ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದು, ನಾಳೆ ಶಾಲೆ- ಕಾಲೇಜುಗಳಿಗೆ ರಜೆ

Lingaraj Badiger
Updated On : 20 Feb 2013, 11:34 am

ಗುಲ್ಬರ್ಗ: ಕಾರ್ಮಿಕರ ಶೋಷಣೆ ವಿರುದ್ಧ ಫೆ. 20, 21ರಂದು ದೇಶಾದ್ಯಂತ ನಡೆಯಲಿರುವ ಅಖಿಲ ಭಾರತ ಮುಷ್ಕರಕ್ಕೆ ಕೇಂದ್ರ ಸರ್ಕಾರದಲ್ಲಿನ ಕಾರ್ಮಿಕ- ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ತವರೂರು ಗುಲ್ಬರ್ಗದಲ್ಲಿಯೂ ಭಾರಿ ಬೆಂಬಲ ವ್ಯಕ್ತವಾಗಿದೆ.
ವಿವಿಧ ಕಾರ್ಮಿಕ ಸಂಘಟನೆಗಳು ಮಹಾ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ನೀಡಿವೆ. 2 ದಿನಗಳ ಮುಷ್ಕರದ ಮುನ್ನಾ ದಿನವಾದ ಮಂಗಳವಾರ ಕಾರ್ಮಿಕ ಹೋರಾಟಗಾರ ಎಸ್.ಕೆ. ಕಾಂತಾ, ಮಾರುತಿ ಮಾನ್ಪಡೆ, ಶೌಕತ್ ಅಲಿ ಆಲೂರ್, ಸೋಮಶೇಖರ ಯಾದಗಿರಿ ಸೇರಿದಂತೆ ನೂರಾರು ನಾಯಕರು, ಕಾರ್ಮಿಕರು ಸೇರಿಕೊಂಡು ಕೇಂದ್ರ ಬಸ್ ನಿಲ್ದಾಣದಿಂದ ಪಂಜಿನ ಮೆರವಣಿಗೆ ನಡೆಸಿ ಜನಮನ ಸೆಳೆದರು.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಆಸರೆಯಲ್ಲಿ ಗುಲ್ಬರ್ಗದಲ್ಲಿ ಮಹಾ ಮುಷ್ಕರ ನಡೆಯುತ್ತಲಿದೆ. ಕಾರ್ಮಿಕರ ಶೋಷಣೆ, ಬೇಡಿಕೆಗಳ ವಿಚಾರವಾಗಿ ಘೋಷಣೆಗಳನ್ನು ಕೂಗುತ್ತ 48 ಗಂಟೆಗಳ ಕಾರ್ಮಿಕರ ಮುಷ್ಕರಕ್ಕೆ ಸಹಕರಿಸುವಂತೆ ಸಮಾಜದ ವಿವಿಧ ಸಂಘ- ಸಂಸ್ಥೆಗಳು, ಮುಖಂಡರನ್ನು ಕೋರಿದರು.
ಜನರಲ್ಲಿ ಜಾಗೃತಿ: ಪಂಜಿನ ಮೆರವಣಿಗೆ ನಂತರ ಶೌಕತ್ ಅಲಿ ಆಲೂರ್, ಗಂಗಮ್ಮ ಬಿರಾದಾರ್, ಮೌಲಾ ಮುಲ್ಲಾ, ಮಾರುತಿ ಮಾನ್ಪಡೆ ಸೇರಿದಂತೆ ಸೇರಿದಂತೆ ಅನೇಕರು ಸೂಪರ್ ಮಾರ್ಕೆಟ್, ಬಸ್, ರೇಲ್ವೆ ನಿಲ್ದಾಣಗಳಲ್ಲಿ ಬೀದಿ ಬದಿಯಲ್ಲೇ ಗುಂಪು ಚರ್ಚೆಗಳನ್ನು ಮಾಡುವ ಮೂಲಕ ಸಾರ್ವಜನಿಕರನ್ನು ಮುಷ್ಕರದ ಕುರಿತಂತೆ ಹೇಳುವ ಪ್ರಯತ್ನ ಮಾಡಿದರಲ್ಲದೆ, ಕೇಂದ್ರದ ಧೋರಣೆಗಳು, ನೀತಿಗಳಿಂದಾಗಿ ಕಾರ್ಮಿಕರ ಮೇಲೆ ಅದ್ಹೇಗೆ ಅನ್ಯಾಯವಾಗುತ್ತಿದೆ, ಕಾರ್ಮಿಕ ಕುಟುಂಬಗಳು ದೇಶಾದ್ಯಂತ ಹೇಗೆ ಸಂಕಷ್ಟದಲ್ಲಿ ಬದುಕುತ್ತಿವೆ ಎಂಬುದನ್ನು ವಿವರಿಸುತ್ತ ಹೋರಾಟದ ಅಗತ್ಯತೆಯನ್ನು ತಿಳಿಯಪಡಿಸಿದರು.
ಫೆ.19 ರ ಸಂಜೆ 7ಗಂಟೆಗೆ ಕೇಂದ್ರ ಬಸ್ ನಿಲ್ದಾಣದಿಂದ ಪಂಜಿನ ಮೆರವಣಿಗೆ ನಡೆದಾಗ ನಗರ ಸಂಚಾರದಲ್ಲಿ ಅವ್ಯವಸ್ಥೆ ಕಂಡಿತು. ಫೆ.20 ರಂದು ಬೆ.7ರಿಂದ 11ರ ವರೆಗೆ ಬೈಕ್ ರ್ಯಾಲಿ, ನಂತರ ಸರ್ದಾರ್ ವೃತ್ತ, ಸೂಪರ್ ಮಾರ್ಕೆಟ್, ಚಪ್ಪಲ್ ಬಜಾರ್, ಚೌಕವರೆಗೆ ಪಾದಯಾತ್ರೆ. ಅಂದೇ ಸಂಜೆ ಡಿಸಿ ಕಚೇರಿಯವೆರಗೂ ಪಾದಯಾತ್ರೆ ಕಾರ್ಮಿಕ ಸಂಘಟನೆಗಳು ಆಯೋಜಿಸಿವೆ. ರೇಲ್ವೆ ಮಜದೂರ್ ಯೂನಿಯನ್ ಕಚೇರಿಯಿಂದ ಹೋರಾಟ ಆರಂಭವಾಗಲಿದೆ ಎಂದು ಮಾರುತಿ ಮಾನ್ಪಡೆ ಹೇಳಿದ್ದಾರೆ.
21 ರಂದು ರೈಲು ತಡೆದು ಹೋರಾಟ: ಫೆ.21ರಂದು ಬೆ.10ಕ್ಕೆ ಕೇಂದ್ರದ ಧೋರಣೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ, ಅಲ್ಲಿಂದ ರೈಲು ನಿಲ್ದಾಣದವರೆಗೂ ಮೆರವಣಿಗೆ ನಡೆಸಿ ರೈಲ್ ರೋಕೋ ಚಳವಳಿ ಮಾಡಲಾಗುತ್ತದೆ. 48 ಗಂಟೆಗಳ ಮುಷ್ಕರಕ್ಕೆ ಎಲ್ಲ ವರ್ಗಗಳು ಬೆಂಬಲಿಸುವ ಆಶಯ ತಮ್ಮದು ಎಂದು ಕಾಂತಾ, ಮಾನ್ಪಡೆ ಸೇರಿದಂತೆ ಅನೇಕ ಕಾರ್ಮಿಕ ನಾಯಕರು ಹೇಳಿದ್ದಾರೆ. ರಾಜಶ್ರೀ ಸಿಮೆಂಟ್ ಯೂನಿಯನ್, ಶಹಾಬಾದ್ ಸಿಮೆಂಟ್ ವರ್ಕರ್ಸ್ ಘಟಕ, ಎನ್ಆರ್ಎಂಯು, ವಿಮಾ ನೌಕರರ ಸಂಘ, ಸಿಐಟಿಯೂ, ರಾಜ್ಯ ಸರ್ಕಾರಿ ನೌಕರರ ಸಂಘ ಸೇರಿದಂತೆ ಅನೇಕ ಕಾರ್ಮಿಕ ಪರ ಸಂಘಟನೆಗಳು ಬೆಂಬಲಿಸಿವೆ.                                                            
ಶಾಲಾ-ಕಾಲೇಜುಗಳಿಗೆ 2 ದಿನ ರಜೆ: ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಫೆ.20, 21ರಂದು ಹಮ್ಮಿಕೊಂಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಎರಡು ದಿನಗಳ ಕಾಲ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ರಜೆಯನ್ನು ಘೋಷಿಸಿದ್ದಾರೆ.
ಬ್ಯಾಂಕ್, ಎಲ್ಐಸಿ, ಸಾರಿಗೆ ಸಂಸ್ಥೆ, ಆಟೋ ಚಾಲಕರು, ಚಿಲ್ಲರೆ ವರ್ತಕರು, ಸ್ತ್ರೀ ಶಕ್ತಿ ಗುಂಪುಗಳು ಸೇರಿದಂತೆ ಎಲ್ಲ ರಂಗದಲ್ಲಿರುವ ಕಾರ್ಮಿಕರು, ಸಂಘಟನೆಗಳವರು ಮುಷ್ಕರವನ್ನು ಬೆಂಬಲಿಸುತ್ತಿದ್ದಾರೆ. ಬೆ.6ರಿಂದ ಸಂಜೆ 6ರವರೆಗೂ ಕಾರ್ಮಿಕರ ಮುಷ್ಕರ ನಡೆಯಲಿದೆ. ಇದರಿಂದಾಗಿ ಸಾರಿಗೆ ನೌಕರರೂ ಮುಷ್ಕರದಲ್ಲಿ ಇರುತ್ತಾರೆ. ಆದ್ದರಿಂದ ಬಸ್ ಸಂಚಾರವೂ ವ್ಯತ್ಯಕ್ಕೆ ಒಳಗಾಗಲಿದೆ. ಬೆ.6ಕ್ಕೆ ಬಸ್ ನಿಲ್ದಾಣದಿಂದಲೇ ಬೈಕ್ ರ್ಯಾಲಿ ನಡೆಯಲಿದೆ. ಬೆ. 11.30ಕ್ಕೆ ಸೂಪರ್ರ್ ಮಾರ್ಕೆಟ್ನಿಂದ ಸರ್ದಾರ್ ಪಟೇಲ್ ವೃತ್ತದವರೆಗೂ ರ್ಯಾಲಿ ನಡೆಯುತ್ತದೆ. ಅಲ್ಲೇ ಬಹಿರಂಗ ಸಭೆಯೂ ನಡೆಯಲಿದೆ ಎಂದಜು ಶೌಕತ್ ಆಲೂರ್ ಹೇಳಿದ್ದಾರೆ.
ಎಚ್ಕೆಸಿಸಿಐ ಬೆಂಬಲ: ಮುಷ್ಕರಕ್ಕೆ ಹೈ-ಕ ವಾಣಿಜ್ಯೋದ್ಯಮ ಸಂಸ್ಥೆ ಬೆಂಬಲ ಸೂಚಿಸಿ ಹೇಳಿಕೆ ನೀಡಿದೆ. ಗುವಿವಿ ಶಿಕ್ಷಕೇತರ ನೌಕರರ ಸಂಘದವರೂ ಮುಷ್ಕರದಲ್ಲಿ ಭಾಗವಹಿಸಿ ತಮ್ಮ ಬೇಡಿಕೆಗಳಿಗೆ ಆಗ್ರಹಿಸಲಿದ್ದಾರೆ ಎಂದು ಸಂಘದ ಪ್ರ.ಕಾರ್ಯದರ್ಶಿ ಆರ್. ಎಸ್. ಹೊಸಮಠ, ಶ್ರೀಮಂತ ಸಾವಳಗಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement