ಅರಣ್ಯ ಇಲಾಖೆ ದಿನಗೂಲಿಗಳ ಹೆಚ್ಚುವರಿ ಬಾಕಿ ವೇತನ ಬಿಡುಗಡೆ
ಗುಲ್ಬರ್ಗ: ರಾಜ್ಯ ಸರ್ಕಾರದ ಅಡಿಯಲ್ಲಿ ಅರಣ್ಯ ಇಲಾಖೆಯಲ್ಲಿ ಕೆಲಸದಲ್ಲಿರುವ ಸುಮಾರು 5,000 ದಿನಗೂಲಿ ನೌಕರರಿಗೆ 1998ರಿಂದ ತಡೆಹಿಡಿಯಲಾಗಿದ್ದ ಜೀವನ ನಿರ್ವಹಣೆ ಭತ್ಯೆ ಪಾವತಿ ಮಾಡಲು ರಾಜ್ಯ ಸರ್ಕಾರ 10.66 ಕೋಟಿ ಹಣವನ್ನು ಪ್ರಾದೇಶಿಕ ಅರಣ್ಯ ಇಲಾಖೆಗೆ ಬಿಡುಗಡೆ ಮಾಡಿದೆ. ಈ ಬೆಳವಣಿಗೆ ದಿನಗೂಲಿಗಳ ಪರವಾಗಿರುವುದರಿಂದ ಸಂಘ ಇದನ್ನು ಸ್ವಾಗತಿಸುತ್ತದೆ ಎಂದು ದಿನಗೂಲಿ ನೌಕರರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಚಂದ್ರಶೇಖರ ಹಿರೇಮಠ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸರ್ಕಾರದ ಆದೇಶಗಳ ಪ್ರತಿಗಳನ್ನು ಬಿಡುಗಡೆ ಮಾಡಿದ ಅವರು, ಫೆ.23ರಂದೇ ಸರ್ಕಾರ ಈ ಆದೇಶ ಹೊರಡಿಸಿದೆ. ಇದರಿಂದ ಅರಣ್ಯ ಇಲಾಖೆಯಲ್ಲಿ ಕೆಲಸದಲ್ಲಿರುವ 5 ಸಾವಿರ ದಿನಗೂಲಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಅರಣ್ಯ ಇಲಾಖೆ ದಿನಗೂಲಿಗಳಿಗೆ 1998ರಿಂದ ಪ್ರತಿ ಪಾಯಿಂಟ್ಗೆ 5 ಪೈಸೆಯಂತೆ ನಿರ್ವಹಣೆ ಭತ್ಯೆ ಪಾವತಿಸಬೇಕಿತ್ತು. ಆದರೆ 2 ಪೈಸೆಯಂತೆ ಪಾವತಿಸುವುದಾಗಿ ಸರ್ಕಾರ ಹೇಳಿತ್ತು. ಇದನ್ನು ದಿನಗೂಲಿಗಳ ಸಂಘಟನೆಯಿಂದ ವಿರೋಧಿಸಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಇದೀಗ ಸರ್ಕಾರ ದಿನಗೂಲಿಗಳ ಬೇಡಿಕೆಗೆ ಸ್ಪಂದಿಸಿ ಹಣ ಬಿಡುಗಡೆ ಮಾಡಿದೆ ಎಂದರು.
ಈ ಆದೇಶದಿಂದಾಗಿ ರಾಜ್ಯದ ಎಲ್ಲ 5 ಸಾವಿರ ಅರಣ್ಯ ಇಲಾಖೆ ದಿನಗೂಲಿಗಳಿಗೆ 50 ಸಾವಿರದಷ್ಟು ಬಾಕಿ ವೇತನ ದೊರಕಲಿದೆ. ಕಾರ್ಮಿಕ ಇಲಾಖೆಯಿಂದ ಅರಣ್ಯ ಇಲಾಖೆ ನಿಗದಿಪಡಿಸುವ ಮಂಜೂರು ದರಗಳ ಪ್ರಕಾರ - ಆಯಾ ವರ್ಷದ ವ್ಯತ್ಯಾಸ ಜೀವನ ನಿರ್ವಹಣೆಯ ಭತ್ಯೆಯನ್ನು ಪಾವತಿಸಲು ಕ್ರಮಕ್ಕಾಗಿ ಆದೇಶದಲ್ಲಿ ಸೂಚಿಸಲಾಗಿದೆ.
ಪ್ರಾದೇಶಿಕ ಅರಣ್ಯ ಇಲಾಖೆಗೆ 10.66 ಕೋಟಿ, ಸಾಮಾಜಿಕ ಅರಣ್ಯ ಇಲಾಖೆಗೆ 6 ಕೋಟಿ ಬಿಡುಗಡೆ ಮಾಡಿದ್ದು, ಬಾಕಿ ವೇತನ ನೇರವಾಗಿ ದಿನಗೂಲಿ ನೌಕರರ ಖಾತೆಗೆ ಜಮಾ ಮಾಡಬೇಕೆಂದು ಆದೇಶ ಹೊರಡಿಸಲು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಖುದ್ದು ಭೇಟಿ ಮಾಡಿ ಮನವಿ ಮಾಡಲಾಗಿದೆ ಎಂದೂ ಹಿರೇಮಠ ಹೇಳಿದ್ದಾರೆ.