ಚೌಡಾಪುರ-ಹೊಸೂರು ರಸ್ತೆಗೆ ಅಭಿವೃದ್ಧಿ ಯೋಗ
ವಿಶೇಷ ವರದಿ
ಗುಲ್ಬರ್ಗ: ಬುಟ್ಟಿ ಮಣ್ಣು ಕಾಣದೆ, ನಿರ್ವಹಣೆ ಇಲ್ಲದೆ ಹದಗೆಟ್ಟು ಹೋಗಿದ್ದ ಜಿಲ್ಲೆಯ ಅಫಜಲ್ಪುರ ತಾಲೂಕಿನ 76 ಕಿ.ಮೀ. ಉದ್ದದ ಚೌಡಾಪುರ-ಹೊಸೂರು ರಸ್ತೆಯ ಪ್ರಗತಿಗೆ ಕೊನೆಗೂ ಯೋಗ ಕೂಡಿ ಬಂದಿದೆ.
ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಮಂತ್ರಾಲಯ ತನ್ನ ಅಂತರ್ ರಾಜ್ಯ ಸಂಪರ್ಕ ರಸ್ತೆಜಾಲ ಯೋಜನೆಯಡಿಯಲ್ಲಿ ಕರ್ನಾಟಕದಿಂದ ಮಹಾರಾಷ್ಟ್ರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ(76.36 ಕೋಟಿ) ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ನೀಡಿದೆ.
ಕುಳಿ ತುಂಬಿದ ರಸ್ತೆ, ಬುಟ್ಟಿ ಮಣ್ಣಿಗೂ ತತ್ವಾರ ಇರುವ ರಸ್ತೆ, ಅಫಜಲ್ಪುರದ ಅನಾಥ ರಸ್ತೆ ಎಂದೆಲ್ಲ ಕುಖ್ಯಾತಿ ಪಡೆದಿದ್ದ ಈ ರಸ್ತೆಗೆ ಕಳೆದ 2 ವರ್ಷಗಳ ಹಿಂದೆಯೇ ಕೇಂದ್ರ ಸಚಿವ ಖರ್ಗೆ ಅಂತರ್ ರಾಜ್ಯ ಸಂಪರ್ಕ ರಸ್ತೆ ಯೋಜನೆಯಡಿಯಲ್ಲಿ ಉದ್ಧಾರ ಮಾಡುವ ಭರವಸೆ ನೀಡಿದ್ದರು.
ಏನಕೇನ ಕಾರಣಗಳಿಂದಾಗಿ ಈ ರಸ್ತೆ ಸುಧಾರಣೆಯ ಯೋಜನೆ ಕೇಂದ್ರದ ಭೂ ಸಾರಿಗೆ-ಹೆದ್ದಾರಿ ಮಂತ್ರಾಲಯದ ಕಡತಗಳ ರಾಶಿಯಲ್ಲೇ ಕೊಳೆಯುತ್ತ ಬಿದ್ದಿತ್ತು. ಪಟ್ಟು ಬಿಡದ ಮಲ್ಲಿಕಾರ್ಜುನ ಖರ್ಗೆ ಕೊನೆಗೂ ಈ ಯೋಜನೆಯ ಕಡತದ ಧೂಳು ಜಾಡಿಸಿ ಇದೀಗ ಈ ಯೋಜನೆಗೆ ಕೇಂದ್ರದಿಂದ ಆಡಳಿತಾತ್ಮಕ ಮಂಜೂರಾತಿ ದೊರಕಿಸಿಕೊಂಡು ಬಂದಿದ್ದಾರೆ.
ನಿರ್ವಹಣೆ ರಾಜ್ಯದ್ದು: ಈಗಾಗಲೇ ಕಳೆದೆರಡು ವರ್ಷಗಳ ಹಿಂದೆ ಈ ರಸ್ತೆಯ ಭಾಗವಾಗಿದ್ದ ಗುಲ್ಬರ್ಗ-ಚೌಡಾಪುರ 33 ಕಿ.ಮೀ. ರಸ್ತೆ ಕೆಶಿಪ್ ಅಡಿಯಲ್ಲಿ ಮೇಲ್ದರ್ಜೆಗೇರುತ್ತಿದೆ. ಚೌಡಾಪುರದಿಂದ ಮಹಾರಾಷ್ಟ್ರ ಗಡಿ ಹೊಸೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೂ ಅಭಿವೃದ್ಧಿಯಾಗುವ ಕಾಲ ಕೂಡಿ ಬಂದಂತಾಗಿದೆ.
ಕೇಂದ್ರ ಭೂ ಸಾರಿಗೆ ಸಚಿವಾಲಯದ ಅಧೀನ ಕಾರ್ಯದರ್ಶಿ ವಿ.ಕೆ. ಪೌಲ್ ಈ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ದೊರಕಿದ್ದು, ಮೂರು ಹಂತಗಳಲ್ಲಿ ಹಣ ಮಂಜೂರಾತಿಯಾಗಲಿದೆ. ಯೋಜನೆ ಪೂರ್ಣಗೊಂಡ ನಂತರ ನಿರ್ವಹಣೆ ರಾಜ್ಯ ಸರ್ಕಾರಕ್ಕೆ ವಹಿಸಿಕೊಡಲಾಗುತ್ತದೆ ಎಂದಿದ್ದಾರೆ. ಪೌಲ್ ಅವರ ಸಹಿ ಇರುವ ಆದೇಶದ ಪ್ರಕಾರ ಕೇಂದ್ರ ಸರ್ಕಾರ ಚೌಡಾಪುರ-ಹೊಸೂರವರೆಗಿನ ರಸ್ತೆ ಅಭಿವೃದ್ಧಿಗಾಗಿ 76. 36 ಕೋಟಿ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ.
ಬಹುದಿನಗಳ ಬೇಡಿಕೆ: ಹದಗೆಟ್ಟಿರುವ ಗುಲ್ಬರ್ಗ-ಅಫಜಲ್ಪುರ-ಹೊಸೂರು ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ನಿರಂತರ ಹೋರಾಟಗಳೇ ನಡೆದಿದ್ದವು. ಅಫಜಲ್ಪುರ ರಸ್ತೆ ಮಾತ್ರ ಪ್ರಗತಿಗೆ ಕಾದು ಕುಳಿತಿತ್ತು. ಇದೀಗ ಖರ್ಗೆಯವರ ಪ್ರಯತ್ನದಿಂದಾಗಿ ಈ ರಸ್ತೆಗೂ ಅಭಿವೃದ್ಧಿ ಯೋಗಾಯೋಗ ಕೂಡಿ ಬಂದಿದೆ. ಇದರಿಂದಾಗಿ ಚೌಡಾಪುರ, ಗಾಣಗಾಪುರ, ಅಫಜಲ್ಪುರ, ಮಾಶಾಳ, ಕರಜಗಿ, ಮಣ್ಣೂರ, ಶೇಷಗಿರಿವಾಡಿ, ಉಡಚಾಣ, ಶಿರವಾಳ, ಕುಡಗನೂರು, ರಾಮನಗರ, ಶಿವಬಾಳ ನಗರ ಸೇರಿದಂತೆ ಹತ್ತು ಹಲವು ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ.