ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾಲುವೆಗೆ ನೀರು ಹರಿಸದಿದ್ರೆ ವಿಷ ಕೊಡಿ...

Lingaraj Badiger
Updated On : 22 Feb 2013, 11:54 am

ಹುಣಸಗಿ: ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಗೆ ಮಾ.30ರವರೆಗೆ ನೀರು ಹರಿಸಬೇಕೆಂದು ಅಗ್ರಹಿಸಿ ಕರವೇ ಮತ್ತು ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಇಲ್ಲಿಯ ವಾಲ್ಮೀಕಿ ವೃತ್ತದಿಂದ ಮೆರವಣಿಗೆ ಪ್ರಾರಂಭಿಸಿ ಮುಖ್ಯ ಎಂಜಿನಿಯರ್ ಕಚೇರಿವರೆಗೆ ಆಗಮಿಸಿದರು.
  ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರವೇ ರಾಜ್ಯ ಸಂಚಾಲಕ ಬಸವರಾಜ ಪಡಕೋಟೆ,  ಹಿಂಗಾರು ಹಂಗಾಮಿಗೆ ಲಘು ಬೆಳೆಗಳಾದ ಶೇಂಗಾ, ಹತ್ತಿ, ಹೈಬ್ರಿಡ್ ಜೋಳ, ಸಜ್ಜೆ ಬಿತ್ತನೆ ಮಾಡಲಾಗಿದ್ದು ಅವುಗಳಿಗೆ ಮಾ.30ರ ವರಗೆ ನೀರು ಹರಿಸಿದರೆ ಮಾತ್ರ ರೈತ ಬದಕಲು ಸಾಧ್ಯ ಎಂದರು.
  ಫೆ.20ಕ್ಕೆ ನೀರು ನಿಲ್ಲಿಸಲು ನೀರಾವರಿ ಸಲಹಾ ಸಮಿತಿ ತೀರ್ಮಾನ ಅವೈಜ್ಞಾನಿಕವಾಗಿದ್ದು ಇದನ್ನು ಪುನರ್ ಪರಿಶೀಲಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಉತ್ತರ ಕರ್ನಾಟಕದವರೇ ಆದ ಮುಖ್ಯಮಂತ್ರಿಗಳು ಕಾವೇರಿಗೆ ಇದ್ದ ಕಾಳಜಿಯನ್ನು ಕೃಷ್ಣೆಗೆ ತೋರುತ್ತಿಲ್ಲ ಎಂದು ಸರ್ಕಾದ ವಿರುದ್ಧ ಕಿಡಿಕಾರಿದರು.
ನೀರು ಹರಿಸದಿದ್ರೆ ವಿಷ ಕೊಡಿ: ರೈತ ಸಂಘದ ಮಲ್ಲಿಕಾರ್ಜುನ ಸತ್ಯಂಪೇಟೆ, ಮಾ.30ರ ವರೆಗೆ ನೀರು ಹರಿಸಲೇಬೇಕು. ಇಲ್ಲವಾದಲ್ಲಿ ಒಂದು ತೊಟ್ಟು ವಿಷ ಕೊಟ್ಟುಬಿಡಿ. ರೈತರ ಮೇಲೆ ನಿಜವಾದ ಕಾಳಜಿ ಇದ್ದರೆ ಮಾ.30ರವರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಬರಿ ಭರವಸೆ ಹುಟ್ಟಿಸಿ ರೈತರಿಗೆ ಮೋಸಗೊಳಿಸುವುದೇ ಸರ್ಕಾರದ ಕೆಲಸವಾಗಿದೆ. ರಾಜಕೀಯ ನೆಲೆ ಕಂಡುಕೊಳ್ಳಲು ಆ ಪಕ್ಷದಿಂದ ಈ ಪಕ್ಷ ಜಿಗಿಯಲು ಯತ್ನಿಸುತ್ತಿರುವ ಕೆಲವು ರಾಜಕಾರಣಿಗಳಿಗೆ ರೈತರ ಗೋಳು ಗೊತ್ತಾಗುತ್ತಿಲ್ಲ. ರೈತ ಈ ದೇಶದ ಬೆನ್ನೆಲುಬು ಎಂದು ಹೇಳುವುದು, ರೈತರ ಹೆಸರಿನಲ್ಲಿ ಪ್ರಮಾಣ ಮಾಡಿ ರೈತರ ಬೆನ್ನೆಲುಬು ಮುರಿಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಎಂ.ಡಿ.ಗೆ ಮಾಹಿತಿ: ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯ ಎಂಜಿನಿಯರ್ ಎನ್.ಸುದರ್ಶನ, ಮೇಲಾಧಿಕಾರಿಗಳ ಆದೇಶ ಮೆರೆಗೆ ಹಾಗೂ ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಫೆ.20ರಂದು ಕಾಲುವೆಗೆ ನೀರನ್ನು ಮಧ್ಯರಾತ್ರಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ರೈತರು ನೀಡಿದ ನೀರಿನ ಬೇಡಿಕೆಯ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿ ಕಳಿಸಲಾಗಿದೆ ಎಂದು ತಿಳಿಸಿದರು.
   ಆಗ ರೈತರು ಜಲಾಶಯಕ್ಕೆ ಮುತ್ತಿಗೆ ಹಾಕಲು ತೆರಳಿದರು. ಕೆಲ ಸಮಯ ಗಲಿಬಿಲಿಯ ವಾತಾವರಣ ನಿರ್ಮಾಣವಾಯಿತು. ಮುತ್ತಿಗೆ ಸಂದರ್ಭದಲ್ಲಿ ಚನ್ನೂರ ಗ್ರಾಮ ಕರವೇ ಘಟಕ ಅಧ್ಯಕ್ಷ ಬಸವರಾಜ ತಳವಾರ ಬೇಲಿ ಹಾರಲು ಯತ್ನಿಸಿದರು. ಕೆಳಗೆ ಇಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
 ಪ್ರತಿಭಟನೆಯಲ್ಲಿ ನಂದಣ್ಣ ದೊರಿ, ವೆಂಕಟೇಶ ಪ್ಯಾಪ್ಲಿ, ವೆಂಕಟೇಶ ಬೈರಮಡ್ಡಿ, ಈರಣ್ಣ ಅಗ್ನಿ, ಸೋಮನಗೌಡ, ಹಣಮಗೌಡ, ಶಿವಲಿಂಗ ಮಾಳನೂರ, ಮೈಲಾರಪ್ಪ ಸಗರ, ಅಯ್ಯಣ್ಣ ಹಾಲಬಾವಿ, ಶರಣ್ಪಪ ಕೊಳಿಹಾಳ, ಆದಯ್ಯ ಗುರಿಕಾರ, ಲಕ್ಷ್ಮಣ ಕಕ್ಕೇರಿ, ಭೀಮನಗೌಡ ಕಾಚಾಪುರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement