ವಿಕಲಚೇತನ ಮಕ್ಕಳ ಕೇಂದ್ರಕ್ಕೆ ಹವಾಲ್ದಾರ ಭೇಟಿ
ಸುರಪುರ: ವಿಕಲಚೇತನ ಮಗು ಶಾಲೆಯಿಂದ ದೂರ ಉಳಿಯದೇ, ಗೃಹಾಧಾರಿತ ಶಿಕ್ಷಣವನ್ನು ಪಡೆದು ಮುಖ್ಯವಾಹಿನಿಗೆ ಸೇರಬೇಕು ಎಂದು ಕಕ್ಕೇರಾ ಕ್ಲಸ್ಟರ್ ಮಟ್ಟದ ಸಮೂಹ ಸಂಪನ್ಮೂಲ ಕೇಂದ್ರದ ಮುಖ್ಯಸ್ಥ ರಹೀಮ್ ಹವಾಲ್ದಾರ ಹೇಳಿದರು.
ತಾಲೂಕಿನ ಕಕ್ಕೇರಾದ ವಿಕಲಚೇತನ ಮಕ್ಕಳ ಗೃಹಾಧಾರಿತ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಸರ್ಕಾರದಿಂದ ಉಚಿತವಾಗಿ ಕೊಡಲಾಗುವ ಎಂಆರ್ ಕಿಟ್ ಮತ್ತು ಸಲಕರಣೆಗಳನ್ನು ವಿತರಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ವಿಕಲಚೇತನ ಮಗು ಸೇರಿದಂತೆ 6 ವರ್ಷದಿಂದ 14 ವರ್ಷದವರೆಗಿನ ಎಲ್ಲಾ ಮಕ್ಕಳು ಶಿಕ್ಷಣದಿಂದ ದೂರವಾಗಬಾರದೆಂಬ ಉದ್ದೇಶದಿಂದ ಸರ್ಕಾರವು ವಿಕಲಚೇತನ ಮಕ್ಕಳಿಗಾಗಿಯೇ ಸಮನ್ವಯ ಶಿಕ್ಷಣದ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಶಿಕ್ಷಣ ನೀಡುತ್ತಿದೆ. ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಹಣಮಪ್ಪ ಬೊಮ್ಮನಳ್ಳಿ, ಕೆ. ಗವಿಸಿದ್ದೇಶ ಹೊಗರಿ, ಕುಮಾರಿ, ಶಕೀರಾ ಬೇಗಂ, ಹಣಮಂತ್ರಾಯ ಜಂಪಾ ಇತರರು ಇದ್ದರು.