ಪ್ರಸನ್ನ ಆಂಜನೇಯ ವರ್ಧಂತ್ಯುತ್ಸವ
ಸುರಪುರ: ಇಲ್ಲಿನ ಎಸ್.ಎಚ್. ಖಾನಾಪುರ ಎಪಿಎಂಸಿ ಯಾರ್ಡಿನಲ್ಲಿರುವ ವರಸಿದ್ಧಿ ಪ್ರಸನ್ನ ಆಂಜನೇಯ ದೇವಸ್ಥಾನದ ಪ್ರಥಮ ವರ್ಧಂತಿ ಉತ್ಸವದ ಅಂಗವಾಗಿ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ದೇವಸ್ಥಾನದ ಪ್ರಾಂಗಣದಲ್ಲಿ ಗುರುವಾರ ಹನುಮಾನ ಚಾಲಿಸ ಮತ್ತು ಸುಂದರ ಕಾಂಡದ ಪಠಣ ನಡೆದವು. ಸುದರ್ಶನ ಹಾಗೂ ಮಹಾಲಕ್ಷ್ಮೀ ಮತ್ತು ಪವಮಾನ ಹೋಮ ಜರುಗಿದವು. ವರ್ತಕರ ಸಂಘದ ಅಧ್ಯಕ್ಷ ಕಿಶೋರಚಂದ ಜೈನ್ ಮತ್ತು ಬಾಲಾಜಿ ದರಕ ದಂಪತಿ ಹವಿಸ್ಸು ನೀಡಿದರು.
ಸುದರ್ಶನ ಹೋಮ ಯಾತಕ್ಕಾಗಿ?: ನೇತೃತ್ವ ವಹಿಸಿದ್ದ ಕೇದಾರನಾಥ ಶಾಸ್ತ್ರಿ ಮಾತನಾಡಿ, ಮಾನವ ತನಗೆ ಬೇಕಾದ ಮಳೆ, ಬೆಳೆ, ಆರೋಗ್ಯ, ಸಂಪತ್ತು, ಐಶ್ವರ್ಯ ಮತ್ತು ಇಷ್ಟ ಕಾಮನೆಗಳನ್ನು ದೇವತೆಗಳಿಂದ ಪಡೆದುಕೊಳ್ಳುತ್ತಾನೆ. ದೇವತೆಗಳಿಗೆ ಬೇಕಾದ ಹವಿಸ್ಸನ್ನು ಯಜ್ಞದ ಮೂಲಕ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಲೋಕ ಸೃಷ್ಟಿ ಬ್ರಹ್ಮನ ಕೆಲಸ, ವಿಷ್ಣು ಸಂರಕ್ಷಕ, ಪ್ರಳಯ ಈಶ್ವರನ ಕೆಲಸವಾಗಿದೆ. ಲೋಕ ಸಂರಕ್ಷಕನಾದ ವಿಷ್ಣುವಿನ ಸಂಪ್ರೀತಿಗಾಗಿ ಈ ಸುದರ್ಶನ ಹೋಮ ಮಾಡಲಾಗುತ್ತಿದೆ ಎಂದರು.
ಸನಾತನ ಹಿಂದೂ ಧರ್ಮ ಸಂಪ್ರದಾಯದಂತೆ ಯಜ್ಞ, ಯಾಗಗಳು, ಹೋಮ, ಹವನಗಳನ್ನು ನೆರವೇರಿಸುವುದರಿಂದ ದೇವತೆಗಳು ಸಂಪ್ರೀತಗೊಳ್ಳುತ್ತಾರೆ. ಕಷ್ಟಗಳು ದೂರವಾಗಿ ಸಮೃದ್ಧ ಬದುಕಿಗೆ ನಾಂದಿಯಾಗುತ್ತದೆ ಎಂದರು.
ವರ್ಧಂತ್ಯುತ್ಸವದಿಂದ ಆನಂದ: ಮಾರುಕಟ್ಟೆ ಪ್ರಾಂಗಣದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದಾಗಿನಿಂದಲೂ ಯಾವುದೇ ವಿಘ್ನಗಳಿಲ್ಲದೆ ವ್ಯಾಪಾರ ವಹಿವಾಟು ಸೂಸೂತ್ರವಾಗಿ ನಡೆದಿದೆ. ನಿತ್ಯವು ಪೂಜೆ ತಪ್ಪದೇ ಶ್ರದ್ಧಾ ಭಕ್ತಿಯಿಂದ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷವು ವರ್ಧಂತಿ ಉತ್ಸವ ಆಚರಣೆಯಲ್ಲಿ ಹೋಮ ಹವನ ನಡೆಸಲಾಗುತ್ತಿದೆ ಇದು ನಮಗೆ ಆನಂದ ತಂದಿದೆ ಎಂದು ಉದ್ಯಮಿ ಗ್ಯಾನಚಂದ ಜೈನ ತಮ್ಮ ಅಭಿಪ್ರಾಯ ತಿಳಿಸಿದರು.
ಸುಬ್ರಹ್ಮಣ್ಯ ಆಚಾರ್ಯ, ಸುರೇಶಕುಮಾರ ಶರ್ಮಾ, ಮಲ್ಲಿಕಾರ್ಜುನ ಶರ್ಮಾ, ಪ್ರಣಬ ಟಾಗರೆ, ಕೆ. ಸಂದೀಪ ಶರ್ಮಾ, ಪವನ, ರವಿಶಾಸ್ತ್ರಿ, ದಿನೇಶ ಪಂಡಿತ, ಶೈಲೇಶ ಪಂಡಿತ ಯಜ್ಞದ ಪೌರೋಹಿತ್ಯ ವಹಿಸಿದ್ದರು.
ಸಂಜೆ ಹೈದ್ರಾಬಾದ್ ವಿಜಯಜಿ ಜಾಜು ತಂಡದಿಂದ ಜೈಭವಾನಿ ಕೀರ್ತನ ಜರುಗಿತು. ವರ್ತಕರ ಸಂಘದ ಅಧ್ಯಕ್ಷ ಕಿಶೋರಚಂದ ನೇತೃತ್ವ ವಹಿಸಿದ್ದರು. ರಾಜಾ ಮದನಗೋಪಾಲ ನಾಯಕ, ಎಚ್.ಸಿ. ಪಾಟೀಲ, ದೇವಿಚಂದ ಜೈನ್, ದಿನೇಶ ಸಿಂಘವಿ, ಕಮಲ ಭಂಗ, ಭಾಲಾಜಿ ದರಕ್, ಬಾಲಾಜಿ ಭಂಗ, ಭೀಮಣ್ಣ ಎಸ್ಪಿಐ, ಆನಂದ ಸಿಎಂ, ರಾಜಕುಮಾರ, ನೈನಮಲ್, ಗುರು ಹಯ್ಯಾಳ, ತಿಪ್ಪಣ್ಣ ಮ್ಯಾಕಲ್, ಅಮೀತ, ಗೋಪಾಲ, ಶರಣು ಇತರರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.