ತಾಲೂಕು ವಿಭಜನೆ: ಸಾಮಾನ್ಯರಿಂದ ಶೆಟ್ಟರ್ ಭಜನೆ
ಗುಲ್ಬರ್ಗ: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಂಡಿಸಿರುವ ಚೊಚ್ಚಲ ಆಯವ್ಯಯ ಪತ್ರದ ಬಗ್ಗೆ ಯಾರು ಏನೇ ಹೇಳಲಿ, ಕರ್ನಾಟಕದ ಸಾಮಾನ್ಯ ಜನರಂತೂ ಈಗಿರುವ ತಾಲೂಕುಗಳನ್ನು ಸರಿಯಾಗಿ ವಿಭಜಿಸಿ, ಹೊಸ ತಾಲೂಕು ರಚನೆಯ ವಿಚಾರದಲ್ಲಿ ಬಜೆಟ್ನಿಂದ ಹೊರಬಿದ್ದ ಘೋಷಣೆಯಿಂದಾಗಿ ಶೆಟ್ಟರ್ ಭಜನೆ ಮಾಡುತ್ತಿದ್ದಾರೆ.
ಆಡಳಿತಾತ್ಮಕ ಅನುಕೂಲಗಳಿಗಾಗಿ ತಾಲೂಕು ವಿಭಜನೆ, ಹೊಸ ತಾಲೂಕು ರಚನೆಯ ಸಂಗತಿ ದಶಕಗಳಿಂದ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದವರ ತಲೆ ತಿನ್ನುತ್ತಿತ್ತು. ಈ ವಿಷಯದ ಪರಾಮರ್ಶೆಗೆಂದೇ ರಚನೆಯಾದ ಸಮಿತಿಗಳಿಗೆ ಲೆಕ್ಕವೇ ಇರಲಿಲ್ಲ. ತಾಲೂಕು ವಿಭಜನೆ, ಹೊಸ ತಾಲೂಕು ರಚನೆ ವಿಷಯವೆಂದರೆ ಜೇನುಗೂಡು ಎಂದೇ ಹೋಲಿಸಲಾಗುತ್ತಿತ್ತು. ಆದರೆ ಸಿಎಂ ಶೆಟ್ಟರ್ ತಮ್ಮ ಚೊಚ್ಚಲ ಬಜೆಟ್ನಲ್ಲಿ ಜೇನುಗೂಡಿಗೆ ನೇರವಾಗಿಯೇ ಕೈಹಾಕುವ ಧೈರ್ಯ ಪ್ರದರ್ಶಿಸಿದ್ದಾರೆ. ತಾಲೂಕು ರಚನೆ ಮಾಡುವ ಮೂಲಕ ಎಲ್ಲರಿಗೂ ಹಲವು ಅನುಕೂಲಗಳ ಸಿಹಿಜೇನು ನೀಡುವ ದಿಶೆಯಲ್ಲಿ ಮಾಡಿರುವ ಪ್ರಯತ್ನ ಜನಮನ ಸೂರೆಗೊಂಡಿದೆ ಎಂದೇ ಹೇಳಬೇಕು.
ಹೋರಾಟಗಳು ಗಮನ ಸೆಳೆದಿದ್ದವು: ತೀರ ಇತ್ತೀಚೆಗೆ ಎಂ.ಬಿ. ಪ್ರಕಾಶ ನೇತೃತ್ವದ ಪರಿಣಿತರ ಸಮಿತಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ತಾಲೂಕು ರಚನೆಯ ಶಕ್ಯತಾ ವರದಿ ನೀಡಿದ ನಂತರವಂತೂ ಹೊಸ ತಾಲೂಕು ರಚನೆ ಕೂಗು ಮುಗಿಲು ಮುಟ್ಟಿತ್ತು. ಇವೆಲ್ಲದರ ನಡುವೆಯೇ ಕಿತ್ತೂರು ಉತ್ಸವಕ್ಕೆ ಹೋಗಿದ್ದ ಸಿಎಂ ಶೆಟ್ಟರ್ ಅದಕ್ಕೆ ತಾಲೂಕು ಸ್ಥಾನಮಾನ ನೀಡಿದ ಮೇಲಂತೂ ಎಲ್ಲರೂ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಮನವಿ ಕೊಡುವ ಮೂಲಕ, ಹೋರಾಟ ನಡೆಸಿ, ಪ್ರತಿಭಟನೆ ಸಂಘಟಿಸಿ ಸರ್ಕಾರದ ಗಮನ ಸೆಳೆದಿದ್ದರು. ಸಾರ್ವಜನಿಕರ ಒತ್ತಾಸೆ, ವಿವಿಧ ವರದಿಗಳ ಫಲಿತಾಂಶ ಎಲ್ಲವನ್ನು ತಾಳೆಹಾಕಿಯೇ ಈಗಿರುವ 175 ತಾಲೂಕುಗಳಿಗೆ ಇನ್ನೂ 43 ಹೊಸ ತಾಲೂಕುಗಳ ಸೇರ್ಪಡೆಯೊಂದಿಗೆ ಈಗಿನ ಒಟ್ಟು ತಾಲೂಕುಗಳ ಬಲ 218 ಕ್ಕೆ ಹೆಚ್ಚಿದಂತಾಗಿದೆ.
ಸಾಮಾನ್ಯರಿಗೂ ಸಂತಸ: ಶೆಟ್ಟರ್ ಅವರಿಗೆ ತಾಲೂಕು ರಚನೆ ಸಂಗತಿ ಅಷ್ಟೊಂದು ಕಾಟ ಕೊಟ್ಟಿಲ್ಲ. ಏಕೆಂದರೆ- ಕಳೆದ ಕೆಲ ವರ್ಷಗಳಿಂದ ಎಡೆಬಿಡದೆ ಸಾಗಿದ್ದ ಈ ಕಸರತ್ತು ಒಂದು ಹಂತ ತಲುಪಿತ್ತು. ಇನ್ನೇನು ಹೊಸ ತಾಲೂಕುಗಳ ಘೋಷಣೆ ಆಗಬೇಕಿತ್ತಷ್ಟೆ. ಇಂತಹ ರಾಜಕೀಯ ಅಸ್ಥಿರತೆಯಲ್ಲಿಯೂ ಈ ಕೆಲಸ ಮಾಡುವ ಮೂಲಕ ಶೆಟ್ಟರ್ ಧೈರ್ಯ ತೋರಿಸಿದ್ದಾರೆ. ರಾಜ್ಯ ಕಂಡ ಬಿಜೆಪಿ ಸರ್ಕಾರದ 5ನೇ ಬಜೆಟ್ ಪರ ರಾಜ್ಯಾದ್ಯಂತ ಸಾಮಾನ್ಯ ಜನರೂ ಆಕರ್ಷಿತರಾಗುವಂತೆ ಮಾಡಿದ್ದಾರೆ.
ತೆರಿಗೆ, ಅನುದಾನ, ಬಜೆಟ್ ಗಾತ್ರ.. ಇವೆಲ್ಲ ಆರ್ಥಿಕ ತಜ್ಞರ ಲೆಕ್ಕ. ಅನುಕೂಲ- ಅನಾನುಕೂಲಗಳ ವಿಚಾರದಲ್ಲಿ ಸಾಮಾನ್ಯರ ಲೆಕ್ಕವೇ ಪಕ್ಕಾ. ಹೊಸ ತಾಲೂಕು ರಚಿಸುವ ಮೂಲಕ ಶೆಟ್ಟರ್ ಸಾಮಾನ್ಯರ ಲೆಕ್ಕಕ್ಕೆ ಹತ್ತಿರವಾಗಿ ಅವರ ಮನದಲ್ಲಿ ಇಳಿದಿದ್ದಾರೆ.
ಹಿಂದೆ ಜೆ.ಎಚ್. ಪಟೇಲ್ ರಾಜ್ಯದಲ್ಲಿ 8 ಹೊಸ ಜಿಲ್ಲೆ ರಚಿಸುವ ಮೂಲಕ ಜನಮನ ಸೂರೆಗೊಂಡಿದ್ದರು. ಯಡಿಯೂರಪ್ಪ ಗುಲ್ಬರ್ಗ ವಿಭಜಿಸಿ ಯಾದಗಿರಿಗೆ ಜಿಲ್ಲಾಪಟ್ಟ ಕಟ್ಟಿ ಸುದ್ದಿಯಾಗಿದ್ದರು. ಇದೀಗ ಈ ಸಾಲಿನಲ್ಲಿ ಶೆಟ್ಟರ್ ನಿಂತಿದ್ದಾರೆ.
- ಶೇಷಮೂರ್ತಿ ಅವಧಾನಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.