ಕನ್ನಡ ಭಾಷೆ- ಸಾಹಿತ್ಯಕ್ಕೆ ಸರಿಸಾಟಿ ಎಲ್ಲಿ?
ಗುಲ್ಬರ್ಗ: 12ನೇ ಶತಮಾನದಲ್ಲಿ ಬಸವ, ಅಲ್ಲಮರು ವಚನಗಳನ್ನು ಕನ್ನಡದಲ್ಲಿ ಬರೆಯುತ್ತಿದ್ದಾಗ ಐರೋಪ್ಯ ರಾಷ್ಟ್ರಗಳಲ್ಲಿ ಇಂಗ್ಲಿಷ್ ಕಾಡುಭಾಷೆಯಾಗಿತ್ತು. ಪ್ರಾದೇಶಿಕ ಭಾಷೆಯಲ್ಲಿಯೇ ಕೃತಿಗಳ ರಚನೆ ಸರ್ವಶ್ರೇಷ್ಠ ಎಂದು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದು ಕನ್ನಡದ ಕವಿರಾಜಮಾರ್ಗ. ಕನ್ನಡ ಪ್ರಗತಿಪರ ಚಿಂತನೆಯ ವಿಶಾಲ ತಳಹದಿಯ ಗಟ್ಟಿ ಭಾಷೆ, ಜಾಗತಿಕ ತತ್ವ- ಸಿದ್ಧಾಂತಗಳನ್ನೆಲ್ಲ ಅರಗಿಸಿಕೊಂಡು ತನ್ನದೇ ಆದಂತಹ ಗಟ್ಟಿತನ ಮೈಗೂಡಿಸಿಕೊಂಡ ಕನ್ನಡಕ್ಕೆ ಸರಿಸಾಟಿ ಎಲ್ಲಿದೆ ಹೇಳಿ?
- ಹೀಗೆಂದವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ. ಕಳೆದ 3 ದಿನಗಳಿಂದ ಗುಲ್ಬರ್ಗ ಸಂಚಾರದಲ್ಲಿರುವ ಡಾ. ಅನಂತಮೂರ್ತಿ ಬುಧವಾರ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ದೇಸಿ ಕನ್ನಡ- ಜಾಗತಿಕ ಚಿಂತನ ಮಾತುಕತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅನಾರೋಗ್ಯದ ನಿಮಿತ್ತ ತುಸು ತಡವಾಗಿ ಕಾರ್ಯಕ್ರಮಕ್ಕೆ ಬಂದರೂ ತಮ್ಮ ಮಾತು ಆಲಿಸಲು ಸೇರಿದ್ದ ಸಾಹಿತ್ಯಾಸಕ್ತರು, ಸಾಹಿತಿಗಳು, ಚಿಂತಕರನ್ನು ನಿರಾಶೆಗೊಳಿಸದೆ ಗಂಭೀರವಾದಂತಹ ವಿಷಯಗಳನ್ನೇ ತಮ್ಮ ಮಾತುಗಳಲ್ಲಿ ಪ್ರಸ್ತಾಪಿಸುವ ಮೂಲಕ ಸೇರಿದ್ದವರ ಮನದಲ್ಲೆಲ್ಲ ಹೊಸ ಚಿಂತನೆಗೆ ಪ್ರೇರೇಪಿಸಿದರು.
ದೇಸೀ ಕನ್ನಡದತ್ತ ಒಲವು ತೋರಿ: ಪ್ರಾದೇಶಿಕ ಭಾಷೆಯಲ್ಲಿ ಕಡತಿ ರಚನೆಯೇ ಸರ್ವಶ್ರೇಷ್ಠ. ಅದು ಮುಂದೆ ಅನುವಾದಗೊಂಡು ಅನ್ಯ ಭಾಷೆಗಳಲ್ಲಿ ಪರಿಚಯವಾಗಲಿ, ಮಾತೃ ಭಾಷೆಯಲ್ಲಿನ ಚಿಂತನೆಗಳು, ಅದಕ್ಕಿರುವ ಮೊನಚುತನ, ಗಟ್ಟಿತನ ಇನ್ನಾವ ಭಾಷೆಯಲ್ಲಿ ಬರಲು ಸಾಧ್ಯ ಎಂದು ಪ್ರಶ್ನಿಸಿದ ಡಾ. ಅನಂತಮೂರ್ತಿ, ದೇಸಿ ಕನ್ನಡವನ್ನು ಉಳಿಸುವ, ಬೆಳೆಸುವ ಕೆಲಸಕ್ಕೆ ಎಲ್ಲರೂ ಇಂದು ಕಟಿಬದ್ಧರಾಗಬೇಕಾಗಿದೆ ಎಂದರು.
ವಿದೇಶಿ ಸಾಹಿತ್ಯದ ಹಲವು ಸಂಗತಿಗಳನ್ನು ತಮ್ಮ ಅಧ್ಯಯನ ಹಾಗೂ ಅನುಭವದ ಆಳದಿಂದ ಹೆಕ್ಕಿ ತೆಗೆದು ಸಭಿಕರಿಗೆ ಉಣಬಡಿಸಿದ ಅವರು, ಪೆಟಿಕ್ ಮೊದಲಾದ ವಿದೇಶಿ ಕವಿ, ಸಾಹಿತಿಗಳಿಗೆ ಕೊನೆ ಗಳಿಗೆಯಲ್ಲಿ ಪ್ರಾದೇಶಿಕ ಭಾಷೆಯ ಮಹತ್ವ ಅರಿವಿಗೆ ಬಂತು. ಅವರು ಅದರಲ್ಲೇ ತಮ್ಮ ಕೃತಿಗಳನ್ನು ರಚಿಸಿದರು ಎಂದರು.
ಯಾವುದಕ್ಕೂ ಕಮ್ಮಿಯಿಲ್ಲ: ಕುವೆಂಪು, ಕಾರಂತರಂತಹ ಮಹಾನ್ ಸಾಹಿತಿಗಳು ಬರೆದ ಕನ್ನಡದ ಕೃತಿಗಳು ಯಾವ ಭಾಷೆಯ ಸಾಹಿತ್ಯ ಕೃತಿಗಳಿಗೂ ಕಡಿಮೆಯಿಲ್ಲ. ಕಾರಂತರ ಚೋಮನದುಡಿಯಲ್ಲಿ ಪಾತ್ರಗಳು ತುಳುವಿನಲ್ಲಿ ಮಾತನಾಡಿದರೂ ಅದು ಕನ್ನಡದ ಅದ್ಭುತ ಕೃತಿಯಾಗಿ ನಮ್ಮೆಲ್ಲರ ಮುಂದೆ ನಿಲ್ಲುತ್ತದೆ. ತುಳು ಕನ್ನಡದಲ್ಲಿ ಒಳಗೊಂಡಂತಹ ಅದ್ಭುತ ಅನುಭವ ನಮಗೆ ನೀಡುತ್ತದೆ.
ಹೀಗೆ ಕನ್ನಡ ತನ್ನ ಬೇರುಗಳನ್ನು ಆಳವಾಗಿ ಸ್ಥಳೀಯವಾಗಿ ಬಿಟ್ಟುಕೊಂಡು ನಿಂತ ಮಹಾನ್ ವೃಕ್ಷ. ಅದರ ರೆಂಬೆ, ಕೊಂಬೆಗಳಲ್ಲೆಲ್ಲಾ ಅನೇಕ ಹಕ್ಕಿಗಳು(ಅನ್ಯ ಭಾಷೆಯ) ಬಂದು ಕುಳಿತುಕೊಳ್ಳುತ್ತವೆ. ಈ ಪ್ರಕ್ರಿಯೆ ಸಾಗಿದೆ. ಆದರೆ ಕನ್ನಡ ತನ್ನ ಗಟ್ಟಿತನ ಕಳೆದುಕೊಳ್ಳಬಾರದು. ಕನ್ನಡ ಉಳಿಸುವ ಕೆಲಸಕ್ಕೆ ಇಂದು ಎಲ್ಲರೂ ಒಂದಾಗಬೇಕಾಗಿದೆ ಎಂದರು.
ಸಾಮರಸ್ಯದ ಬೀಡು: ಕರ್ನಾಟಕವೇ ಮಿನಿ ಭಾರತ, ಅದರಲ್ಲಿರುವ ಗುಲ್ಬರ್ಗ ಧರ್ಮ, ಭಾಷೆಗಳ ಸಾಮರಸ್ಯದ ಬೀಡು. ಇಲ್ಲಿ ಭಾಷಾ ಸಾಮರಸ್ಯದ ಕಮ್ಮಟ ಮಾಡಿದರೆ ಸಾಕು ಯಾವುದೇ ತೊಂದರೆ ಇಲ್ಲದಂತೆ ಕನ್ನಡ, ಮರಾಠಿ, ಉರ್ದು, ತೆಲಗು, ಹಿಂದಿ, ಸಂಸ್ಕೃತದಲ್ಲಿ ಎಲ್ಲರೂ ಅದನ್ನು ಓದಿಕೊಳ್ಳುವಂತಾಗುತ್ತದೆ. ಇವೆಲ್ಲ ಬಾಷೆಯ ಸಮಾಚಾರ ಪತ್ರಗಳು ಇಲ್ಲಿ ನಿತ್ಯವೂ ಓದಲ್ಪಡುತ್ತವೆ ಎಂದು ಗುಲ್ಬರ್ಗದ ಭಾಷಾ ಸಾಮರಸ್ಯದ ಸಂಸ್ಕೃತಿಯನ್ನು ಡಾ. ಅನಂತಮೂರ್ತಿ ಬಹುವಾಗಿ ಮೆಚ್ಚಿದರು.
ಮಕ್ಕಳಿಗೆ ಕನ್ನಡ ಕಲಿಸಿ. ಅದರ ಜೊತೆಗೇ ಅನ್ಯ ಭಾಷೆಗಳನ್ನು ಅವರು ಕಲಿಯಲಿ. ಕನ್ನಡ ಸಂಪೂರ್ಣ ಕೈಬಿಟ್ಟು ಇತರೆ ಭಾಷೆಗಳಿಗೆ ಜೋತು ಬಿದ್ದಲ್ಲಿ ಮಕ್ಕಳ ಚಿಂತನೆ ತನ್ನ ಪ್ರಖರತೆ, ಮೊನಚುತನ ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು ಎಂದು ತಮ್ಮನ್ನೇ ಉದಾಹರಿಸುತ್ತ ತಾವು ಕನ್ನಡದಲ್ಲಿ, ಅದೂ ಸರ್ಕಾರಿ ಶಾಲೆಯಲ್ಲಿ ಓದಿ ಈ ಮಟ್ಟಕ್ಕೆ ಬೆಳೆದವರು. ಇಂಗ್ಲಿಷ್ನಲ್ಲಿ ಪಿಎಚ್ಡಿ ಪಡೆದು ಐರೋಪ್ಯ ಸಾಹಿತ್ಯವನ್ನು ಓದಿಕೊಂಡೆ ಎಂದರು.
ಅನಾರೋಗ್ಯದ ಕಾರಣದಿಂದ ಡಾ. ಅನಂತಮೂರ್ತಿ ತಮ್ಮ ಮಾತುಗಳನ್ನು ಅಲ್ಪಾವಧಿಯಲ್ಲಿಯೇ ಮುಗಿಸಿದರು. ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್, ಶ್ರೀಮತಿ ಎಸ್ತರ್ ಅನಂತಮೂರ್ತಿ, ಕೇಂದ್ರೀಯ ವಿವಿ ಕನ್ನಡ ವಿಭಾಗದ ಡಾ. ವಿಕ್ರಂ ವಿಸಾಜಿ, ಕಸಾಪ ಪದಾಧಿಕಾರಿಗಳಾದ ವಿಜಯ ತೇಗಲತಿಪ್ಪಿ, ಬಿ.ಎಚ್. ನಿರ್ಗುಡಿ, ಸುರೇಶ ಬಡಿಗೇರ್, ಜಿ.ಎಸ್. ಮಾಲೀಪಾಟೀಲ್ ಮೊದಲಾದರು ಇದ್ದರು.