'ಒಗ್ಗಟ್ಟಿನಿಂದ ಕೆಲಸ ಮಾಡಿ ಅಭ್ಯರ್ಥಿ ಗೆಲ್ಲಿಸುತ್ತೇವೆ'
ಅಫ್ಜಲಪುರ: ವಿಧಾನಸಭೆ ಚುನಾವಣೆಯಲ್ಲಿ ಪಕ್ಷದವರು ಯಾರಿಗೇ ಟಿಕೆಟ್ ನೀಡಿದರೂ, ಎಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ವಿಧಾನಸಭೆಗೆ ಕಳುಹಿಸಿಕೊಡುತ್ತೇವೆ ಎಂದು ತಾಲೂಕು ಉಸ್ತುವಾರಿ ಧರ್ಮಣ್ಣ ಇಟಗಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಮಾತನಾಡಿದ ಹಲವು ನಾಯಕರು, ಟಿಕೆಟ್ ಆಕಾಂಕ್ಷಿಗಳು, ಕಳೆದ 5 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳ ಸಾಧನೆ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಸಹಕಾರಿಯಾಗಲಿದೆ. ಸರ್ಕಾರದ ಸಾಧನೆಯನ್ನು ಜನರಿಗೆ ತಿಳಿಸುವ ಕಾರ್ಯಕ್ರಮ ಜರುಗಲಿದೆ ಎಂದರು. ಬಿಜೆಪಿ ತಾಲೂಕು ಉಸ್ತುವಾರಿ ನೋಡಿಕೊಳ್ಳುತ್ತಿರುವ ಧರ್ಮಣ್ಣ ಇಟಗಾ ಮಾತನಾಡಿ, ಅಫ್ಜಲಪುರ ಮತಕ್ಷೇತ್ರದಿಂದ ಮಲ್ಲಿಕಾರ್ಜುನ ನಿಂಗದಳ್ಳಿ ಅವ್ವಣ್ಣ ಮ್ಯಾಕರಿ ಅಶೋಕ ಬಗಲಿ ಚಂದಮ್ಮ ಪಾಟೀಲ ಡಾ ಸಿ.ವಿ. ಟಕ್ಕಳಕಿ ಫರಹತಾಬಾದ ವಲತದ ದಿಲೀಪ ಪಾಟೀಲ ಎಸ್.ಎ ಪಾಟೀಲ ಬಿಜೆಪಿಯಿಂದ ಸ್ಪರ್ಧಿಸುವ ಆಕಾಂಕ್ಷಿಗಳಾಗಿದ್ದು, ಅವರ ಹೆಸರುಗಳನ್ನು ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಕಳುಹಿಸಿ ಕೊಡಲಾಗಿದೆ. 15 ದಿನಗಳಲ್ಲಿ ಅಭ್ಯರ್ಥಿಗಳ ಹೆಸರುಗಳು ಪ್ರಕಟಿಸಲಾಗುವುದು ಎಂದು ಹೇಳಿದರು. ತಾಲೂಕು ಬಿಜೆಪಿ ಅಧ್ಯಕ್ಷ ಅಶೋಕ ಬಗಲಿ ಅವ್ವಣ್ಣ ಮ್ಯಾಕೇರಿ ಚಂದಮ್ಮಾ ಪಾಟೀಲ ಡಾ.ಸಿ.ವಿ ಟಕ್ಕಳಕಿ ಗಂಗಾಧರ ಶ್ರೀಗಿರಿ ರಮೇಶ ನೀಲಗಾರ ಶರಣು ಕುಂಬಾರ ಇದ್ದರು.
ಕಾಮಗಾರಿ ಗುಣಮಟ್ಟವಿರಲಿ: ಶಾಸಕ
ಅಫಜಲ್ಪುರ: ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಬೇಕು, ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಮುಗಿಸಬೇಕೆಂದು ಶಾಸಕ ಮಾಲೀಕಯ್ಯಾ ಗುತ್ತೇದಾರ ಎಚ್ಚರಿಕೆ ನೀಡಿದರು. ತಾಲೂಕಿನ ದೇವಲಗಾಣಪುರದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಹಮ್ಮಿಕೊಂಡಿರುವ ಗಾಣಗಾಪುರ ಸಂಗಮ ರಸ್ತೆ ಕಾಮಗಾರಿಗೆ ಚಾಲನೆ ಮಾತನಾಡಿ, 3.21ಲಕ್ಷ ಅನುದಾನದಲ್ಲಿ 4.37 ಕಿಮೀ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಹೇಳಿದರು. ಇದೇ ವೇಳೆ ಗ್ರಾಪಂ.ಗೆ ಭೇಟಿ ನೀಡಿ ಅಭಿವೃದ್ಧಿ ಅಧಿಕಾರಿಯೊಂದಿಗೆ ಚರ್ಚಿಸಿದರು. ಸಮರ್ಪಕವಾಗಿ ಅಭಿವೃದ್ಧಿಯ ಬಗ್ಗೆ ಉತ್ತರ ನೀಡದ ಅಧಿಕಾರಿಯನ್ನು ತರಾಟೆಗೆ ತಗೆದುಕೊಂಡರು. ಸಾರ್ವಜನಿಕರ ಸೇವೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. ದೇವಲ ಗಾಣಗಾಪುರದಲ್ಲಿ ಬಸವ ವಸತಿ ಯೋಜನೆ ಅಡಿಯಲ್ಲಿ 200 ಮನೆ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಜಾತಿವಾರು ಸಮೀಕ್ಷೆ ಮಾಡಿ ಮನೆಗಳನ್ನು ವಿತರಿಸಲಾಗುವುದೆಂದು ಹೇಳಿದರು. ತಾಪಂ ಸದಸ್ಯ ದತ್ತು ಶಿಂಧೆ ದತ್ತಾತ್ರಯ, ಕೊಳ್ಳೂರ ಮರೆಪ್ಪ ಬಳಗುಂಪಿ ನಾಗೇಶಭಟ್ ಪೂಜಾರಿ, ನಾಗೇಶ ಹೊಸಮನಿ, ಅಧಿಕಾರಿಗಳಾದ ಶರಣಬಸಪ್ಪ ನಾಗನಳ್ಳಿ, ತಾಪಂ ಅಧಿಕಾರಿ ಶಿವಶರಣಪ್ಪ ನಂದಗಿರಿ, ಮಹಾದೇವ ಸಿಂಧೆ ಎಂಜಿನಿಯರ್ ರಮೇಶ, ಅಭಿವೃದ್ಧಿ ಅಧಿಕಾರಿ ಬಸೀರ ಅಹ್ಮದ್ ಜಮಾದಾರ ಇದ್ದರು.