ಶಹಾಪುರ: ಸಾಮೂಹಿಕ ರಾಜಿನಾಮೆ
ಶಹಾಪುರ: ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ಒಂದಿಲ್ಲೊಂದು ಭ್ರಷ್ಟಾಚಾರದಲ್ಲಿ ತೊಡಗಿವೆ. ಆದ್ದರಿಂದ ಯಾವ ಪಕ್ಷದ ಬೆಂಬಲವಿಲ್ಲದೆ ದಿ. ಶಿವಶೇಖರಪ್ಪಗೌಡ ಶಿರವಾಳರ ಹೆಸರನ್ನೇ ಮುಂದಿಟ್ಟುಕೊಂಡು ಅವರ ಅಭಿಮಾನಿಗಳು ಪಕ್ಷೇತರರಾಗಿ ಸ್ಪರ್ಧಿಸೋಣ. ಪುರಸಭೆ ಆಡಳಿತ ಹಿಡಿಯುವುದರೊಂದಿಗೆ ಮುಂದಿನ ದಿನಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲೋಣ ಎಂದ ಹಿರಿಯ ಮುಖಂಡ ಮಲ್ಲಣ್ಣ ಮಡ್ಡಿ, ಬಿಜೆಪಿಗೆ ಸಾಮೂಹಿಕ ರಾಜಿನಾಮೆ ನೀಡುವ ನಿರ್ಧಾರವನ್ನೂ ಪ್ರಕಟಿಸಿದರು.
ಪುರಸಭೆ ಚುನಾವಣೆ ಕಾವು ಏರತೊಡಗಿದಂತೆ ಬಿಜೆಪಿ ಕಾರ್ಯಕರ್ತರಲ್ಲಿದ್ದ ಗೊಂದಲಕ್ಕೆ ತೆರೆ ಎಳೆಯುವ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷದಿಂದ ಅಧಿಕಾರ ನಡೆಸಿದ ಬಿಜೆಪಿ ಶಹಾಪುರ ತಾಲೂಕಿನ ಬಿಜೆಪಿಯವರಿಗೆ ಮನ್ನಣೆ ನೀಡಲಿಲ್ಲ. ಗ್ರಾಮೀಣ ಭಾಗದವರಿಗೆ ಹಲವಾರು ಕಾರ್ಯ ನೆನೆಗುದಿಗೆ ಬಿದ್ದು ಬಿಜೆಪಿ ವಿಶ್ವಾಸದಿಂದ ದೂರವಾಗಿದೆ. ಆಂತರಿಕ ಕಚ್ಚಾಟದಲ್ಲಿ ಕಮಲ ನಾಲ್ಕು ದಳಗಳಾಗಿ ಹೋಗಿದ್ದು, ಗೊತ್ತು ಗುರಿಯಿಲ್ಲದ ಪಕ್ಷ ನಮಗೆ ಬೇಡವೇ ಬೇಡ ಎಂದರು.
ಪಕ್ಷೇತರರಾಗಿ ಸ್ಪರ್ಧೆ: ಹಿರಿಯ ಮುಖಂಡ ಅಮಾತೆಪ್ಪ ಕಂದಕೂರ ಮಾತನಾಡಿ, ಬಿಜೆಪಿಯಿಂದ ಸಾಕಷ್ಟು ತೊಂದರೆ ಅನುಭವಿಸಿದ್ದು, ಅದು ಸ್ಪಷ್ಟ ನಿಲುವು, ಜನಪರ ಕಾಳಜಿ ಇಲ್ಲದ ಪಕ್ಷವಾಗಿದೆ. ಸದ್ಯ ಉಸಿರು ಕಟ್ಟುವ ವಾತಾವರಣದಿಂದ ಹೊರ ಬಂದಿದ್ದು ಪ್ರಸಕ್ತವಾಗಿ ಪಕ್ಷೇತರರಾಗಿ ಸ್ಪರ್ಧಿಸಿ ಅಭ್ಯರ್ಥಿಗಳನ್ನು ಗೆಲ್ಲಿಸಲಾಗುವುದು ಎಂದು ತಿಳಿಸಿದರು.
ಯುವ ಮುಖಂಡ ಗುರುಪಾಟೀಲ ಶಿರವಾಳ ಮಾತನಾಡಿ, ಬಿಜೆಪಿ ಬಿಟ್ಟು ಹೊರಬನ್ನಿ ಎಂಬ ಕಾರ್ಯಕರ್ತರ ದ್ವನಿಗೆ ಸ್ಪಂದಿಸಿದ್ದು ನಮ್ಮನ್ನು ಬಿಜೆಪಿ ಸರಿಯಾಗಿ ನಡೆಸಿಕೊಂಡಿಲ್ಲ. ಯಾವ ಹಳ್ಳಿಗೂ ಹೋದರು ದಿ. ಶಿವಶೇಖರಪ್ಪಗೌಡರ ಅಭಿಮಾನಿಗಳಿದ್ದಾರೆ. ಕಾರ್ಯಕರ್ತರ ಆಶಯದ ಮೇರೆಗೆ ಬಿಜೆಪಿಗೆ ರಾಜಿನಾಮೆ ನೀಡುತ್ತಿದ್ದು, ಸದ್ಯದಲ್ಲಿ ಪುರಸಭೆ ಚುನಾವಣೆ ಸವಾಲಾಗಿ ಸ್ವೀಕರಿಸಿ ಗೆಲ್ಲುವ ಪ್ರಯತ್ನದಲ್ಲಿ ಯಶಸ್ವಿ ಹೊಂದೋಣ.
ಮೊದಲು ಜನರ ವಿಶ್ವಾಸ ಗಳಿಸೋಣ: ಸದ್ಯ ಅಧಿಕಾರದಾಹದ ಕಾಂಗ್ರೆಸ್, ಗಣಿ ಧೂಳಿನ ಬಿಎಸ್ಸಾರ್, ಕುಟುಂಬ ಪಕ್ಷವಾದ ಜೆಡಿಎಸ್ ಮತ್ತು ಭ್ರಷ್ಟ ವ್ಯವಸ್ಥೆಯ ಭಾಗವಾದ ಕೆಜೆಪಿ ಮತ್ತು ಒಡೆದು ಹೋದ ಮನೆಯಂತಾಗಿರುವ ಬಿಜೆಪಿ ಇವು ಯಾವುದರ ಸಖ್ಯವೂ ಬೇಡ. ತಂದೆಯವರು ತೋರಿದ ದಾರಿಯಲ್ಲಿ ಸಾಗಿ ಜನತೆಯ ವಿಶ್ವಾಸ ಗಳಿಸುವತ್ತ ಸಂಕಲ್ಪಿಸೋಣ ಎಂದರು.
ಇದೇ ವೇಳೆ ಬಿಜೆಪಿಯ ಪ್ರಮುಖರು ಪಕ್ಷ ತೊರೆದರು. ಸಭೆಯಲ್ಲಿ ಮುಖಂಡರಾದ ನೀಲಂಕಂಠ ಬಡಿಗೇರ, ಮಾನಪ್ಪ ಗೋಗಿ, ಸುಧೀರ ಚಿಂಚೋಳಿ, ಮಲ್ಲಿಕಾರ್ಜುನ ಚಿಲ್ಲಾಳ, ಲಾಲಹ್ಮದ್ ಖುರೇಶಿ, ವೆಂಕಟೇಶ ಆಲೂರ ಸೇರಿದಂತೆ ಹಲವರು ಮಾತನಾಡಿದರು. ನಾನಾಗೌಡ ಅಣಬಿ, ಅಥಿಕ್ ಸಿದ್ದಿಕ್, ಶಂಕರಗೌಡ ಪಾಟೀಲ ಶಿರವಾಳ, ದೇವಿಂದ್ರ ತೋಟಿಗೇರ, ರಾಮಾಂಜನೇಯ, ಮನೋಹರ ಜಟ್ಟೆಪ್ಪ ಕೆಂಭಾವಿ ಇತರರು ಇದ್ದರು.
ಗುರು, ಸುರೇಶ ಶೆಟ್ಟಿ ಬಿಎಸ್ಸಾರ್ಗೆ
ಸುರಪುರ: ಇಲ್ಲಿಯ ಎಪಿಎಂಸಿ ಮಾಜಿ ಸದಸ್ಯ ಗುರು ಗುತ್ತೇದಾರ್ ಮತ್ತು ಪುರಸಭೆ ಮಾಜಿ ಸದಸ್ಯ ಸುರೇಶ ಶೆಟ್ಟಿ ಅವರು ಬಿಎಸ್ಸಾರ್ ಪಕ್ಷಕ್ಕೆ ಗುರುವಾರ ಸೇರ್ಪಡೆಗೊಂಡರು. ಇಲ್ಲಿಯ ದರ್ಬಾರ ಹಾಲ್ನಲ್ಲಿ ಜರುಗಿದ ಸಮಾರಂಭದಲ್ಲಿ ಇವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ರಾಜಾ ಕೃಷ್ಣಪ್ಪ ನಾಯಕ, 27 ವಾರ್ಡ್ಗಳಲ್ಲಿಯೂ ಬಿಎಸ್ಸಾರ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಹೇಳಿದರು. ರಾಜ್ಯದ ಜನತೆ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳ ದುರಾಡಳಿತದಿಂದ ಬೇಸತ್ತು ಹೋಗಿದ್ದಾರೆ. ಈ ಬಾರಿ ರೈತರ ಮತ್ತು ಶ್ರಮಿಕರ ಪಕ್ಷವಾದ ಬಿಎಸ್ಸಾರ್ಗೆ ಬೆಂಬಲಿಸಲಿದ್ದಾರೆ ಎಂದು ಆಶಿಸಿದರು. ಇದೇ ವೇಳೆ ತಾಲೂಕು ಕುರುಬ ಸಮಾಜದ ಮುಖಂಡರಾದ ಮಲ್ಲಿನಾಥ ಹೊಸ್ಮನಿ ಅಗತೀರ್ಥ, ಶಿವರಾಜ ಅವಂಟಿ, ಸಿದ್ದಣ್ಣ ದಿಗ್ಗಾವಿ ಇತರರು ಸೇರ್ಪಡೆಯಾದರು. ನಂದಕುಮಾರ ಇದ್ದರು.
9 ನಾಮಪತ್ರ ಸಲ್ಲಿಕೆ
ಯಾದಗಿರಿ: ನಗರ, ಸ್ಥಳೀಯ ಸಂಸ್ಥೆಗಳಿಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಗುರುವಾರ ಜಿಲ್ಲೆಯ 4 ಸ್ಥಳೀಯ ಸಂಸ್ಥೆಗಳಲ್ಲಿ 9 ನಾಮಪತ್ರಗಳು ಸಲ್ಲಿಕೆಯಾಗಿವೆ. ಯಾದಗಿರಿ ನಗರಸಭೆಗೆ 3, ಶಹಾಪುರ ಪುರಸಭೆಗೆ 4, ಸುರಪುರ ಪುರಸಭೆಗೆ 1 ಹಾಗೂ ಗುರುಮಠಕಲ್ ಪಟ್ಟಣ ಪಂಚಾಯಿತಿಗೆ 1 ಸೇರಿದಂತೆ ಒಟ್ಟು 9 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾ ಶಾಖೆ ತಿಳಿಸಿದೆ.