ಕ್ರಿಕೆಟ್ನಲ್ಲಿ ನವೀನ್ ಬಿಲ್ಲವ ಸಾಧನೆ
ಗುಲ್ಬರ್ಗ: ರಾಜಸ್ಥಾನದಲ್ಲಿ ನಡೆದ ಅಖಿಲ ಭಾರತ ರಾಜೀವ್ ಗಾಂಧಿ ಸ್ಮಾರಕ ಯುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಗರದ ನವೀನ್ ಬಿಲ್ಲವ ಕರ್ನಾಟಕದ ಬೆಂಗಳೂರು ಬುಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಈ ಪಂದ್ಯಾವಳಿಯಲ್ಲಿ ಬೆಂಗಳೂರು ಬುಲ್ಸ್ ತಂಡ ಒಟ್ಟು 4 ಪಂದ್ಯ ಆಡಿ ಮೂರು ಪಂದ್ಯದಲ್ಲಿ ಜಯಗಳಿಸಿದೆ. ಒಂದು ಪಂದ್ಯವನ್ನು ಸೋತರೂ ಅಂಕಗಳ ಆಧಾರದ ಮೇಲೆ ದಿಲ್ಲಿ ತಂಡದ ವಿರುದ್ಧ ಬೆಂಗಳೂರು ಬುಲ್ಸ್ನ್ನು ಉಪಾಂತ್ಯ ಪಂದ್ಯಕ್ಕೆ ಆಯ್ಕೆಯಾಯಿತು. ಈ ಪಂದ್ಯಾವಳಿಯಲ್ಲಿ ನವೀನ್ ಮೊದಲ ಪಂದ್ಯದಲ್ಲಿಯೇ ಹರ್ಯಾಣದ ವಿರುದ್ಧ 2 ವಿಕೆಟ್ ಹಾಗೂ ಎರಡನೇ ಪಂದ್ಯದಲ್ಲಿ ಚಂಡೀಗಡ ವಿರುದ್ಧ 4 ವಿಕೆಟ್ ಹಾಗೂ ಮೂರನೇ ಪಂದ್ಯದಲ್ಲಿ ದಿಲ್ಲಿ ವಿರುದ್ಧ ಅಜೇಯ 75 ರನ್ ಗಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾದರು. ಈ ಸಾಧನೆ ಮಾಡಿದ ನವೀನ್ ಅವರಿಗೆ ಬೆಂಗಳೂರು ಬುಲ್ಸ್ ಪರವಾಗಿ ಶುಭಾಶಯ ಕೋರಿದ್ದಾರೆ.