ದಾನ, ಧರ್ಮಗಳಿಂದ ಆಯುಷ್ಯ ವೃದ್ಧಿ: ಕೇದಾರಸ್ವಾಮಿ
ಸಿಂಧನೂರು: ದಾನಗಳಲ್ಲಿ ಪ್ರಮುಖವಾಗಿ ಅನ್ನದಾನ, ಭೂದಾನ, ಗೋದಾನ, ಸುವರ್ಣದಾನ, ರಜತದಾನ ಶ್ರೇಷ್ಠವಾದವು. ಈ ಐದು ದಾನಗಳಿಂದ ಸಮಾಧಾನ ಬರುತ್ತದೆ. ಇದಲ್ಲದೇ ದಾನ, ಧರ್ಮಗಳಿಂದ ಆಯುಷ್ಯ ವೃದ್ಧಿಯಾಗುತ್ತದೆ ಎಂದು ಕೇದಾರ ಮಠದ ಭೀಮಶಂಕರಲಿಂಗ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ಮೂರುಮೈಲ್ ಕ್ಯಾಂಪಿನಲ್ಲಿರುವ ರಂಭಾಪುರಿ ಖಾಸಾ ಶಾಖಾಮಠದಲ್ಲಿ ಬುಧವಾರ ಸಂಗಯ್ಯಸ್ವಾಮಿ ಸರಗಣಾಧೀಶ್ವರಮಠ ಅವರ ಸಹಸ್ರಚಂದ್ರ ದರ್ಶನಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
81 ವರ್ಷ ಪೂರೈಸಿ 82ನೇ ವಯಸ್ಸಿಗೆ ಬಂದಾಗ ಒಟ್ಟು ಒಂದು ಸಾವಿರ ಹುಣ್ಣಿಮೆ ಚಂದ್ರರನ್ನು ದರ್ಶನ ಮಾಡಿದ ಪುಣ್ಯವಂತರಿಗೆ ಸಹಸ್ರಚಂದ್ರ ದರ್ಶನ ಮಹೋತ್ಸವವನ್ನು ಹಮ್ಮಿಕೊಳ್ಳಲಾಗುವುದು. ಸಿಂಧನೂರು ನಗರದ ಶಿವಪೂಜಾ ದೇವರಮಠದ ಸಂಗಯ್ಯಸ್ವಾಮಿ ಸರಗಣಾಧೀಶ್ವರಮಠ 81 ವಸಂತಗಳನ್ನು ಪೂರೈಸಿದ್ದಾರೆ. ರಂಭಾಪುರಿ ಖಾಸಾಶಾಖಾಮಠಕ್ಕೆ 4 ಎಕರೆ ಜಮೀನು ದಾನ ನೀಡಿದ್ದಾರೆ. ಪ್ರತಿವರ್ಷ ಕೇದಾರಮಠಕ್ಕೆ 50 ಕ್ವಿಂ. ಅಕ್ಕಿಯನ್ನು ಕಳುಹಿಸುತ್ತಾರೆ. ಸಮಾಜದ ಎಲ್ಲ ವರ್ಗಗಳ ಜನರೊಂದಿಗೆ ಅವಿನಾಭಾವ ಸಂಬಂಧವನ್ನಿಟ್ಟಿಕೊಂಡಿದ್ದಾರೆ. ಬಡವರಿಗೆ ಆರ್ಥಿಕ ಸಹಾಯ ಮಾಡಿ ಅವರ ಕಷ್ಟಗಳಿಗೆ ನೆರವಾಗಿದ್ದಾರೆ. ಇಂತಹ ಅಪರೂಪದ ಹಿರಿಯ ಜೀವಕ್ಕೆ ಸಹಸ್ರ ಚಂದ್ರದರ್ಶನ ಕಾರ್ಯಕ್ರಮ ಆಯೋಜಿಸಿದ್ದು ತಮಗೆ ಅತ್ಯಂತ ಸಂತಸ ತಂದಿದೆ ಎಂದರು.
ಅವರಿಗೆ ಅವರೇ ಸರಿಸಾಟಿ: ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ, ಸಂಗಯ್ಯಸ್ವಾಮಿ ಸಮಾಜಮುಖಿಯಾಗಿ ಅನೇಕ ಧಾರ್ಮಿಕ ಕಾರ್ಯಗಳನ್ನು ನಡೆಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಅನೇಕ ರಾಜಕಾರಣಿಗಳು ಅಭಿವೃದ್ಧಿ ಕೆಲಸಗಳನ್ನು ಹಮ್ಮಿಕೊಂಡಿದ್ದಾರೆ, ಅವರಲ್ಲಿ ತಾವೊಬ್ಬರು. ದಾನ-ಧರ್ಮಗಳಲ್ಲಿ ಸಂಗಯ್ಯಸ್ವಾಮಿ ಅವರಿಗೆ ಅವರೇ ಸಾಟಿ ಎಂದು ಬಣ್ಣಿಸಿದರು.
ಕಣವಿಕೊಪ್ಪ ಗವಿಮಠದ ನಾಲ್ವಡಿ ಶಾಂತಲಿಂಗಶಿವಾಚಾರ್ಯರು, ಜೈನ ಸಮಾಜದ ಮುಖಂಡ ಗೌತಮಚಂದ ಬಂಬ ಮಾತನಾಡಿದರು.
ಸನ್ಮಾನದ ಸುರಿಮಳೆ: ಸಹಸ್ರ ಚಂದ್ರದರ್ಶನದ ಕೇಂದ್ರಬಿಂದು ಸಂಗಯ್ಯಸ್ವಾಮಿ ಸರಗಣಾಧೀಶ್ವರಮಠ ಹಾಗೂ ಅವರ ಇಬ್ಬರು ಪತ್ನಿಯರನ್ನು ಸಮಿತಿಯ ಅಧ್ಯಕ್ಷ ಎಸ್.ಶರಣೇಗೌಡ, ಪ್ರಧಾನ ಕಾರ್ಯದರ್ಶಿ ಶರಣೇಗೌಡ ಬೆನ್ನೂರು, ಪಂಪಯ್ಯಸ್ವಾಮಿ ಸಾಲಿಮಠ, ಶಿವಕುಮಾರ ಜವಳಿ, ವೀರೇಶ ಅಂತರಗಂಗಿ ಸೇರಿದಂತೆ ಅನೇಕರು ಸನ್ಮಾನಿಸಿದರು.
ತುಲಾಭಾರ: ಇದೇ ವೇಳೆ ಸಂಗಯ್ಯಸ್ವಾಮಿ ದಂಪತಿಗಳನ್ನು ಸ್ವಾಗತ ಸಮಿತಿ ವತಿಯಿಂದ ತುಲಾಭಾರ ಮಾಡಲಾಯಿತು. ಸರಗಣಾಧೀಶ್ವರ ಸಿರಿ ಎಂಬ ಸ್ಮರಣ ಸಂಚಿಕೆಯನ್ನು ಕಣವಿಕೊಪ್ಪ ಮಠದ ನಾಲ್ವಡಿ ಶಾಂತಲಿಂಗಶಿವಾಚಾರ್ಯರು ಬಿಡುಗಡೆ ಮಾಡಿದರು.
ಒಡನಾಡಿಗಳಿಗೆ ಸನ್ಮಾನ: ಸಂಗಯ್ಯಸ್ವಾಮಿಗಳ ಒಡನಾಡಿಗಳಾದ ಕಲ್ಮಂಗಿ ಗುರುಪಾದಸ್ವಾಮಿ, ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಸೋಮಶೇಖರಪ್ಪ ಪಾಟೀಲ, ಜವಾಹರಲಾಲ ಶೇಠ, ಮಹ್ಮದಗನಿಸಾಬ, ಕೆ.ಶರಣಪ್ಪ ಬಳ್ಳಾರಿ, ಎಸ್.ಪಾಲಾಕ್ಷಯ್ಯ, ಶ್ರೀಶೈಲಪ್ಪ ಪತ್ತಾರ, ಗಿರಿಧಾರಿ ಶೇಠ, ಮಹಾಂತೇಶಸ್ವಾಮಿ ಗೌಡನಭಾವಿ, ಶೇಷಗಿರಿರಾವ್ ಚನ್ನಳ್ಳಿ, ಇಲ್ಲೂರು ಸಣ್ಣಭೀಮಯ್ಯಶೆಟ್ಟಿ, ಬೋಳಾರೆಡ್ಡೆಪ್ಪಗೌಡ ಕೆ.ಹೊಸಳ್ಳಿ, ತಿಪ್ಪಣ್ಣ ಸಿಂಧನೂರು, ಕೆ.ಶರಣಮ್ಮ, ಗಂಗಾಧರಶಾಸ್ತ್ರಿ ಜವಳಗೇರಾ, ಸೈಯದ್ ಬುಕ್ಕಟಗಾರ, ವೀರಣ್ಣ ಒಂಟಗೇರ, ಅಮರೇಗೌಡ ಸುಲ್ತಾನಪುರ, ಚೋಟಾ ಪಟೇಲ, ಮಿನಿಲುಲ್ಲಾ ಹುಸೇನಿ, ಅಮರಯ್ಯಸ್ವಾಮಿ ವಳಬಳ್ಳಾರಿ, ಕಲಂದಾರಸಾಬ ಹಾಗೂ ಅಯ್ಯಪ್ಪ ಗಸ್ತಿಕೋಟೆ ಅವರನ್ನು ಸ್ವಾಗತ ಸಮಿತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ವಿವಿಧ ಮಠಗಳ ಮಠಾಧೀಶರು, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಅಮರೇಗೌಡ ವಿರುಪಾಪುರ, ಶಿವನಗೌಡ ಗೊರೇಬಾಳ, ರಾಜಶೇಖರ ಪಾಟೀಲ, ಕಾನಿಹಾಳ ಮಲ್ಲನಗೌಡ, ಹನುಮನಗೌಡ ಬೆಳಗುರ್ಕಿ ಇತರರಿದ್ದರು.
ಶಾಸ್ತ್ರಿಗಳು ವೇದಘೋಷಗಳನ್ನು ನಡೆಸಿದರು. ಶಿಕ್ಷಕ ವೀರೇಶ ಸಾಲಿಮಠ ಹಾಗೂ ಸಂಗಡಿಗರಿಂದ ದೇವತಾ ಪ್ರಾರ್ಥನೆ ನಡೆಯಿತು. ಮಾನವಿ ಕಲ್ಮಠದ ಶಿವಮೂರ್ತಿ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿದರು. ವೈಜನಾಥ ಹಿರೇಮಠ ಸ್ವಾಗತಿಸಿದರು. ಹಿರಿಯ ಸಂಶೋಧಕ ಶಾಶ್ವತಯ್ಯಸ್ವಾಮಿ ಮುಕ್ಕುಂದಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಶಿವಯೋಗಿ ಕಂಬಾಳಿಮಠ, ಈರಮ್ಮ ಹಿರೇಮಠ ನಿರೂಪಿಸಿದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮೆರವಣಿಗೆ: ಇದಕ್ಕೂ ಮುನ್ನ ಸಂಗಯ್ಯಸ್ವಾಮಿ ದಂಪತಿಗಳನ್ನು ಕಲ್ಮಠದಲ್ಲಿರುವ ಅವರ ಮನೆಯಿಂದ ಎಪಿಎಂಸಿ ಗಣೇಶ ದೇವಸ್ಥಾನದವರೆಗೆ ಸಾರೋಟನಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.