ವಿಪ್ರರ ಸಮಾವೇಶಕ್ಕೆ ಜಿಲ್ಲೆಯಿಂದ 10 ಸಾವಿರ ಜನ
ಸತ್ಯಪ್ರಮೋದತೀರ್ಥ ಸಭಾ ಮಂಟಪದಲ್ಲಿ ಫೆ.10ರಂದು ಜರುಗುವ ಗುಲ್ಬರ್ಗ ಜಿಲ್ಲಾ ಬ್ರಾಹ್ಮಣ ಸಮಾವೇಶ...
ಯಾದಗಿರಿ: ಗುಲ್ಬರ್ಗದ ನೂತನ ವಿದ್ಯಾ ಸಂಸ್ಥೆಯ ಸತ್ಯಪ್ರಮೋದತೀರ್ಥ ಸಭಾ ಮಂಟಪದಲ್ಲಿ ಫೆ.10ರಂದು ಜರುಗುವ ಗುಲ್ಬರ್ಗ ಜಿಲ್ಲಾ ಬ್ರಾಹ್ಮಣ ಸಮಾವೇಶದಲ್ಲಿ ಜಿಲ್ಲೆಯಿಂದ ಸುಮಾರು 10 ಸಾವಿರ ವಿಪ್ರ ಬಾಂಧವರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಬಿ.ಶ್ರೀನಿವಾಸ ತಿಳಿಸಿದ್ದಾರೆ.
ಇಂದು ದೇಶದ ಎಲ್ಲ ರಂಗಗಳ ಪ್ರಗತಿಯಲ್ಲಿ ಬ್ರಾಹ್ಮಣರ ಪಾತ್ರ ಮಹತ್ವದ್ದಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಕಾಲಕಾಲಕ್ಕೆ ನಡೆದಿರುವ ಸಾಮಾಜಿಕ ಬದಲಾವಣೆಯ ಚಳವಳಿಗಳಲ್ಲಿ ವಿಪ್ರರು ಮುಂಚೂಣಿಯಲ್ಲಿರುವುದು ಇತಿಹಾಸದಲ್ಲಿ ದಾಖಲಾಗಿರುವ ವಿಷಯ. ಚರಿತ್ರೆ, ಚಾರಿತ್ರ್ಯ ನಿರ್ಮಾಣಗಳೆರಡರಲ್ಲೂ ವಿಪ್ರರದು ಸಿಂಹಪಾಲಿದೆ ಎಂದರು.
ತುಳಿಯುವ ಹುನ್ನಾರ: ಬ್ರಾಹ್ಮಣರು ಎಂದೂ ಯಾರ ಹಂಗಿನಲ್ಲಿ, ಪರಪೀಡಿತರಾಗಿ ಬಾಳಿದವರಲ್ಲ. ಆದರೆ ಹಿಂದಿನಿಂದಲೂ ವಿಪ್ರರ ಬಗ್ಗೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡುತ್ತ ಸಮುದಾಯದ ಜನಪ್ರಿಯತೆ, ಜ್ಞಾನ ಹಾಗೂ ಪ್ರತಿಭೆಗಳನ್ನು ತುಳಿಯುವ ಹುನ್ನಾರ ವ್ಯವಸ್ಥಿತವಾಗಿ ನಡೆದಿದೆ. ಈಗಲೂ ನಿರಂತರವಾಗಿ ನಡೆಯುತ್ತಿದೆ.
ಕಾರಣ ಪ್ರಸ್ತುತ ದಿನಗಳಲ್ಲಿ ವಿಪ್ರ ಜನಾಂಗಕ್ಕೆ ಈ ವಿಷಯ ಸವಾಲಾಗಿ ಸ್ವೀಕರಿಸುವ ಹಾಗೂ ಸಿಡಿದು ನಿಲ್ಲುವ ಪರಿಸ್ಥಿತಿ ಬಂದಿದೆ. ಕರ್ನಾಟಕದಲ್ಲಿ ಶೇ.7ರಷ್ಟು ಜನಸಂಖ್ಯೆಯ ವಿಪ್ರರನ್ನು ಚುನಾವಣೆ ಸಮಯದಲ್ಲಿ ನಿರ್ಲಕ್ಷಿಸಲಾಗುತ್ತಿದೆ. ಈ ವಿಷಯವನ್ನು ಎಲ್ಲ ಪಕ್ಷದವರು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಇಷ್ಟಾದರೂ ನಿರ್ಲಕ್ಷ್ಯ ಧೋರಣೆ ತೋರಿದರೆ ವಿಪ್ರರು ಆಂತರಿಕ ಭಿನ್ನಾಭಿಪ್ರಾಯವನ್ನು ತೊರೆದು ಅನ್ಯಾಯದ ವಿರುದ್ಧ ಸಿಡಿದು ನಿಲ್ಲುವಲ್ಲಿ ಸಂದೇಹವಿಲ್ಲ ಎಂದು ಎಚ್ಚರಿಸಿದರು.
ಸಂಘಟಿತರಾಗದಿದ್ದಲ್ಲಿ ದುರ್ಬಲ: ಬ್ರಾಹ್ಮಣರು ಇಂದು ಸಂಘಟಿತರಾಗದ ಕಾರಣ ದುರ್ಬಲರಾಗಿದ್ದಾರೆ. ಈ ಸತ್ಯವನ್ನರಿತು ನಾವೆಲ್ಲ ಅರಿತು ಸಂಘಟಿತರಾಗಿ ನಮ್ಮ ಶಕ್ತಿ ಪ್ರದರ್ಶನ ಮಾಡದಿದ್ದರೆ ಮುಂದಿನ ತೊಂದರೆಗಳಿಗೆ ನಾವೇ ಜವಾಬ್ದಾರರಾಗುತ್ತೇವೆ. ಮುಂದಿನ ನಮ್ಮ ಪೀಳಿಗೆ ನಮ್ಮ ನಿರಾಸಕ್ತಿ ಸ್ವಭಾವಕ್ಕೆ ತಮ್ಮ ಭವಿಷ್ಯವನ್ನು ಕಳೆದುಕೊಳ್ಳಬಾರದು.
ಆದ್ದರಿಂದ ಗುಲ್ಬರ್ಗದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಸಮುದಾಯದ ಶಕ್ತಿ ಪ್ರರ್ಶಿಸಲು ವಿಪ್ರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.