ಅನ್ಯ ಜಿಲ್ಲೆ ಅಭ್ಯರ್ಥಿಗಳ ಕಣ್ಣು ಯಾದಗಿರಿ ಮೇಲೆ
ಯಾದಗಿರಿ: ರಾಜ್ಯದ ಪ್ರಾಥಮಿಕ ಶಾಲೆಗಳಿಗೆ ಶಿಕ್ಷಕರ ನೇಮಕಕ್ಕಾಗಿ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 450 ಹುದ್ದೆಗೆ ನೇಮಕಾತಿ ನಡೆಯಲಿದೆ. ಇದರಿಂದ ಶಿಕ್ಷಕರ ಕೊರತೆ ಪ್ರಮಾಣ ತಗ್ಗಲಿದ್ದರೂ ಜಿಲ್ಲೆಯ ಶಿಕ್ಷಕ ಹುದ್ದೆ ಆಕಾಂಕ್ಷಿಗಳ ಆತಂಕಕ್ಕೂ ಇದು ಕಾರಣವಾಗಿದೆ.
ಏಕೆಂದರೆ- ಯಾದಗಿರಿ ಶೈಕ್ಷಣಿಕ ಜಿಲ್ಲೆಯಾದಾಗಿನಿಂದಲೂ ಇದು ಶಿಕ್ಷಕರ ಉತ್ಪಾದನಾ ಕೇಂದ್ರವೆಂದೇ ಹೆಸರಾಗಿದೆ. ಇಲ್ಲಿ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿ, ಎರಡು ವರ್ಷ ಸೇವೆ ಸಲ್ಲಿಸಿ ಸ್ವಂತ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಂಡವರ ಪ್ರಮಾಣವೇ ಜಾಸ್ತಿ. ಆದ್ದರಿಂದ ಇಲ್ಲಿ ಒಮ್ಮೆ ಶಿಕ್ಷಕರ ನೇಮಕ ಆದರೂ ನಂತರದ ವರ್ಷಗಳಲ್ಲಿ ಆ ಪ್ರಮಾಣ ಕ್ಷೀಣಿಸುತ್ತ ಬಂದು ಶೈಕ್ಷಣಿಕ ಪ್ರಗತಿಗೆ ತೀವ್ರ ತೊಂದರೆಯಾಗುತ್ತಿದೆ. ಇದು ಈ ಬಾರಿಯೂ ಪುನರಾವರ್ತನೆಯಾಗುವ ಎಲ್ಲ ಸಾಧ್ಯತೆಗಳಿವೆ.
ರಾಜ್ಯದ 30 ಶೈಕ್ಷಣಿಕ ಜಿಲ್ಲೆಗಳಲ್ಲಿ ಖಾಲಿ ಇರುವ 4 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ. ಅದರಲ್ಲಿ ಅತೀ ಹೆಚ್ಚು ಅಂದರೆ 450 ಹುದ್ದೆಗಳು ಯಾದಗಿರಿಯಲ್ಲೇ ಭರ್ತಿಯಾಗುತ್ತವೆ. ಆದ್ದರಿಂದ ಜಿಲ್ಲೆಯ ಮೇಲೆ ಸಹಜವಾಗಿಯೇ ಹೊರ ಜಿಲ್ಲೆಗಳ ಅಭ್ಯರ್ಥಿಗಳ ದೃಷ್ಟಿ ಜಿಲ್ಲೆಯತ್ತ ಬೀಳಲು ಕಾರಣವಾಗಿದೆ.
450 ಹುದ್ದೆ ಭರ್ತಿ: ರಾಜ್ಯದಲ್ಲಿ ಸದ್ಯ 12 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆ ಖಾಲಿಯಿದೆ ಎಂದು ಸರ್ಕಾರ ಹೇಳುತ್ತಿದ್ದರೂ ಸದ್ಯ 4 ಸಾವಿರ ಶಿಕ್ಷಕರ ನೇಮಕಕ್ಕೆ ಮಾತ್ರ ಅಧಿಸೂಚನೆ ಹೊರಡಿಸಿದೆ. ಕನ್ನಡ ಸಾಮಾನ್ಯ-216, ಕನ್ನಡ ವಿಜ್ಞಾನ- 71, ಇಂಗ್ಲಿಷ್- 94, ಹಿಂದಿ- 40, ಉರ್ದು ಸಾಮಾನ್ಯ- 18 ಹಾಗೂ ಉರ್ದು ವಿಜ್ಞಾನ- 11 ಹುದ್ದೆಗಳು ಭರ್ತಿಯಾಗಲಿದೆ.
ಜಿಲ್ಲೆಯಲ್ಲಿ ಕೊರತೆ ಶಿಕ್ಷಕರ ಸಂಖ್ಯೆ 1,150 ಇದ್ದು, ಈಗ ಅರ್ಧದಷ್ಟೂ ಹುದ್ದೆ ಭರ್ತಿಯಾಗುತ್ತಿಲ್ಲ. ಆದರೂ ಮುಂದಿನ ಶೈಕ್ಷಣಿಕ ವರ್ಷಕ್ಕೆ ಸ್ವಲ್ಪ ಸಹಕಾರಿಗಲಿದೆ.
ಹೊರ ಜಿಲ್ಲೆ ಅಭ್ಯರ್ಥಿಗಳ ದೃಷ್ಟಿ: ಜಿಲ್ಲೆಯಲ್ಲಿ 450 ಹುದ್ದೆ ನೇಮಕಾತಿ ನಡೆಯಲಿದ್ದು, ಧಾರವಾಡದಲ್ಲಿ ಕಡಿಮೆ ಅಂದರೆ 15 ಶಿಕ್ಷಕರ ನೇಮಕಾತಿ ನಡೆಯಲಿದೆ. ಇನ್ನು ಬೆಂಗಳೂರು, ಉಡುಪಿ ಸೇರಿದಂತೆ 4 ಶೈಕ್ಷಣಿಕ ಜಿಲ್ಲೆಗಳಲ್ಲಿ ನೇಮಕಾತಿಯೇ ನಡೆಯುತ್ತಿಲ್ಲ. ಸದ್ಯ ಡಿಇಡಿ ಕಾಲೇಜುಗಳ ಸಂಖ್ಯೆ ಎಲ್ಲೆಡೆ ಇರುವುದರಿಂದ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಅರ್ಹರಾದವರ ಸಂಖ್ಯೆಯೂ ಬಹಳಷ್ಟಿದೆ. ಆದ್ದರಿಂದ ಸಹಜವಾಗಿಯೇ ಕಡಿಮೆ ಹುದ್ದೆ ಇರುವ ಜಿಲ್ಲೆಗಳ ಅಭ್ಯರ್ಥಿಗಳು ಜಿಲ್ಲೆಯತ್ತ ನೋಟ ಹರಿಸುವುದು ನಿಶ್ಚಿತ.
ಆನ್ಲೈನ್ ಮೂಲಕ ಮಾತ್ರ ಅರ್ಜಿ ಭರ್ತಿ ಮಾಡಲು ಅವಕಾಶವಿದ್ದು, ಜಿಲ್ಲಾ ಮಟ್ಟದಲ್ಲಿ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಅಲ್ಲಿ ಹೆಚ್ಚು ಅಂಕ ಪಡೆದವರನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಕೆಗೆ ಮಾ.2 ಕೊನೆಯ ದಿನವಾಗಿದ್ದು, ಲಕ್ಷಾಂತರ ಜನ ಶಿಕ್ಷಕ ಹುದ್ದೆ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲಿದ್ದಾರೆ.
ಕಲಂ 371(ಜೆ) ಸೌಲಭ್ಯ ಆರಂಭಗೊಂಡಿಲ್ಲ: ಇತರ ಜಿಲ್ಲೆಗಳ ಅಭ್ಯರ್ಥಿಗಳು ಜಿಲ್ಲೆಯಲ್ಲಿ ಸಿಇಟಿ ಪರೀಕ್ಷೆ ಬರೆಯಲು ಅವಕಾಶವಿರುವುದರಿಂದ ಇಲ್ಲಿಯ ಅಭ್ಯರ್ಥಿಗಳು ತೀವ್ರ ಸ್ಪರ್ಧೆ ಎದುರಿಸಬೇಕಾಗುತ್ತದೆ. ಇದು ಸ್ಥಳೀಯರ ಆತಂಕಕ್ಕೂ ಕಾರಣವಾಗಿದೆ. ಆದ್ದರಿಂದ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ 371(ಜೆ) ಕಲಂ ಅನುಷ್ಠಾನಗೊಳ್ಳುವವರೆಗೆ ನೇಮಕಾತಿ ತಡೆ ಹಿಡಿಯುವಂತೆ ಈ ಭಾಗದಿಂದ ಕೂಗು ಏಳುತ್ತಿದೆ.
ಆದರೆ ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿರುವುದರಿಂದ ಅದನ್ನು ಹಿಂದಕ್ಕೆ ಪಡೆಯುವ ಸಾಧ್ಯತೆ ಕಡಿಮೆ. ಆದ್ದರಿಂದ ಜಿಲ್ಲೆಯ ಶಿಕ್ಷಕ ಹುದ್ದೆ ಆಕಾಂಕ್ಷಿಗಳು ಕಠಿಣ ಸ್ಪರ್ಧೆ ಎದುರಸಲು ಸಜ್ಜಾಗುವುದೊಂದೇ ಸದ್ಯಕ್ಕೆ ಉಳಿದ ದಾರಿ. ಹೆಚ್ಚು ಶಿಕ್ಷಕ ಹುದ್ದೆ ನೇಮಕಾತಿ ಆಗುತ್ತಿರುವುದೇ ಜಿಲ್ಲೆಯ ಅಭ್ಯರ್ಥಿಗಳಿಗೆ ಈಗ ಮಾರಕವಾಗಿರುವುದು ವ್ಯವಸ್ಥೆಯ ದುರಂತ.
-ನಾರಾಯಣ ಹೆಗಡೆ