ಕುಲಾಂತರಿ ತಳಿಯಿಂದ ವಿಷಯುಕ್ತ ಆಹಾರ: ನಾಗೇಶ ಹೆಗಡೆ
ಶಹಾಪುರ: ತಳಿ ಮಾರ್ಪಾಟು ಮಾಡುವ ಭರಾಟೆಯಲ್ಲಿ ಕುಲಾಂತರಿ ಬೀಜಗಳನ್ನು ಸೃಷ್ಟಿಸಿ ವಿಷಯುಕ್ತ ಆಹಾರ ಬೆಳೆಯಲಾಗುತ್ತಿದೆ ಎಂದು ವಿಜ್ಞಾನ ಲೇಖಕ ನಾಗೇಶ ಹೆಗಡೆ ಅಭಿಪ್ರಾಯಪಟ್ಟರು.
ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಪಾಲ್ಗೊಂಡು ಬೆಳೆ ಮತ್ತು ಆಹಾರ ಭದ್ರತೆ ಕುರಿತು ಅವರು ಉಪನ್ಯಾಸ ನೀಡಿದರು. ಈ ಹಿಂದೆ ನಾವು ತಿನ್ನುತ್ತಿದ್ದ ಆಹಾರ ಔಷಧೀಯ ಗುಣ ಹೊಂದಿತ್ತು. ಆದರೆ ಈಗ ನಾವು ತಿನ್ನುತ್ತಿರುವ ಆಹಾರವೇ ವಿಷಕಾರಿಯಾಗಿದೆ. ರೈತ ತನಗೆ ಬೇಕಾದದ್ದನ್ನು ನೈಸರ್ಗಿಕವಾಗಿ ಪಡೆಯುವಂಥ ಶಕ್ತಿ ಕಳೆದುಕೊಂಡಿದ್ದು, ವಿದೇಶಿ ಕಂಪನಿಗಳ ಮುಂದೆ ಬೀಜ ಹಾಗೂ ರಸಗೊಬ್ಬರಕ್ಕಾಗಿ ಸಾಲಿನಲ್ಲಿ ನಿಲ್ಲುತ್ತಿರುವುದು ಆತಂಕಕಾಗಿ ಬೆಳವಣಿಗೆಯಾಗಿದೆ ಎಂದರು.
ಜನಸಂಖ್ಯೆ ಹೆಚ್ಚಾದಂತೆ ಅರಣ್ಯಗಳನ್ನು ನಾಶ ಮಾಡಿ ಅಲ್ಲಿರುವ ಜೀವ ಜಂತುಗಳನ್ನು ಕೊಂದು ಆಹಾರ ಭದ್ರತೆ ಒದಗಿಸಲು ಕೃಷಿಯಲ್ಲಿ ತಳಿಗಳ ಅಭಿವೃದ್ಧಿ ಮೂಲಕ ಕಡಿಮೆ ಸ್ಥಳದಲ್ಲಿ ಹೆಚ್ಚು ಬೆಳೆ ಬೆಳೆಯುತ್ತಿದ್ದೇವೆ. ದುರಂತವೆಂದರೆ ತಳಿ ಮಾರ್ಪಾಟಿನಿಂದ ಬೆಳೆಗಳಲ್ಲಿ ವಿಷಯುಕ್ತ ಆಹಾರ ತಿನ್ನುತ್ತಿದ್ದೇವೆ. ಅಪೌಷ್ಟಿಕತೆಯಿಂದ ಹೆಣ್ಣು ಮಕ್ಕಳಿಗೆ ಗರ್ಭಸ್ರಾವ ಆಗುತ್ತಿದೆ. ವಿಕಲಾಂಗ ಮಕ್ಕಳು ಹುಟ್ಟುವಂತಾಗಿದೆ. ಮನುಷ್ಯ ರೋಗದ ಆಗರವಾಗುತ್ತಿದ್ದಾನೆ ಎಂದು ಹೇಳಿದರು.
ಸುಧೀಂದ್ರ ಹಾಲ್ದೊಡ್ಡೇರಿ ಮಾತನಾಡಿ, ತಳಿ ಮಾರ್ಪಾಟಿನಿಂದ ಇಂಧನ ಭದ್ರತೆ ಒದಗಿಸಬೇಕೇ ಹೊರತು ಆಹಾರ ಭದ್ರತೆ ಒದಗಿಸಬಾರದು ಎಂದರು. ಪ್ರತಿಷ್ಠಾನದ ಡಾ.ಪಿಎಸ್. ಶಂಕರ ಮಾತನಾಡಿದರು. ಪ್ರಾಂಶುಪಾಲ ಶಿವರಾಜ ಎಂ.ದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಆನಂದ ಸಾಸನೂರ, ಡಾ.ಬಸವರಾಜ ಇಜೇರಿ ಇತರರು ಇದ್ದರು.