14ರಂದು ಮಾತಾ- ಪಿತೃಗಳ ದಿನ ಆಚರಿಸಿ
ಯಾದಗಿರಿ: ಫೆ.14ರಂದು ಪ್ರೇಮಿಗಳ ದಿನಾಚರಣೆ ಆಚರಿಸುವುದನ್ನು ಶ್ರೀರಾಮಸೇನೆ ವಿರೋಧಿಸುತ್ತದೆ. ಪ್ರೀತಿ- ಪ್ರೇಮದ ಹೆಸರಿನಲ್ಲಿ ಅಮಾಯಕ ಹೆಣ್ಣುಮಕ್ಕಳು ದಾರಿ ತಪ್ಪುವ ಸಾಧ್ಯತೆಯಿದೆ. ಇದು ನಮ್ಮ ಸಂಸ್ಕೃತಿಯೂ ಅಲ್ಲ. ಆದ್ದರಿಂದ ಆ ದಿನವನ್ನು ಮಾತಾ ಪಿತೃ ದಿನವೆಂದು ಆಚರಿಸಬೇಕೆಂದು ಸೇನೆ ರಾಜ್ಯ ಗೌರವಾಧ್ಯಕ್ಷ ಆಂದೋಲಾ ಸಿದ್ದಲಿಂಗ ಶ್ರೀಗಳು ಹೇಳಿದರು.
ಇಲ್ಲಿಯ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘಟನೆಯು ಪವಿತ್ರವಾದ ಪ್ರೇಮ- ಪ್ರೀತಿಯನ್ನು ವಿರೋಧಿಸುವುದಿಲ್ಲ. ಆದರೆ ವ್ಯಾಲೆಂಟೈನ್ ಡೇ ಹೆಸರಿನಲ್ಲಿ ಯುವಕರು ದಾರಿ ತಪ್ಪುತ್ತಿದ್ದಾರೆ. ಆದ್ದರಿಂದ ಆ ದಿನವನ್ನು ಪ್ರೇಮಿಗಳ ದಿನವನ್ನಾಗಿ ಆಚರಿಸುವುದನ್ನು ಸೇನೆ ವಿರೋಧಿಸುತ್ತದೆ. ನಮ್ಮ ಕಾರ್ಯಕರ್ತರು ಇದಕ್ಕೆ ಆಸ್ಪದ ನೀಡುವುದಿಲ್ಲ ಎಂದರು.
ಜಾಗೃತಿ ಜಾಥಾ: ಪ್ರೇಮಿಗಳ ದಿನದಂದು ಯುವತಿಯರ ಮೇಲೆ ಅತ್ಯಾಚಾರ, ಕೊಲೆ, ಆತ್ಮಹತ್ಯೆಯಂಥ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದು ಅಂಕಿ- ಅಂಶಗಳಿಂದ ಬಹಿರಂಗವಾಗಿದೆ. ವಿದೇಶಿ ಸಂಸ್ಕೃತಿಗೆ ಮಾರುಹೋಗಿ ಇಂಥ ಬಹಿರಂಗ ಪ್ರೇಮ ಸಲ್ಲಾಪ ನಡೆಸುವುದು ಸರಿಯಲ್ಲ. ಆದ್ದರಿಂದ ಅಂದು ಶಾಲಾ- ಕಾಲೇಜುಗಳಲ್ಲಿ ಮಾತಾ ಪಿತೃಗಳ ದಿನವನ್ನು ಆಚರಿಸುವಂತೆ ಸೇನೆ ಮನವಿ ಮಾಡುತ್ತದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕರ್ತರು ಜಾಥಾ ಹಮ್ಮಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಓಮರ್ ಅಬ್ದುಲ್ಲಾ ಕ್ರಮಕ್ಕೆ ಖಂಡನೆ: ಸಂಸತ್ ಭವನದ ಮೇಲಿನ ದಾಳಿಯ ರುವಾರಿ ಉಗ್ರ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ಸೇನೆ ಸ್ವಾಗತಿಸುತ್ತದೆ. ಆದರೆ ಅದನ್ನು ವಿರೋಧಿಸಿ ಕಾಶ್ಮೀರದ ಕೆಲ ದೇಶದ್ರೋಹಿ ಸಂಘಟನೆಗಳು ಪ್ರತಿಭಟಿಸಿದ್ದು ಖಂಡನೀಯ. ಜತಗೆ ಸಂಘಟನೆಗಳ ಬೆಂಬಲಕ್ಕೆ ಅಲ್ಲಿನ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಬೆಂಬಲ ಸೂಚಿಸಿದ್ದನ್ನು ಶ್ರೀರಾಮಸೇನೆ ಖಂಡಿಸುತ್ತದೆ. ಅಲ್ಲದೆ, ಓಮರ್ ಅಬ್ದುಲ್ಲಾ ಅವರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಬೇಕು ಎಂದು ಒತ್ತಾಯಿಸಿದರು.
ಉಗ್ರ ಅಫ್ಜಲ್ ಗುರುಗೆ ಮರಣದಂಡನೆ ಶಿಕ್ಷೆ ಪ್ರಕಟಿಸಿ ಒಂದು ದಶಕವೇ ಕಳೆದರೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಮಾತ್ರ ಅವನಿಗೆ ರಕ್ಷಣೆ ನೀಡುವ ಮೂಲಕ ಇಲ್ಲಿಯವರೆಗೂ ಜೀವಂತವಾಗಿ ಇರುವಂತೆ ಮಾಡಿತು. ಇದರ ಪರಿಣಾಮ ಮತ್ತೊಬ್ಬ ಉಗ್ರ ಅಜ್ಮಲ್ ಕಸಬ್ ದೇಶವನ್ನು ಹೊಕ್ಕು ನೂರಾರು ಜನರ ಪ್ರಾಣ ಬಲಿ ತೆಗೆದುಕೊಂಡ. ಮುಂಬೈ ದಾಳಿಗೆ ಕೇಂದ್ರ ಸರ್ಕಾವೇ ನೇರ ಹೊಣೆ ಎಂದು ಆಂದೋಲಾಶ್ರೀ ಆಪಾದಿಸಿದರು.
ಮೇಘರಾಜ ಜಾದವ, ಸುರೇಶ, ವಿಜಯ, ಸೋಹನ್, ಶರಣು ಪಡಶೆಟ್ಟಿ ಇದ್ದರು.