ಇಂದಿನಿಂದ ಮಹಾಲಕ್ಷ್ಮೀ ಉತ್ಸವ
ಶಹಾಬಾದ್: ನಗರದ ರಾಮಾ ಮೊಹಲ್ಲಾ ಬಡಾವಣೆಯ ಕೊಲ್ಲಾಪುರ ಮಹಾಲಕ್ಷ್ಮೀ ದೇವಿ ಉತ್ಸವ ಫೆ.22, 23ರಂದು ನಡೆಯಲಿದೆ ಎಂದು ದೇವಸ್ಥಾನದ ಶಂಕರರಾವ ಕುಲಕರ್ಣಿ ತಿಳಿಸಿದ್ದಾರೆ. ಪ್ರತಿ ದಿನ ಕಾಕಡಾರತಿ, ಅಭಿಷೇಕ, ಅಲಂಕಾರ, ನೈವೇದ್ಯ, ಮಹಾಪ್ರಸಾದ ವಿತರಣೆ, ವೇದಘೋಷ, ಮಂಗಳಾರತಿ, ಮಂತ್ರಪುಷ್ಪ ನಡೆಯುವುದು. ಫೆ.22ರಂದು ಬೆಳಗ್ಗೆ 8ರಿಂದ ಗಣಪತಿ ಹೋಮ, ಮ. 12 ಗಂಟೆಗೆ ಸತ್ಯನಾರಾಯಣ ಪೂಜೆ, ಸಂಜೆ 5 ಗಂಟೆಗೆ ನಾರಾಯಣ ದಾಸ ಶಿರಸಿ ಅವರಿಂದ ಕೀರ್ತನೆ. ರಾತ್ರಿ 9 ಗಂಟೆಗೆ ಶೇಷಗಿರದಾಸ ರಾಯಚೂರು ಅವರಿಂದ ಸಂಗೀತ ಕಾರ್ಯಕ್ರಮ ನಡೆಯುವುದು. ಫೆ. 23ರಂದು ಬೆಳಗ್ಗೆ ದೇಶವರಾವ ಧಿಟೆ ಅವರಿಂದ ಸಂಗೀತ ಸೇವೆ, ಮಧ್ಯಾಹ್ನ 1 ಗಂಟೆಗೆ ರಥೋತ್ಸವ, ಸಂಜೆ 5 ಗಂಟೆಗೆ ನಾರಾಯಣ ದಾಸರಿಂದ ಕೀರ್ತನೆ, ಸಂಜೆ 7.30 ಗಂಟೆಗೆ ತೊಟ್ಟಿಲು ಸೇವೆ ನಡೆಯುವುದು.
'ಚಿಕೂನ್ಗುನ್ಯಾ ನಿಯಂತ್ರಣ'
ಚಿಂಚೋಳಿ: ತಾಲೂಕಿನ ಚಿಂತಕುಂಟಾ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಚಿಕೂನ್ಗುನ್ಯಾ ರೋಗ ಕಾಣಿಸಿಕೊಂಡಿದ್ದು ಒಟ್ಟು 25ಕ್ಕೂ ಹೆಚ್ಚು ಜನರು ರೋಗದಿಂದ ಬಳಲುತ್ತಿದ್ದಾರೆ. ರೋಗಿಗಳಿಗೆ ಕೋಡ್ಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ರೋಗ ನಿಯಂತ್ರಣದಲ್ಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರಾಜಕುಮಾರ ಕುಲಕರ್ಣಿ ತಿಳಿಸಿದ್ದಾರೆ. ಚಿಂತಕುಂಟಾ ಗ್ರಾಮದಲ್ಲಿ ಚಿಕೂನ್ಗುನ್ಯಾ ರೋಗ ಹರಡಿರುವ ಬಗ್ಗೆ ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಕೋಡ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುರೇಶಕುಮಾರ, ಆರೋಗ್ಯ ಸಹಾಯಕ ಸಂತೋಷ ಮತ್ತು ಸಿಬ್ಬಂದಿ ಚಿಂತಕುಂಟಾ ಗ್ರಾಮದಲ್ಲಿ ಬಿಡಾರ ಹೂಡಿ ಮನೆಗಳಿಗೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಆರೋಗ್ಯ ಶಿಕ್ಷಣ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಜಲಾಶಯದಲ್ಲಿ ನೀರಿನ ಕೊರತೆ
ಗುಲ್ಬರ್ಗ: ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಲ್ಲಿ ಕಳೆದೆರಡು ಸಾಲಿಗಿಂತ ಈ ಸಾಲಿನಲ್ಲಿ ನೀರಿನ ಮಟ್ಟ ಕಡಿಮೆಗೊಂಡಿದೆ. ಈ ಪ್ರಯುಕ್ತ ಜಲಾಶಯದ ಹಿನ್ನೀರಿನಿಂದ ಕುಡಿಯಲು ಮಾತ್ರ ನೀರನ್ನು ಬಳಸುವಂತೆ ಹಾಗೂ ಬೇರೆ ಚಟುವಟಿಕೆಗಳಿಗೆ ಬಳಸದಂತೆ ಕೃಭಾಜನಿನಿ ಅಧೀಕ್ಷಕ ಅಭಿಯಂತರರು ಕೋರಿದ್ದಾರೆ.