ಲಾರಿ-ಬಸ್ ಮುಖಾಮುಖಿ; 17 ಮಂದಿಗೆ ಗಾಯ
ಜೇವರ್ಗಿ: ಲಾರಿ ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 17 ಜನರಿಗೆ ಗಾಯಗಳಾದ ಘಟನೆ ತಾಲೂಕಿನ ನೇದಲಗಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ 5 ಗಂಟೆಗೆ ನಡೆದಿದೆ.
ಅಪಘಾತದಲ್ಲಿ ಬಸ್ ಚಾಲಕ ಚಿದಾನಂದ ಪುಂಡಲೀಕ ಗಂಭೀರ ಗಾಯಗೊಂಡಿದ್ದಾನೆ. ಸರೋಜಾ ಸಿದ್ದಪ್ಪ, ನರಸಪ್ಪ ವಡ್ಡರ್, ನಿರ್ವಾಹಕ ಅಬ್ದುಲ್ ಅಜೀಜ್, ಗುರುನಾಥ ಮಲ್ಕಪ್ಪ ಎಂಬುವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣ ಪುಟ್ಟ ಗಾಯಗೊಂಡವರನ್ನು ಜೇವರ್ಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಸಿಪಿಐ ರಾಮಣ್ಣ ಸಾವಳಗಿ, ಪಿಎಸ್ಐ ಲಕ್ಷ್ಮಣ ಬಿರಾದಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕ ಬೆಂಕಿ: ಕಿರಾಣಿ ಅಂಗಡಿ ಭಸ್ಮ
ಚಿತ್ತಾಪುರ: ಇಲ್ಲಿಯ ಶಿಶುವಿಹಾರ ಶಾಲೆ ಎದುರುಗಡೆ ಇರುವ ಕಿರಾಣಿ ಡಬ್ಬಾ ಅಂಗಡಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿ ಭಸ್ಮಗೋಳಿಸಿದ ಘಟನೆ ಶನಿವಾರ ಮಧ್ಯರಾತ್ರಿ ಜರುಗಿದೆ.
ಅಂಗಡಿಯಲ್ಲಿದ್ದ ನೋಟಬುಕ್, ಕಿರಾಣಿ, ದಿನಸಿ ಸಾಮಾನುಗಳು ಸೇರಿದಂತೆ ಸುಮಾರು 30,900 ಮೌಲ್ಯದ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ. ಎಂದು ಪೋಲಿಸರು ತಿಳಿಸಿದ್ದಾರೆ.
ಅಂಗಡಿಯ ಮಾಲಿಕರಿಗೆ ದಾರಿಹೋಕನೊಬ್ಬ ವಿಷಯ ತಿಳಿಸಿದಾಗ ಮಾಲಿಕ ಗುರಣ್ಣ ಬಂದು ನೋಡಿದ್ದಾರೆ. ಅಂಗಡಿ ಪೂರ್ತಿಯಾಗಿ ಉರಿಯುತ್ತಿತ್ತು ತಕ್ಷಣ ಅಗ್ನಿಶಾಮಕ ಠಾಣಿಗೆ ಕರೆ ಮಾಡಿ ತಿಳಿಸಲಾಯಿತು. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಮಾಲಿಕ ಗುರಣ್ಣ ರವರು ಪೋಲಿಸ್ ಠಾಣಿಗೆ ದೂರು ನೀಡಿದಾಗ ಸ್ಥಳಕ್ಕೆ ಪಿಎಸ್ಐ ಸಂಜುಕುಮಾರ ಬಂದು ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಬಿ.ಇಡಿ ಪರೀಕ್ಷೆಯಲ್ಲಿ 8ನೇ ರ್ಯಾಂಕ್
ಗುಲ್ಬರ್ಗ: ನಗರದ ರೂರಲ್ ರೆಸಿಡೆನ್ಸಿಯಲ್ ಕಾಲೇಜ್ ಆಫ್ ಎಜ್ಯುಕೇಷನ್ ಸಂಸ್ಥೆಯ ವಿದ್ಯಾರ್ಥಿ ಶಿವಪದ್ಮಾ 85.64 ಪ್ರತಿಶತದೊಂದಿಗೆ ಬಿ.ಇಡಿ ಪರೀಕ್ಷೆಯಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ 8ನೇ ರ್ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯ ಹಾಗೂ ಉಪನ್ಯಾಸಕ ವೃಂದ ಕಾಲೇಜಿನ ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಿದ್ದಾರೆ.
17ರಂದು ಛಾಯಾಚಿತ್ರ ಪ್ರದರ್ಶನ
ಗುಲ್ಬರ್ಗ: ನಗರದ ಏಶಿಯನ್ ಮಾಲ್ನಲ್ಲಿ ಫೆ.10ರಂದು ಏರ್ಪಡಿಸಿದ್ದ ಛಾಯಾಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಅನಿವಾರ್ಯ ಕಾರಣಗಳಿಂದಾಗಿ ಫೆ.17ಕ್ಕೆ ಮುಂದೂಡಲಾಗಿದೆ. ಅನಾನುಕೂಲತೆಗಾಗಿ ಚೈತನ್ಯಮಯಿ ಆರ್ಟ್ ಗ್ಯಾಲರಿಯ ಎ.ಎಸ್. ಪಾಟೀಲ್ ವಿಷಾದ ವ್ಯಕ್ತಪಡಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.