ಶೂನ್ಯ ಬಡ್ಡಿ ಸಾಲದತ್ತ ರೈತರ ನಿರ್ಲಕ್ಷ್ಯ
ಶೇಷಮೂರ್ತಿ ಅವಧಾನಿ
ಗುಲ್ಬರ್ಗ: ಸತತ 3ನೇ ವರ್ಷ ಕೃಷಿ ಬಜೆಟ್ ಮಂಡಿಸುತ್ತಿರುವುದಾಗಿ ಹೇಳುವ ಮೂಲಕ ತಮ್ಮದು ರೈತರ ಪರ ನಿಲುವು ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ ಸರ್ಕಾರ ಈ ವರ್ಷವೂ ಮುಂದುವರಿಸಿರುವ ಬಡ್ಡಿ ರಹಿತ ಸಾಲ ಯೋಜನೆ ರೈತರಿಗೆ ಅದೆಷ್ಟು ಹಿತಕಾರಿ ಎಂಬ ಪ್ರಶ್ನೆ ಉದ್ಭವವಾಗಿದೆ.
ಏಕೆಂದರೆ ಸರ್ಕಾರದ ಬಹು ಪ್ರಚಾರದ ಈ ಯೋಜನೆ ಮೇಲ್ನೋಟಕ್ಕೆ ಆಕರ್ಷಕವಾಗಿ ಕಂಡರೂ ಮೇಲೆಲ್ಲಾ ಥಳಕು, ಒಳಗೆಲ್ಲಾ ಹುಳುಕು ಎಂಬಂತಾಗಿದೆ ಎಂದು ರೈತರೇ ಈ ಸಾಲ ಯೋಜನೆಯ ಬಗ್ಗೆ ಆಡಿಕೊಳ್ಳುವಂತಾಗಿದೆ.
ಇದರಿಂದಾಗಿ ರೈತರೆಲ್ಲರೂ ಬಡ್ಡಿ ರಹಿತ ಈ ಸಾಲ ಯೋಜನೆಯನ್ನು ಮಾಯಾಮೃಗಕ್ಕೆ ಹೋಲಿಸುತ್ತಿದ್ದಾರೆ. ಮೇಲ್ನೋಟಕ್ಕಂತೂ ಬಡ್ಡಿ ಇರೋದಿಲ್ಲ, ಆದರೆ ಈ ಯೋಜನೆಗೆ ಅಂಟಿಕೊಂಡಿರುವ ಬೆಳೆವಿಮೆ ಕಂತು ಭರಿಸುವ ಕಾರ್ಯ ಯಾವ ಬಡ್ಡಿಗೇನು ಕಮ್ಮಿ ಇಲ್ಲ ಎಂಬ ಮಾತುಗಳು ಕೇಳಿಬರಲಾರಂಭಿಸಿವೆ. ಇದರಿಂದಾಗಿ ಶೆಟ್ಟರ್ ಸರ್ಕಾರ ರೈತರಿಗೆ ಭಾರಿ ಕೊಡುಗೆ ಎಂದು ನೀಡಲ್ಪಟ್ಟಿರುವಂತಹ ಶೂನ್ಯ ಬಡ್ಡಿ ಸಾಲ ಯೋಜನೆ ರೈತರ ಪ್ರಗತಿಗೆ ಒದಗದ ಯೋಜನೆ ಎಂದು ರೈತ ಸಮೂಹದಲ್ಲೇ ಬಣ್ಣಿಸಲ್ಪಡುತ್ತಿದೆ.
ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಮಂಡಿಸಿದ 2013- 14ನೇ ಸಾಲಿನ ಮುಂಗಡ ಪತ್ರದಲ್ಲಿ ರೈತರ ಬಗ್ಗೆ ಬರೀ ಅನುಕಂಪ ವ್ಯಕ್ತಪಡಿಸಲಾಗಿದೆಯೇ ಹೊರತು ಯಾವುದೇ ಹೊಸ ಯೋಜನೆಗಳನ್ನು ಪ್ರಕಟಿಸಿಲ್ಲ ಎಂದು ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕಿನ ಅಧ್ಯಕ್ಷರಾದ ಸೋಮಶೇಖರ ಗೋನಾಯಕ ಹೇಳಿದ್ದಾರೆ.
ಏನಿದು ಬಡ್ಡಿ ರಹಿತ ಸಾಲ: ಸಣ್ಣ- ಅತಿಸಣ್ಣ ರೈತರು ಸಹಕಾರ ಬ್ಯಾಂಕುಗಳಿಂದ ಪಡೆಯುವ 1 ಲಕ್ಷ ವರೆಗಿನ ಸಾಲಕ್ಕೆ ಯಾವುದೇ ರೀತಿಯ ಬಡ್ಡಿ ಆಕರಿಸಲಾಗದು. ಇದೇ ಬಡ್ಡಿರಹಿತ ಅಥವಾ ಶೂನ್ಯ ಬಡ್ಡಿ ಸಾಲ ಕಳೆದ ವರ್ಷದಿಂದಲೇ ಜಾರಿಯಲ್ಲಿದ್ದ ಈ ಸಾಲ ಯೋಜನೆಯನ್ನು ಈ ಆರ್ಥಿಕ ವರ್ಷಕ್ಕೂ ಬಡ್ಡಿರಹಿತ ಸಾಲವಾಗಿ ಮುಂದುವರಿಸಲಾಗುವುದೆಂದು ಶೆಟ್ಟರ್ ಈ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಸಾಲದ ಬೆಂಬತ್ತಿದ ಬೆಳೆವಿಮೆ ಕಂತು: ಆದರೆ ಬೆಳೆ ವಿಮೆಯ ಪ್ರೀಮಿಯಂ ಹಣವನ್ನು ಶೇ. 7ಕ್ಕೆ ಹೆಚ್ಚಿಸಲಾಗಿದೆ. ಸಾಲದ ಹಣದ ಜೊತೆಗೆ ಬೆಳೆವಿಮೆ ಕಂತು ಭರಿಸಿವುದನ್ನು ಕಡ್ಡಾಯಗೊಳಿಸಲಾಗಿದೆ. ಅಂದರೆ ಒಂದು ಲಕ್ಷ ರೂ ಸಾಲ ಪಡೆದರೆ ಬೆಳೆವಿಮೆ ಪ್ರೀಮಿಯಂ ಹಣ 7000 ರೈತರು ವಿಮಾ ಕಂಪನಿಗೆ ಕಟ್ಟಬೇಕಾಗುತ್ತದೆ.
ಬಡ್ಡಿ ರಹಿತ ಸಾಲ ಎಂಬುದು ಬರೀ ಹೇಳಕೊಳ್ಳಲಿಕ್ಕೆ, ಆದರೆ ವಾಸ್ತವವಾಗಿ ಬಡ್ಡಿ ರಹಿತ ಸಾಲ ಇದಲ್ಲ ಎನ್ನುತ್ತಿದ್ದಾರೆ ರೈತರು. ಏಕೆಂದರೆ ಸಾಲದ ಜೊತೆಗೆ ತಳಕು ಹಾಕಿಕೊಂಡಿರುವ ಬೆಳೆವಿಮೆ ಕಂತೇ ರೈತರಲ್ಲಿ ಇಂತಹ ಭಾವನೆ ಮೂಡಲು ಮುಖ್ಯ ಕಾರಣ.
ರೈತರಿಗೆ ನಿರಾಶೆ: ಶೇ.1 ಅಥವಾ, ಶೇ. 2ರ ಬಡ್ಡಿ ವಿಧಿಸಿದ್ದರೂ ವಿಮೆ ಪ್ರೀಮಿಯಂ ಹಣವನ್ನು ರೈತರ ಪರವಾಗಿ ಸರ್ಕಾರವೇ ಭರಿಸಿದ್ದರೆ ಶೂನ್ಯ ಬಡ್ಡಿ ಸಾಲಕ್ಕೆ ಅರ್ಥ ಬರುತ್ತಿತ್ತು. ಬೆಳೆವಿಮೆ ಕಂತು ಸರ್ಕಾರವೇ ಭರಿಸಬೇಕು ಎಂಬುದು ರಾಜ್ಯದ ರೈತರ ಬಹುವರ್ಷಗಳ ಕೂಗೂ ಆಗಿತ್ತು. ರಾಜ್ಯದ ಸಹಕಾರ ಸಂಘಗಳವರೂ ಲಕ್ಷ ರು ಸಾಲಕ್ಕೆ ಶೇ. 1 ಅಥವಾ 2 ಬಡ್ಡಿ ವಿಧಿಸಿದರೂ ಪರವಾಗಿಲ್ಲ. ವಿಮೆ ಕಂತು ಸರ್ಕಾರವೇ ತುಂಬಲಿ ಎಂದು ರೈತರ ನಿಲುವನ್ನೇ ಬೆಂಬಲಿಸಿ ಸರ್ಕಾರದ ಗಮನ ಸೆಳೆದಿದ್ದರು. ಸರ್ಕಾರವೇ ರೈತರ ಬೆಳೆ ವಿಮೆ ಪ್ರೀಮಿಯಂ ಹಣ ಕಟ್ಟುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗುತ್ತದೆ ಎಂಬ ನಿರೀಕ್ಷೆ ಇರುವಾಗಲೇ ಈ ರೀತಿ ಸರ್ಕಾರ ಶೂನ್ಯ ಬಡ್ಡಿ ಸಾಲದ ಮಾತನಾಡಿ ಕೈತೊಳೆದು ಕೊಂಡಿರುವುದು ರೈತರಿಗೆ ನಿರಾಶೆ ಮೂಡಿಸಿದೆ.
ಕಳೆದ ವರ್ಷದ ಸಹಕಾರಿ ಸಪ್ತಾಹದಲ್ಲಿ ಭಾಗವಹಿಸಿದ್ದ ಸಹಕಾರಿ ಸಚಿವರು ಬೆಳೆವಿಮೆ ಪ್ರೀಮಿಯಂ ಹಣ ಸರ್ಕಾರವೇ ತುಂಬಲಿದೆ ಎಂದು ಪ್ರಕಟಿಸಿದ್ದರು. ಅದಲ್ಲದೇ ಇತ್ತೀಚಿಗೆ ಒಂದುವರೆ ತಿಂಗಳು ಹಿಂದೆ ಮುಖ್ಯಮಂತ್ರಿಗಳಿಗೆ ಸಹಕಾರಿ ಸಂಘಗಳ ಅಧ್ಯಕ್ಷರೆಲ್ಲರೂ ಕೂಡಿಕೊಂಡು ಮನವಿ ಸಲ್ಲಿಸಿದಾಗಲೂ ಬೆಳೆವಿಮೆ ಕಂತು ರೈತರ ಪರವಾಗಿ ಸರ್ಕಾರವೇ ತುಂಬುವುದು ಎಂಬರ್ಥದಲ್ಲೇ ಭರವಸೆಗಳು ಕೇಳಿ ಬಂದಿದ್ದವು. ಆದರೆ ಬಜೆಟ್‌ನಲ್ಲಿ ಅದ್ಯಾವುದು ಕಾಣದೆ ರೈತರು ಸಾರ್ಕರ ನಿಲುವು, ಶೂನ್ಯ ಬಡ್ಡಿ ಸಾಲ ಯೋಜನೆಯ ಬಗ್ಗೆ ನಿರಾಶರಾಗುವಂತಾಗಿದೆ.
ಬೆಳೆವಿಮೆ ಕಂತು ಸರ್ಕಾರವೇ ತುಂಬಿದರೆ... ಬೆಳೆಸಾಲದಲ್ಲಿನ ಶೇ.7 ರಷ್ಟು ವಿಮಾ ಕಂತಿನ ಪಾಲು ಸರ್ಕಾರವೇ ತುಂಬಿದ್ದರೆ ಸರ್ಕಾರದ ಹಂತದಲ್ಲೇ ಬೆಳೆವಿಮೆ ಮಂಜೂರಾತಿಗೆ ಯತ್ನಗಳು ಸಾಗುತ್ತವೆ. ರೈತರಿಗೆಲ್ಲರಿಗೂ ವಿಮೆ ಹಣ ಬೇಗ ಕೈ ಸೇರುವಂತಾಗುತ್ತದೆ. ಒಂದು ವೇಳೆ ಬೆಳೆ ನಷ್ಟವಾದಾಗ ಬೆಳೆವಿಮೆ ಬಂದರೆ ಸಂಪೂರ್ಣ ಸಾಲ ಮನ್ನಾ ಮಾಡಿದಂತಾಗಿದೆ. ಸರ್ಕಾರವೇ ಬೆಳೆವಿಮೆ ಪ್ರೀಮಿಯಂ ತುಂಬಿದರೆ ಸಾಲ ಮನ್ನಾ ಮಾಡುವಂತಹ ಪ್ರಸಂಗಗಳೇ ಎದುರಾಗುವುದಿಲ್ಲ.
ಸದ್ಯ ರೈತರ ಬೆಳೆ ನಷ್ಟಕ್ಕೆ ಪ್ರತಿಯಾಗಿ ವಿಮೆ ಹಣ ಸರಿಯಾದ ಸಮಯಕ್ಕೆ ಪಾವತಿಯಾಗುತ್ತಿಲ್ಲ. ವಿಮಾ ಕಂಪನಿಗಳು ರೈತರ ಹಣ ಕೊಳ್ಳೆ ಹೊಡೆಯಲು ನಿಂತಿವೆ.