ಶಿಕ್ಷಕರ ನೇಮಕಾತಿ ತಡೆಗೆ ಆಗ್ರಹಿಸಿ ಧರಣಿ
ಯಾದಗಿರಿ: ಸಂವಿಧಾನದ 371 (ಜೆ) ಕಲಂ ವಿಧಿ ಜಾರಿಗೆ ಬರುವವರೆಗೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ರಾಜ್ಯ ಸರ್ಕಾರ ಶಿಕ್ಷಕರ ನೇಮಕಾತಿ ಅಧಿಸೂಚನೆ ರದ್ದುಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ನಗರದ ಸುಭಾಶ್ಚಂದ್ರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಂತರ ಗದ್ದುಗೆ ಮಾತನಾಡಿ, ಈ ಕುರಿತಾಗಿ ಕರವೇ ವತಿಯಿಂದ ಮುಂಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಖುದ್ದಾಗಿ ಜ. 10ರಂದು ಭೇಟಿ ಮಾಡಿ 371(ಜೆ) ಕಲಂ ಜಾರಿಯಾಗುವವರೆಗೆ ಯಾವುದೇ ನೇಮಕಾತಿ ಮಾಡಬಾರದು ಎಂದು ಮನವಿ ಮಾಡಲಾಗಿತ್ತು. ರಾಜ್ಯ ಸರ್ಕಾರ ಚುನಾವಣೆ ಉದ್ದೇಶದಿಂದ ನೇಮಕಾತಿ ಮಾಡಿಕೊಳ್ಳಲು ಹೊರಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371(ಜೆ) ಅನುಷ್ಠಾನಗೊಳ್ಳುವವರೆಗೆ 4,000 ಶಿಕ್ಷಕರ ಹುದ್ದೆಗೆ ಹೊರಡಿಸಿರುವ ಅಧಿಸೂಚನೆ ಹಿಂಪಡೆಯಬೇಕು. ಕೂಡಲೇ ನೇಮಕಾತಿ ತಡೆಯದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ದೇವು ಪಾಟೀಲ್, ಸಿದ್ದುರಡ್ಡಿ, ರವಿ ತಡಿಬಿಡಿ, ಸಾಬಣ್ಣ, ಶಿವಶಂಕರ್, ಗೋವಿಂದ, ಕಾಶಿಮ್, ಮರೆಪ್ಪ, ಸಾಬಣ್ಣ, ಶಿವು ಹಿರೇಮಠ, ಭೀಮರಾಯ, ಪ್ರವೀಣ, ಸುರೇಶ, ದತ್ತು, ವೆಂಕಟೇಶ, ಸಂತೋಷ, ಕಿರಣ ಇತರರು ಇದ್ದರು.
ವಾರ್ಷಿಕ ಕ್ರೀಡಾಕೂಟಕ್ಕೆ
ಜಿಲ್ಲಾಧಿಕಾರಿ ಚಾಲನೆ
ಯಾದಗಿರಿ: ಜಿಲ್ಲಾ ಗ್ರಾಮ ಲೇಖಪಾಲಕರ ಸಂಘದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಇಲಾಖೆಯ ಪ್ರಥಮ ವಾರ್ಷಿಕ ಕ್ರೀಡಾಕೂಟವನ್ನು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಸರ್ಕಾರಿ ನೌಕರರು ಕೆಲಸ ಮಾಡುವುದರೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಸೋಲು ವ್ಯಕ್ತಿಯನ್ನು ಸದೃಢನನ್ನಾಗಿಸುತ್ತದೆ. ಗೆಲುವಿನತ್ತ ಮುನ್ನುಗ್ಗಲು ಶಕ್ತಿ ನೀಡುತ್ತದೆ. ಕ್ರೀಡೆಯಲ್ಲಿ ಸೋತರೂ ಜೀನವದಲ್ಲಿ ಮುನ್ನುಗ್ಗುವುದನ್ನು ರೂಢಿಸಿಕೊಳ್ಳಬೇಕು. ಸರ್ಕಾರಿ ನೌಕರರೂ ನಿತ್ಯ ಇಂದು ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ. ಇಂಥ ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿಯಾಗಲಿದೆ ಎಂದು ಹೇಳಿದರು. ಸಹಾಯಕ ಆಯುಕ್ತ ಪರಶುರಾಮ್, ಚುನಾವಣಾ ತಹಸೀಲ್ದಾರ್ ಗುರು ಪಾಟೀಲ್, ಜಿಲ್ಲಾ ಗ್ರಾಮ ಲೇಖಪಾಲಕರ ಸಂಘದ ಅಧ್ಯಕ್ಷ ಸಂಗಮೇಶ ದೇಸಾಯಿ, ಪ್ರಧಾನ ಕಾರ್ಯದರ್ಶಿ ಗಿರೀಶ ರಾಯಕೋಟಿ, ಸೂಗಪ್ಪ ಇದ್ದರು.