ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ
ಯಾದಗಿರಿ: ಜಿಲ್ಲಾ ವಾರ್ತಾಇಲಾಖೆ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಸತಿ ನಿಲಯಗಳಲ್ಲಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಶೈಕ್ಷಣಿಕ ಪ್ರವಾಸಕ್ಕೆ ಜಿಲ್ಲಾಧಿಕಾರಿ ಆವರಣದಲ್ಲಿ ಸೋಮವಾರದಂದು ಸಮಾಜ ಕಲ್ಯಾಣ ಅಧಿಕಾರಿ ರಾಮನಗೌಡ ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರವಾಸದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಾಕಷ್ಟು ಅನುಕೂಲವಾಗಲಿದೆ. ನಾಡಿನ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪ್ರದೇಶಗಳ ಪರಿಚಯವಾಗುವುದು. ಆಯಾ ಪ್ರದೇಶಗಳ ಜನರ ಆಚಾರ ವಿಚಾರಗಳು, ಸಂಸ್ಕೃತಿ, ಭಾಷೆಗಳ ಬಗ್ಗೆ ಅರಿವು ದೊರೆತಂತಾಗುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಂತೆ ಹೇಳಿದರು.
2012-13ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ವಾರ್ತಾ ಇಲಾಖೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿರುವ ಪ್ರೌಢಶಾಲೆಯ 40 ಮಂದಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿರುವ ಈ ಶೈಕ್ಷಣಿಕ ಪ್ರವಾಸವು ಫೆ.11ರಿಂದ 14ವರೆಗೆ ನಡೆಯಲಿದೆ. ವಾರ್ತಾ ಸಹಾಯಕ ಸುಲೇಮಾನ ನದಾಫ್, ವಸತಿನಿಲಯ ಮೇಲ್ವಿಚಾರಕಿ ಮಂಜುಳಾ ಇದ್ದರು.
ಈ ತಂಡವು ವಿವಿಧ ಐತಿಹಾಸಿಕ, ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲಿದೆ. ಯಾದಗಿರಿಯಿಂದ ಹೊರಟು ಬಿಜಾಪುರ, ಆಲಮಟ್ಟಿ, ಕೂಡಲಸಂಗಮ, ಐಹೊಳೆ, ಪಟ್ಟದಕಲ್ಲು, ಬಾದಾಮಿ, ಹೊಸಪೇಟೆ, ಹಂಪಿ, ಚಿತ್ರದುರ್ಗ ಇನ್ನಿತರ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.