ಕೊಯ್ನಾ ನೀರು ಹರಿಸಿ..
ಯಾದಗಿರಿ: ನಾರಾಯಣಪುರ ಎಡದಂಡೆ ಕಾಲುವೆಗೆ ಫೆ.20ರಿಂದ ನೀರು ಹರಿಸುವುದನ್ನು ಸ್ಥಗಿತಗೊಳಿಸಿರುವುದರಿಂದ ರೈತರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಆದ್ದರಿಂದ ಮಾ.30ರವರೆಗೆ ಕಾಲುವೆಯಲ್ಲಿ ನೀರು ಹರಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಚೆನ್ನಾರೆಡ್ಡಿ ಪಾಟೀಲ ತುನ್ನೂರ ಆಗ್ರಹಿಸಿದ್ದಾರೆ.
ರೈತಪರ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿ ಸರ್ಕಾರ ರೈತರನ್ನೇ ತೊಂದರೆಗೆ ಸಿಲುಕಿಸುತ್ತಿದೆ. ಈಗಾಗಲೇ ಕಾಲುವೆ ಜಾಲ ಪ್ರದೇಶದಲ್ಲಿ ರೈತರು ಬತ್ತ, ಶೇಂಗಾ, ಹತ್ತಿ, ತರಕಾರಿ ಇನ್ನಿತರ ಬೆಳೆ ಬೆಳೆದಿದ್ದಾರೆ. ಅದಕ್ಕೀಗ ನೀರಿನ ಅಗತ್ಯವಿದೆ.
ಆದರೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಫೆ.20ರವರೆಗೆ ಮಾತ್ರ ನೀರು ಹರಿಸಬೇಕು ಎಂದು ಅವೈಜ್ಞಾನಿಕ ಹಾಗೂ ರೈತ ವಿರೋಧಿ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಸದ್ಯ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆಯುತ್ತಿರುವ ಬೆಳೆ ಒಣಗಿ ರೈತರಿಗೆ ನಷ್ಟವಾಗಲಿದೆ.
ಕೊಯ್ನಾದಿಂದ ನೀರು ಬಿಡಿಸಲಿ..: ಜಲಾಶಯದಲ್ಲಿ ಬೇಸಿಗೆ ಅವಧಿಯಲ್ಲಿ ಕುಡಿವ ನೀರು ಪೂರೈಕೆಗೆ ಮಾತ್ರ ಸಾಲುವಷ್ಟು ನೀರಿದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಒಂದು ವೇಳೆ ಜಲಾಶಯದಲ್ಲಿ ನೀರಿಲ್ಲದಿದ್ದರೆ ಕೋಯ್ನಾ ಜಲಾಶಯದಿಂದ ನೀರು ಬಿಡಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸಬೇಕು. ಅದನ್ನು ಬಿಟ್ಟು ರೈತರಿಗೆ ಅನ್ಯಾಯ ಮಾಡಿ, ಅವರನ್ನು ಸಾಲದಲ್ಲಿ ನೂಕಿ ಕುಡಿವ ನೀರು ಇಟ್ಟಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಆದ್ದರಿಂದ ಸರ್ಕಾರ ಈ ಬಗ್ಗೆ ತಕ್ಷಣ ನಿರ್ಣಯ ಕೈಗೊಳ್ಳಬೇಕು. ಮಾ.30ರವರೆಗೆ ಎಡದಂಡೆ ಕಾಲುವೆಯಲ್ಲಿ ನೀರು ಹರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇಂದಿನ ಧರಣಿಗೆ ಬೆಂಬಲ: ಈ ನಿಟ್ಟಿನಲ್ಲಿ ಫೆ.28ರಂದು ಸುರಪುರ ಮಾಜಿ ಶಾಸಕ ವೆಂಕಟಪ್ಪ ನಾಯಕ ಅವರು ನಾರಾಯಣಪುರದಲ್ಲಿ ಧರಣಿ ಹಮ್ಮಿಕೊಂಡಿರುವದಕ್ಕೆ ತಮ್ಮ ಬೆಂಬಲವಿದ್ದು, ರೈತಪರ ಹೋರಾಟವನ್ನು ಎಲ್ಲರೂ ಬೆಂಬಲಿಸಬೇಕು. ಕಾಲುವೆ ನೀರು ಸ್ಥಗಿತದಿಂದ ಆಗುವ ಬೆಳೆ ನಷ್ಟದ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಡಳಿತ ಸರ್ಕಾರಕ್ಕೆ ತಿಳಿಸಬೇಕು.
ರೈತರಿಗೆ ತೊಂದರೆ ಆಗದ ರೀತಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಬೇಕು. ಕಾಲುವೆ ಕೊನೆ ಭಾಗದಲ್ಲಿರುವ ಶಹಾಪುರ ತಾಲೂಕಿನ ಗ್ರಾಮಗಳಿಗೂ ನೀರು ಹರಿಸಬೇಕು ಎಂದು ಚೆನ್ನಾರೆಡ್ಡಿ ಆಗ್ರಹಿಸಿದ್ದಾರೆ.