ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತಮ್ಮನ ತಂಡದ ಮೇಲೆ ರಾಜುಗೌಡ ಸವಾರಿ!

Lingaraj Badiger
Updated On : 11 Feb 2013, 11:25 am

ಹುಣಸಗಿ: ರಾಜಕೀಯ ಜಂಜಾಟದ ನಡುವೆಯೂ ಸಚಿವ ರಾಜುಗೌಡ ಇಲ್ಲಿನ ಯುವಕರೊಂದಿಗೆ ಕಬಡ್ಡಿ ಪಂದ್ಯವಾಡುವುದರ ಮೂಲಕ ತಾವು ಯಾವ ಕ್ರೀಡಾಳುವಿಗೂ ಕಮ್ಮಿ ಇಲ್ಲ ಎಂಬುದನ್ನು ತೋರಿಸಿದರು. ಇಷ್ಟು ಮಾತ್ರವಲ್ಲ, ಪಂದ್ಯದುದ್ದಕ್ಕೂ ಎದುರಾಳಿ ತಂಡದ ಮೇಲೆ ದಾಳಿ ಮಾಡಿ ತಂಡಕ್ಕೆ ಗೆಲವು ತಂದುಕೊಟ್ಟರು.
  ಶನಿವಾರ ಸಂಜೆ ಇಲ್ಲಿಯ ಯುಕೆಪಿ ಕ್ಯಾಂಪಿನ ಆವರಣದಲ್ಲಿ ಅಂತಾರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಜೂಗೌಡ, ಹುಣಸಗಿಯಲ್ಲಿ ಅಂತಾರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಂಡಿರುವುದು
ಸಂತಸ ತಂದಿದೆ ಎಂದು ಅಭಿಪ್ರಾಯಪಟ್ಟರು.
  ಇತ್ತೀಚಿನ ದಿನಗಳಲ್ಲಿ ಯುವಕರು ಗ್ರಾಮೀಣ ಆಟಗಳನ್ನು ಮರೆಯುತ್ತಿರುವುದು ಆತಂಕಕಾರಿ ಬೆಳವಣಿಗೆ. ಈ ನಿಟ್ಟಿನಲ್ಲಿ  ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಸದಾ ಇರುತ್ತದೆ. ಮುಂದಿನ ದಿನಗಳಲ್ಲಿ ಕಬಡ್ಡಿ ಆಟ ನಡೆಸಿ, ದೇಶದ ಗ್ರಾಮೀಣ ಆಟಗಳನ್ನು ಉಳಿಸಿರಿ ಎಂದು ಈ ಸಂದರ್ಭದಲ್ಲಿ ಕಿವಿಮಾತು ಹೇಳಿದರು.
  ಸಚಿವ ರಾಜುಗೌಡ ಮತ್ತು ಸಹೋದರ ಬಬ್ಲೂಗೌಡ ಕಬಡ್ಡಿ ಮೈದಾನಕ್ಕೆ ಪೂಜೆ ಮಾಡಿ ಕಣಕ್ಕಿಳಿದರು. ರಾಜುಗೌಡ ವರ್ಸಸ್ ಬಬ್ಲೂಗೌಡ ತಂಡಗಳ ನಡುವೆ ನಡೆದ ಆರಂಭದ ಪಂದ್ಯ ಸಾವಿರಾರು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿತು. ಸಚಿವರ ದಾಳಿ ತಡೆಯುವುದು ಎದುರಾಳಿ ತಂಡಕ್ಕೆ ಪ್ರಯಾಸವಾಗಿತ್ತು. ಸತತ ಎರಡು ಬಾರಿ ದಾಳಿ ನಡೆಸಿದಾಗಲೂ ರಾಜುಗೌಡರನ್ನು ಹಿಡಿಯುವ ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ. ಅಣ್ಣನನ್ನು ಹಿಡಿಯಲು ಬಬ್ಲೂಗೌಡರಿಗೆ ಸಾಧ್ಯವಾಗಲೇ ಇಲ್ಲ. ಸಚಿವರ ಕೊನೆಯ ದಾಳಿಯಂತೂ ಸೊಗಸಾಗಿತ್ತು. ಪ್ರೇಕ್ಷಕರ ಚಪ್ಪಾಳೆಯಿಂದ ಉತ್ಸುಕರಾದಂತೆ ಕಂಡುಬಂದ ಅವರು, ಎದುರಾಳಿ ತಂಡದ ಕ್ಯಾಪ್ಟನ್ ಬಬ್ಲೂಗೌಡ ಹಾಗೂ ಇತರ ಆಟಗಾರರನ್ನು ಔಟ್ ಮಾಡಿಯೇ ವಾಪಸಾದರು. ಈ ಸಂದರ್ಭದಲ್ಲಿ ಜನರತ್ತ ಕೈ ಮಾಡಿ ಸಂಭ್ರಮಿಸಿದರು.
  ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ನಾಗಣ್ಣ ದಂಡಿನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೀರೇಶ ಚಿಂಚೋಳಿ, ಜಿಪಂ ವಿರೋಧ ಪಕ್ಷದ ನಾಯಕ ಎಚ್.ಸಿ.ಪಾಟೀಲ್, ಪ್ರಮುಖರಾದ ಚಂದ್ರಶೇಖರಗೌಡ ಮಾಗನೂರ, ಬಸವರಾಜ ಮಲಗಲದಿನ್ನಿ, ಬಸವರಾಜ ಸ್ಥಾವರಮಠ, ಚಂದ್ರಶೇಖರ್ ದಂಡಿನ್, ಸಿದ್ದನಗೌಡ ಕರಿಭಾವಿ, ಶಿವಶರಣ ದೇಸಾಯಿ, ಬಸಣ್ಣ ದೇಸಾಯಿ, ಬಸಣ್ಣ ದೊರಿ, ತಿಪ್ಪಣ್ಣ ಚಂದಾ ಇದ್ದರು. ನಂತರ ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸಿದ್ದ ತಂಡಗಳ ನಡುವೆ ಪಂದ್ಯಗಳು ನಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement