ಚಿಂಚೋಳಿ ಬಿಜೆಪಿಯಲ್ಲೀಗ ಉಚ್ಚಾಟನೆ ಪರ್ವ
ಚಿಂಚೋಳಿ: ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಬಿಜೆಪಿ ಶಶಿಧರ ಸೂಗೂರ್, ಸಂಜೀವಕುಮಾರ ಪುಣ್ಯಶೆಟ್ಟಿ, ರಾಮಣ್ಣ ರುಸ್ತಂಪೂರ ಮೂವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶರಣಪ್ಪಾ ತಳವಾರ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ದಿಸುವ ಅಭ್ಯರ್ಥಿಗಳನ್ನೇ ಕೆಜೆಪಿಯಿಂದ ಸ್ಪರ್ಧಿಸಲು ಮಾಜಿ ಶಾಸಕರ ಜೊತೆಗೂಡಿ ಕಾರ್ಯನಿರ್ವಹಿಸಿದ್ದಾರೆಂದು ತಾಲೂಕು ಅಧ್ಯಕ್ಷ ರೇವಣಸಿದ್ದಪ್ಪಾ ಮಜ್ಜಗಿ ಅವರು ಜಿಲ್ಲಾಧ್ಯಕ್ಷರಿಗೆ ನೀಡಿದ ದೂರಿನ ಮೇರೆಗೆ ಅವರನ್ನು ತಕ್ಷಣದಿಂದಲೇ ಉಚ್ಚಾಟಿಸುವಂತೆ ಜಿಲ್ಲಾಧ್ಯಕ್ಷರ ಅನುಮತಿಯೊಂದಿಗೆ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಶರಣಪ್ಪ ತಳವಾರ ತಿಳಿಸಿದರು.
ಕೋರ್ ಕಮಿಟಿ ಸದಸ್ಯರು: ಪಪಂ ಚುನಾವಣೆಯ ಸಲುವಾಗಿ ರೇವಣಸಿದ್ದಪ್ಪ ಮಜ್ಜಗಿ, ರಮೇಶ ಯಾಕಾಪೂರ, ಶಾಮಸುಂದರ ಪವಾರ, ಮಧುಸೂಧನ ಕಾಟಾಪೂರ, ಜಿಪಂ ಸದಸ್ಯ ಸಂಜೀವನ್ ಯಾಕಾಪೂರ್, ವಿಠಲರೆಡ್ಡಿ ಬೆನಕೆಪಳ್ಳಿ ಚಿತ್ರಶೇಖರ ಪಾಟೀಲ್, ಜಗನ್ನಾಥ ಅಗ್ನಿಹೋತ್ರಿ, ಅಶೋಕ ಪಾಟೀಲ್ ಮುಂತಾದವರನ್ನು ಕೋರ ಕಮಿಟಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಪಪಂ.ನ ಎಲ್ಲ 18 ವಾರ್ಡುಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸಲಿದೆ. ಎಂಜಿನಿಯರಿಂಗ್ ಮತ್ತು ಪದವೀಧರರು ಪಕ್ಷದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪಟ್ಟಣದಲ್ಲಿ ಬಿಜೆಪಿ ಸರ್ಕಾರದಿಂದ ವಿವಿಧ ಯೋಜನೆ ಅಡಿಯಲ್ಲಿ ಕೋಟ್ಯಂತರ ರು. ಬಿಡುಗಡೆಗೊಳಿಸಿ ವಿವಿಧ ಸಮಾಜದ ಬಡಾವಣೆಯಲ್ಲಿ ಜನರಿಗೆ ಮೂಲ ಸೌಕರ್ಯ ಒದಗಿಸಿಕೊಡಲಾಗಿದೆ. ಇದರಿಂದಾಗಿ ನಮ್ಮ ಪಕ್ಷಕ್ಕೆ ಉತ್ತಮ ವಾತಾವರಣವಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಶರಣಪ್ಪಾ ತಳವಾರ ಉತ್ತರಿಸಿದರು.
ಅಭಿವೃದ್ಧಿಗೆ ಅನುದಾನ: ಬಿಜೆಪಿ ಸರ್ಕಾರವು ಮುಖ್ಯಮಂತ್ರಿ ಪಟ್ಟಣ ಅಭಿವೃದ್ಧಿ ಯೋಜನೆ, ಎಸ್‌ಎಫ್‌ಸಿ, ಯೋ ಜನೆ ಗಡಿ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಕೋಟ್ಯಂತರ ಹಣ ನೀಡಿ ಆಶ್ರಯ ಕಾಲೋನಿ ನಿವಾಸಿಗಳಿಗೆ ಕುಡಿವ ನೀರಿನ ಸೌಲಭ್ಯ, ಸಿಮೆಂಟ್ ರಸ್ತೆ ಚರಂಡಿ, ಶುದ್ಧ ನೀರು ಘಟಕ, ವಿವಿಧ ಸಮಾಜಕ್ಕೆ ಸಮುದಾಯ ಭವನ, ಚಿಂಚೋಳಿ ಪಟ್ಟಣದಲ್ಲಿ ವಿದ್ಯುತ್ ದೀಪ ಅಳವಡಿಕೆ ಮತ್ತು ಹೈಮಾಸ್ಟ್ ದೀಪ, ಮತ್ತು ಮುಲ್ಲಾಮಾರಿ ನದಿಗೆ 3 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕಾಗಿ ಹಣ ನೀಡಲಾಗಿದೆ ಎಂದರು.
ಬಿಜೆಪಿ ಸರ್ಕಾರದಿಂದ ಹೆಚ್ಚಿನ ಹಣ ಬಿಡುಗಡೆ ಮಾಡಿದರೂ ಇಲ್ಲಿನ ಮಾಜಿ ಸಚಿವ ಸುನೀಲ್ ವಲ್ಯಾಪುರೆ ಅವರು ಹಣವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲಿಲ್ಲ. ಮುಂದಿನ ದಿನಗಳಲ್ಲಿ ಕೆಲವು ಅಧಿಕಾರಿಗಳ ಬದಲಾವಣೆ ಮಾಡಲಾಗುವುದು. ಇದರ ಬಗ್ಗೆ ಸಿಎಂ ತ್ರಿಗಳ ಗಮನಕ್ಕೆ ತರಲಾಗಿದೆ ಎಂದು ತಳವಾರ ಹೇಳಿದರು. ರಮೇಶ ಯಾಕಾಪೂರ, ರೇವಣಸಿದ್ದಪ್ಪಾ ಮಜ್ಕಗಿ, ವಿಠಲರೆಡ್ಡಿ, ಮಧುಸೂಧನ ಕಾಟಪೂರ, ಶಾಮಸುಂದರ ಪವಾರ ಇತರಿದ್ದರು.