ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಫಜಲ್ಪುರ ಅಂಗಳದಲ್ಲಿ ಸಮಾಜವಾದಿ ಪಕ್ಷ

Lingaraj Badiger
Updated On : 13 Feb 2013, 10:57 am

ಗುಲ್ಬರ್ಗ: ಜಿಲ್ಲೆಯ ಅಫಜಲ್ಪುರ ಅಸೆಂಬ್ಲಿ ಕರ್ಣದ ಆಕಾಂಕ್ಷಿಯಾಗಿರುವ ಹಾವನೂರು ಮೂಲದ ಸಮಾಜ ಸೇವಕ, ಉದ್ಯಮಿ ಗೋವಿಂದ ಭಟ್ ಜೆಡಿಎಸ್ ತೊರೆದು ಸಮಾಜವಾದಿ ಪಕ್ಷ ಸೇರಿದ್ದಾರೆ. ಈ ಬೆಳವಣಿಗೆಯಿಂದಾಗಿ ಅಫಜಲ್ಪುರ ಅಸೆಂಬ್ಲಿ ಕಣದಲ್ಲಿ ಸಮಾಜವಾದಿ ಪಕ್ಷದ ಅಸ್ತಿತ್ವ ಹಸಿರು ಚಿಗುರಿದಂತಾಗಿದೆ.
ಹಾವನೂರು ಭಟ್ ಮನೆತನದ ಗೋವಿಂದ ರಾಜಕೀಯದಲ್ಲಿ ಬಂದು ಜನಸೇವೆ ಮಾಡುವ ಹಂಬಲದವರು. ಅಫಜಲ್ಪುರದಲ್ಲಿ ಸಾಮೂಹಿಕ ವಿವಾಹ ಮಾಡುವ ಮೂಲಕ ಸುದ್ದಿ ಮಾಡಿದ್ದ ಇವರು ಇದೀಗ ಸಮಾಜವಾದಿ ಪಕ್ಷ ಸೇರುವ ಮೂಲಕ ಅಫಜಲ್ಪುರ ರಾಜಕೀಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದ್ದಾರೆ.
ತಮ್ಮ ಚಿಂತನೆ: ಬರುವ ಅಸೆಂಬ್ಲಿ ಕಣಕ್ಕಿಳಿಯುವುದಾಗಿ ಹೇಳಿರುವ ಗೋವಿಂದ ಭಟ್ ತಮ್ಮ ವ್ಯಾಪ್ತಿಯ ಯುವಕರ ತಂಡದೊಂದಿಗೆ ಕ್ಷೇತ್ರದ ಜನರ ಸತತ ಸಂಪರ್ಕ ತಾವು ಹೊಂದಿರುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆರೋಗ್ಯ ಶಿಬಿರ, ಸಾಮೂಹಿಕ ಉಚಿತ ವಿವಾಹಗಳು ಮಾಡುವ ಮೂಲಕ ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಗುರಿ ತಮ್ಮದು ಎಂದ ಅವರು ಬರುವ ದಿನಗಳಲ್ಲಿ ಅಫಜಲ್ಪುರ ಮೂಲ ಸೌಕರ್ಯ, ನೀರಾವರಿ ಯೋಜನೆಗಳು, ಹರಿದು ಹೋದಂತಹ ರಸ್ತೆ ಸಂಪರ್ಕ ಇತ್ಯಾದಿ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುವುದು, ಆಂದೋಲನ ಹುಟ್ಟುಹಾಕುವ ತಮ್ಮ ಚಿಂತನೆ ಹೊರಹಾಕಿದ್ದಾರೆ.
ಈಚೆಗಷ್ಟೇ ಜೆಡಿಎಸ್ ತೊರೆದ ತಾವು ಉತ್ತರ ಪ್ರದೇಶಕ್ಕೆ ಹೋಗಿ ಮುಲಾಯಂ ಸಿಂಗ್ ಯಾದವ್ ಅವರನ್ನು ಕಂಡು ಅವರ ಹಾಗೂ ಹಿರಿಯ ನಾಯಕರ ನೇತೃತ್ವದಲ್ಲಿ ಸಮಾಜವಾದಿ ಪಕ್ಷ ಸೇರಿದ್ದಾಗಿ ಹೇಳಿದ ಗೋವಿಂದ ಭಟ್ ಅಫಜಲ್ಪುರ ವ್ಯಾಪ್ತಿಯಲ್ಲಿ ಈ ಪಕ್ಷವನ್ನು ಬಲವಾಗಿ ಸಂಘಟಿಸುವುದಾಗಿ ಆಶಯ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ರಾಜ್ಯ ಘಟಕದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿರುವ ಮುಲಾಯಂ ಯಾದವ ತುಂಬ ವಿಶ್ವಾಸದಿಂದ ಬೆಂಬಲಿಸಿದ್ದಾರೆ. ಇದು ತಮಗೆ ತುಂಬ ಸ್ಫೂರ್ತಿ ನೀಡಿದೆ ಎಂದರು.
ಫೆ.15 ರಂದು ಕಚೇರಿ ಉದ್ಘಾಟನೆ:
ಗುಲ್ಬರ್ಗ ಮತ್ತು ಅಫಜಲ್ಪುರದಲ್ಲಿ ಫೆ.15 ರಂದು ಎಸ್ಪಿ ಪಕ್ಷದ ಕಚೇರಿ ಉದ್ಘಾಟಿಸುತ್ತಿರುವುದಾಗಿ ಗೋವಿಂದ ಭಟ್ ಹೇಳಿದ್ದಾರೆ. ಅಂದು ಬೆ.9.15 ಕ್ಕೆ ಗುಲ್ಬರ್ಗದಲ್ಲಿ ಹಾಗೂ ಮಧ್ಯಾಹ್ನ 2.15 ಕ್ಕೆ ಅಫಜಲ್ಪುರದಲ್ಲಿ ಎಸ್ಪಿ ಪಕ್ಷದ ಕಚೇರಿಗಳೊಂದಿಗೆ ಆ ಪಕ್ಷದ ಜನಪರ ಕಾರ್ಯಚಟುವಟಿಕೆಗಳನ್ನು ಆರಂಭಿಸಲಾಗುತ್ತದೆ ಎಂದು ಹೇಳಿರುವ ಗೋವಿಂದ ಭಟ್ ಈ ಕೆಲಸಗಳಿಗೆ ಅಫಜಲ್ಪುರ ಸಮಸ್ತ ಜನರ ಸಹಕಾರ- ಬೆಂಬಲ ಕೋರುವುದಾಗಿ ಹೇಳಿದ್ದಾರೆ.
ಎಸ್ಪಿ ರಾಷ್ಟ್ರೀಯ ನಾಯಕರಾದ ಕಿರಣ ಮೈ ನಂದಾ, ಕೊಲ್ಕತ್ತಾ ಮುಖಂಡ ಭರತ ಜೈನ್, ಕಮಲ ಫಾರೂಕಿ, ವಿಕಾಸ ಯಾದವ ಸೇರಿದಂತೆ ಹಲವರು ಅಂದು ಗುಲ್ಬರ್ಗ- ಅಫಜಲ್ಪುರಗಳಿಗೆ ಭೇಟಿ ಕೊಡುತ್ತಿದ್ದಾರೆ. ಫೆ.16 ರಂದು ಸಮಾಜವಾದಿ ಪಕ್ಷ- ನಾಗೇಶ್ವರ ಜೀರ್ಣೋದ್ಧಾರ ಟ್ರಸ್ಟ್ ಗಾಣಗಾಪುರ ಆಸರೆಯಲ್ಲಿ 4 ಕಡೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ನಾಲ್ಕು ಆರೋಗ್ಯ ಶಿಬಿರಗಳ ಆಯೋಜನೆ: ಫೆ   .16 ರಂದು ಅಫಜಲ್ಪುರದಲ್ಲಿ, ಫೆ.20 ರಂದು ಕರ್ಜಗಿಯಲ್ಲಿ, ಫೆ.26 ರಂದು ಚೌಡಾಪುರದಲ್ಲಿ ಹಾಗೂ ಮಾ. 1 ರಂದು ಫರತಾಬಾದ್‌ನಲ್ಲಿ ಶಿಬಿರಗಳು ನಡೆಯುತ್ತವೆ. ಕಣ್ಣು, ಕಿವಿ, ಹಲ್ಲು, ಅಧಿಕ ರಕ್ತದೊತ್ತಡ, ಚರ್ಮರೋಗ, ಮೂಲವ್ಯಾಧಿಯಂತಹ ರೋಗಗಳಿಗೆ ಉಚಿತ ಚಿಕಿತ್ಸೆಗೆ ಪರಣಿತ ವೈದ್ಯರು ಇರುತ್ತಾರೆ.
 ಜನ ಈ ಶಿಬಿರಗಳ ಸದುಪಯೋಗಪಡಿಸಿಕೊಳ್ಳುವಂತೆ ಸಮಾಜವಾದಿ ಪಕ್ಷ ರಾಜ್ಯ ಉಪಾಧ್ಯಕ್ಷ ಗೋವಿಂದ ಭಟ್ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement