ರೆ.. ಇದು ಪವಾಡ, ಅಥವಾ ಪ್ರಕೃತಿ ವಿಕೋಪ ಎಂದು ಸೇರಿದ್ದವರು ಕೆಲವರು ಹೇಳಿಕೊಂಡರೆ ಇನ್ನೂ ಕೆಲವರು ಮಳೆ ಹಾಡಿನ ಕವಿ ಬಂದಾಗ ಮಳೆ ಬಾರದೆ ಇನ್ನೇನು ಬರಬೇಕ್ರಿ ಎಂದು ಲೇವಡಿ ಮಾಡಿದರು.
ಇನ್ನೂ ಕೆಲವರಂತೂ ಮುಂಗಾರು ಮಳೆಯ ಅನಿಸುತಿದೆ ಯಾಕೋ ಇಂದು... ಹಾಡನ್ನೇ ತುಸು ಬದಲಾಯಿಸಿ ಹನಿಯುತಿದೆ ಯಾಕೋ ಇಂದು... ಎಂದು ಗುಲ್ಬರ್ಗದ ಅಕಾಲಿಕ ಮಳೆಯ ಬಗ್ಗೆಯೇ ಗುನುಗುಟ್ಟಿದರು.
ಮಳೆಯ ಬಾಗಿನ: ಸಂಜೆ ಹೊತ್ತು ಸಾಹಿತ್ಯ ಸಮಾರಂಭ, ಪುಸ್ತಕ ಬಾಗಿನ, ನಗೆಹನಿ ಎಂದೆಲ್ಲಾ ತರಹೇವಾರಿ ಕಾರ್ಯಕ್ರಮಗಳೊಂದಿಗೆ ವಾರ್ಷಿಕೋತ್ಸವದ ಸವಿ ಉಣಬಡಿಸಬೇಕೆಂದಿದ್ದ ಸಂಗಮೇಶ್ವರ ಮಂಡಳದ ಮಹಿಳೆಯರ ಪ್ರಯತ್ನ ಮಳೆಯಿಂದಾಗಿ ವ್ಯರ್ಥವಾಯ್ತು. ಅದೆಲ್ಲಿಂದಲೇ ಬಂದ ಮಳೆಯೇ ಮಹಿಳಾ ಮಂಡಳದ ಸಮಾರಂಭಕ್ಕೆ ತಾನೇ ಬಾಗಿನ ಅರ್ಪಿಸಿದಂತಾಗಿತ್ತು.
ಸಮಾರಂಭ ಶುರುವಾಗಿ ಇನ್ನೇನು ಕೃತಿಗಳ ಬಿಡುಗಡೆಯಾಗಬೇಕು ಎನ್ನುವಷ್ಟರಲ್ಲೇ ಮಳೆ ಎಂದು ಸುರಿಯಲಾರಂಭಿಸಿತು.
 ಅಯ್ಯೋ ಮಳೆ ಬಂತು ಎಂದು ಸಮಾರಂಭವನ್ನೇ ಮಂಡಳದ ಸಭಾಂಗಣಕ್ಕೆ ಸ್ಥಳಾಂತರ ಮಾಡಿದ ಮರುಗಳಿಗೆಯೇ ಮಳೆ ಮಂಗಮಾಯ.
ಸ್ಥಳಾಂತರ: ಸಂಘಟಕರು ಮತ್ತೆ ಸಮಾರಂಭವನ್ನು ಬಯಲು ವೇದಿಕೆಯಲ್ಲಿಯೇ ಆಯೋಜಿಸಿದ್ದರು. ಕೃತಿಗಳ ಪರಿಚಯ ಶುರುವಾಗಿತ್ತು.
 ಮತ್ತೆ ಅದೆಲ್ಲಿಂದ ಬಂದವೋ ಮೋಡಗಳು, ಮಳೆ ಬಿರುಸಿನಿಂದಲೇ ಸುರಿಯಿತು.
 ಹೀಗೆ ಶುರುವಾದ ಮಳೆ 1 ಗಂಟೆ ಕಾಲ ನಿಲ್ಲಲೇ ಇಲ್ಲ. ಇದರಿಂದಾಗಿ ಸಮಾರಂಭವನ್ನು ಇಡಿಯಾಗಿ ಸಭಾಂಗಣಕ್ಕೆ ಸ್ಥಳಾಂತರ ಮಾಡಲಾಯ್ತು.
 ಏಕೆಂದರೆ ಸಂಗಮೇಶ್ವರ ಮಹಿಳಾ ಮಂಡಳಿಯ ಸಮಾರಂಭಕ್ಕೆ ನಿರೀಕ್ಷೆಗೂ ಮೀರಿ ಜನ ಸೇರಿತ್ತು. ಸಭಾಂಗಣ ತುಂಬ ಇಕ್ಕಟ್ಟಾಗಿರುವುದರಿಂದ ಅಲ್ಲಿ ಬಂದವರೆಲ್ಲರಿಗೂ ನಿಲ್ಲಲಿಕ್ಕೂ ಅವಕಾಶ ಇಲ್ಲದಂತಾಗಿತ್ತು. ಹೀಗಾಗಿ ಅನೇಕರು, ಅದರಲ್ಲಿಯೂ ಮಹಿಳೆಯರು ಮನೆ ದಾರಿ ಹಿಡಿಯಬೇಕಾಯ್ತು.
ಮಳೆ ಜನರನ್ನ ಹತ್ತಿರ ತಂತು ನೋಡ್ರಿ: ಹೊರಗೆ ಬಿರುಸಿನ ಮಳೆ, ಒಳಗಡೆ ಸಂಗಮೇಶ್ವರ ಮಂಡಳಿಯ ಪುಟ್ಟದಾದ ಸಭಾಂಗಣದಲ್ಲಿ ಕಾಯ್ಕಿಣಿ ಮಾತಿನ ವರಸೆ.
 ಇಕ್ಕಟ್ಟಾಗಿದ್ದ ಸಭಾ ಭವನದಲ್ಲಿ ಸಭಿಕರು ವೇದಿಕೆಗೆ ತುಂಬ ಹತ್ತಿರವಾಗಿದ್ದರು.
 ಈ ಸಂದರ್ಭವನ್ನೇ ಕಾಯ್ಕಿಣಿಯವರು ಮಳೆ ಏನೆಲ್ಲಾ ಮಾಡುತ್ತದೋ ಗೊತ್ತಿಲ್ಲ, ಜನರನ್ನು ತುಂಬ ಹತ್ತಿರ ಕರೆತರುತ್ತದೆ ಎಂದು ಹಾರಿಸಿದ ಚಟಾಕಿ ಸಭಾಂಗಣದಲ್ಲಿ ನಗೆಯಲೆ ಉಕ್ಕಿಸಿತ್ತು.
ರೆಡಿಮೇಡ್ ಸಂಸ್ಕೃತಿ: ಹಾಗೇ ಮುಂದುವರಿಸಿದ ಕಾಯ್ಕಿಣಿ ಸೊರಗುತ್ತಿರುವ ಸಂಸ್ಕೃತಿಗೆ ಕೊರಗಿದರು. ಮಕ್ಕಳು ದಾರಿ ತಪ್ಪುತ್ತಿರುವ ಬಗ್ಗೆ ಮರುಗಿದರು. ಕಾಯಕ ಸಂಸ್ಕೃತಿ ದೂರವಾಗುತ್ತಿರುವ ಬಗ್ಗೆ, ರೆಡಿಮೇಡ್ ಸಂಸ್ಕೃತಿ ಹತ್ತಿರವಾಗುತ್ತಿರುವದಕ್ಕೆ ವಿಷಾದಿಸಿದರು.
ಸಾಹಿತ್ಯ- ಸಂಸ್ಕೃತಿ ವಿಚಾರವಾಗಿ ತುಂಬ ಗಮನ ಸಂಗತಿಗಳನ್ನು ಪ್ರಸ್ತಾಪಿಸಿದ ಕಾಯ್ಕಿಣಿ ಈಚೆಗಿನ ದಿನಗಳಲ್ಲಿ ಚಿಂತನೆಯಿಲ್ಲದೆ ಸೊರಗಿರುವ ಸಾಹಿತ್ಯ ಕೃಷಿಯೇ ಸಾಗಿದೆ ಎಂದರು. ಪ್ರಕಟಣೆಯ ಮಾರ್ಗಗಳು ವಿಫಲವಾಗಿದ್ದರಿಂದ ಕುತೂಹಲ ಎಂಬುದು ಮರೆಯಾಗಿದೆ. ಫ್ಯಾಶನ್‌ಗಾಗಿ ಬರೆಯುವವರೇ ಹೆಚ್ಚಾಗುತ್ತಿದ್ದಾರೆ ಎಂದು ಸಾಹಿತ್ಯ ಸೃಷ್ಟಿಯಲ್ಲಿ ಚಂತನೆಗೆ ಹೆಚ್ಚಿನ ಅವಕಾಶ ಇರಬೇಕೆಂಬ ತಮ್ಮ ಕಳಕಳಿ ತೆರೆದಿಟ್ಟರು. ಇಂದಿರಾ ಮಾನ್ವೀಕರ್, ಡಾ. ವಿಕ್ರಂ ವಿಸಾಜಿ, ಮಹಿಪಾಲರೆಡ್ಡಿ ಮುನ್ನೂರ್, ಸಂಧ್ಯಾ ಹೊನಗುಂಟೀಕರ್, ಶೈಲಜಾ ಕೊಪ್ಪರ್, ಲಕ್ಷ್ಮೀ ಶಂಕರ ಜೋಷಿ ವೇದಿಕೆಯ ಮೇಲಿದ್ದರು. ಇದೇ ಸಂದರ್ಭದಲ್ಲಿ ನುಡಿಕಿಡಿ ಇಡಿಯಾದಾಗ ಹಾಗೂ ಗುಮ್ಮನ ಕರೆಯದಿರೆ ಕೃತಿಗಳನ್ನು ಕಾಯ್ಕಿಣಿ ಲೋಕಾರ್ಪಣೆ ಮಾಡಿದರು.

ಅಚ್ಚರಿ ತಂದ ಅಕಾಲಿಕ ಮಳೆ
ಗುಲ್ಬರ್ಗ: ಗುಲ್ಬರ್ಗ ಮಹಾ ನಗರ ಹಾಗೂ ಸುತ್ತಲಿನ 10 ಕಿಮೀ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ ಸಂಜೆ ಹೊತ್ತು ಮಳೆಯಾಗಿದೆ. ಚಳಿಗಾಲದಲ್ಲಿ ಮಳೆ ಸುರಿದಿರುವುದು ನಗರ ಜನತೆಗೆ ಅಚ್ಚರಿ ಮೂಡಿಸಿದೆ. ಇದು ಜೋಳದ ಸುಗ್ಗಿ ಸಮಯ.
 ಈ ಮಳೆಯಿಂದ ಜೋಳದ ತೆನೆಗಳು ಹಾಳಾಗುವ ಆತಂಕ ರೈತರನ್ನು ಕಾಡುತ್ತಿದೆ. ಜೋಳದ ತೆನೆಗಳು ಕಪ್ಪಾಗುವ ಭೀತಿಯೂ ಆವರಿಸಿದೆ. ಇತ್ತ ತೊಗರಿ ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರಲೆಂದು ಬಯಲಲ್ಲೇ ಸಂಗ್ರಹಿಸಿರುತ್ತಾರೆ. ಈ ಮಳೆ ತೊಗರಿಗೂ ಕಂಟಕ ತಂದೊಡ್ಡಿದೆ. ಗುಲ್ಬರ್ಗದಲ್ಲಿ 4 ದಿನಗಳಿಂದ ಚುರುಗುಟ್ಟುವ ಬಿಸಿಲಿತ್ತು. ಬುಧವಾರ ರಾತ್ರಿ ಹಾಗೂ ಗುರುವಾರ ಸಂಜೆ ಹೊತ್ತು ಸುರಿದ ಮಳೆಗೆ ನಗರ ತಂಪಾಗಿದೆ. ಮೋಡ ಕವಿದ ವಾತಾವರಣ ಹಾಗೆಯೇ ಮುಂದುವರಿದಿದೆ.

ರಸ್ತೆಯಲ್ಲಿ ನೀರು, ಸಂಚಾರ ಅಸ್ತವ್ಯಸ್ತ
ಗುಲ್ಬರ್ಗ: ನಗರದಲ್ಲಿ ಗುರುವಾರ ರಾತ್ರಿ ಬಿರುಸಿನಿಂದ ಮಳೆ ಸುರಿದಿದೆ. ಇದರಿಂದ  ರಸ್ತೆ ಕಾಮಗಾರಿಗಳು ನಡೆದ ಸ್ಥಳಕ್ಕೆ ಮಳೆ ನೀರು ನುಗ್ಗಿದ್ದರಿಂದ ಸಂಚಾರದಲ್ಲಿ ಸಾರ್ವಜನಿಕರು ಬಹಳ ತೊಂದರೆ  ಅನುಭವಿಸಿದರು.
 ರಾತ್ರಿ 8 ಗಂಟೆಗೆ ಆರಂಭವಾದ ಮಳೆ 2 ಗಂಟೆಗಳಿಂದ ಸತತ ಸುರಿಯುತ್ತಿದೆ. ರಸ್ತೆಗಳಲ್ಲಿ ಮಳೆ ನೀರು ಮಡುಗಟ್ಟಿ ನಿಲ್ಲುವ ಮೂಲಕ ಕಿರಿಕಿರಿ ಉಂಟು ಮಾಡಿದೆ.  ಮಳೆ ಆರಂಭವಾದ ಬೆನ್ನಲ್ಲೇ ಜೆಸ್ಕಾಂ  ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದೆ.  ಜನ ತೊಂದರೆ ಎದುರಿಸುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement