ರೈತರ ಆತಂಕಕ್ಕೆ ಕಾರಣವಾದ ನೀರು ತಪಾಸಣಾ 'ಯಂತ್ರ'
ಕೆಂಭಾವಿ: ಕೃಷ್ಣಾ ಎಡದಂಡೆ ಕಾಲುವೆಯ ವಿವಿಧ ಪ್ರದೇಶಗಳಲ್ಲಿ ನೀರಿನ ಹರಿವಿನ ಪ್ರಮಾಣ ಪರೀಕ್ಷಿಸಲು ಹಾಗೂ ನೀರು ಪೋಲಾಗುವುದನ್ನು ಪತ್ತೆ ಹಚ್ಚಲು ಯಂತ್ರ ಅಳವಡಿಸಿರುವುದು ಈಗ ರೈತರ ಆತಂಕಕ್ಕೆ ಕಾರಣವಾಗಿದೆ.
ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರ ಜಮೀನಿಗೆ ನೀರು ಹೇಗೆ ಹರಿಸಬೇಕು, ನೀರಿನ ದುರ್ಬಳಕೆ ಹೇಗೆ ತಡೆಗಟ್ಟುವುದು ಎಂಬುದನ್ನು ಪತ್ತೆಹಚ್ಚುವ ಕಾರ್ಯವನ್ನು ಕೃಷ್ಣಾ ಭಾಗ್ಯ ಜಲ ನಿಗಮವು ವ್ಯಾಪ್ಕೊ ಎಂಬ ಸಂಸ್ಥೆಗೆ ವಹಿಸಿದ್ದು, ವರದಿ ನೀಡುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳ ನೀರಿನ ಹರಿವಿನ ಪ್ರಮಾಣವನ್ನು ಪರೀಕ್ಷೆ ಮಾಡುವ ಯಂತ್ರವನ್ನು ನಾರಾಯಣಪುರ ಎಡದಂಡೆ ಕಾಲುವೆ, ಶಾಹಾಪುರ ಬ್ರ್ಯಾಂಚ್ ಕಾಲುವೆ, ಇಂಡಿ ಬ್ರ್ಯಾಂಚ್ ಕಾಲುವೆ, ಜೆಬಿಸಿ ಕಾಲುವೆಗಳಲ್ಲಿ ಅಳವಡಿಸಲಾಗಿದೆ. ಹರಿಯುವ ನೀರಿನ ಪ್ರಮಾಣವೆಷ್ಟು, ಅಗತ್ಯಕ್ಕಿಂತ ಹೆಚ್ಚಿದೆಯೇ ಎಂಬುದನ್ನು ಇದರಿಂದ ಅಳೆಯಬಹುದಾಗಿದೆ.
ಗ್ಲೋಬಲ್ ಮೀಟರ್: ನಿಗದಿತ ಪ್ರಮಾಣದಲ್ಲಿ ನೀರು ಹರಿಯುತ್ತಿದೇಯೋ ಅಥವಾ ಎಲ್ಲಾದರೂ ನೀರು ವ್ಯರ್ಥವಾಗಿ ಪೋಲಾಗುತ್ತಿದೆಯೋ ಎಂಬುವುದನ್ನು ಈ ಯಂತ್ರದ ಸಹಾಯದಿಂದ ತಿಳಿಯಬಹುದು. ಮುಂಬರುವ ದಿನಗಳಲ್ಲಿ ಕಾಲುವೆಗಳಿಗೆ ಹರಿಯುವ ಪ್ರಮಾಣ ತಿಳಿಯಲು ಗ್ಲೋಬಲ್ ಮೀಟರ್ ಅಳವಡಿಸಲಾಗುವ ತಯಾರಿಯಲ್ಲಿ ನಿಗಮವಿದೆ ಎಂದು ತಿಳಿದುಬಂದಿದೆ. ಈ ಯಂತ್ರಗಳನ್ನು ಕೂರಿಸಲು ಟೆಂಡರ್ ಪ್ರಕ್ರಿಯೆ ಕೂಡಾ ಈ ಹಿಂದೆ ನಡೆದಿತ್ತು.
ಆದರೆ ಈ ಬಗ್ಗೆ ನಾರಾಯಣಪುರ ಎಡದಂಡೆ ಕಾಲುವೆ ಪ್ರದೇಶದ ರೈತರು ಮತ್ತು ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ನಮಗೆ ನೀರಿನ ಪ್ರಮಾಣ ಕಡಿಮೆಯಾಗಿ ಬತ್ತ ಬೆಳೆಯಲು ತೊಂದರೆಯಾಗುತ್ತದೆ ಎಂಬ ಭಯದಿಂದ ವಿರೋಧ ವ್ಯಕ್ತಪಡಿಸಿದ್ದರು. ಈಗ ಮತ್ತೆ ಈ ಕಾರ್ಯಕ್ಕೆ ನಿಗಮವು ಚಾಲನೆ ನೀಡಿರುವುದು ರೈತರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ ಎಂಬ ದೂರು ವ್ಯಾಪಕವಾಗಿ ಕೇಳಿ ಬಂದ ಹಿನ್ನಲೆಯಲ್ಲಿ ಇದನ್ನು ಪರೀಕ್ಷಿಸಿ ಮುಂದಿನ ದಿನಗಳಲ್ಲಿ ಕಾಲುವೆಗಳ ಬಳಿ ಈ ಯಂತ್ರಗಳನ್ನು ಜೋಡಿಸಲಾಗುವುದು.