ಈಗೇನು ಮಾತನಾಡಲಾರೆ...
ಗುಲ್ಬರ್ಗ: ಗುಲ್ಬರ್ಗ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಆರಂಭವಾಗಿರುವ ನಗರ ಸಾರಿಗೆ ಸೇವೆಗಳನ್ನು ಸ್ಥಳೀಯವಾಗಿ ಜನತೆ ಬಹುವಾಗಿ ಮೆಚ್ಚಿದ್ದಾರೆ. ಇಂತಹ ಜನ ಮೆಚ್ಚಿದ ಸೇವೆಗೆ ಹೆಚ್ಚಿನ ಬಲ ತುಂಬಲಾಗುತ್ತದೆಯೇ ವಿನಃ ಅಂತಹ ಸೇವೆಯನ್ನು ರದ್ದು ಪಡಿಸುವುದಾಗಲಿ, ಯಾರೋ ವಿರೋಧಿಸಿದರು ಎಂದು ಅದರ ಮಾರ್ಗ ಬದಲಾವಣೆ, ಅವುಗಳನ್ನು ಗ್ರಾಮೀಣ ಭಾಗಕ್ಕೆ ಹಾಕುವುದಾಗಲಿ ಅಂತಹ ಕೆಲಸಗಳನ್ನು ಮಾಡಲಾಗದು ಎಂದು ರಾಜ್ಯದ ಉಪ ಮುಖ್ಯಮಂತ್ರಿ ಆರ್. ಅಶೋಕ ಹೇಳಿದ್ದಾರೆ.
ಗುಲ್ಬರ್ಗದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಆಟೋ ಚಾಲಕರ ಮುಷ್ಕರದ ವಿಚಾರವಾಗಿ ಕಾನೂನು- ಸುವ್ಯವಸ್ಥೆ ಕಾಪಾಡಲು ಪೊಲೀಸರು ಏನಲ್ಲಾ ಕ್ರಮ ಕೈಗೊಳ್ಳಬೇಕೋ ಕೈಗೊಂಡಿದ್ದಾರೆ.ದಾಖಲಿಸಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯುವ ವಿಚಾರವಾಗಿ ನೀತಿ ಸಂಹಿತೆ ಜಾರಿ ಇರುವ ಈ ದಿನಗಳಲ್ಲಿ ಏನನ್ನೂ ಹೇಳಲಾರೆ. ಸ್ಥಳೀಯ ಸಂಸ್ಥೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಗುಲ್ಬರ್ಗ ಆಟೋದವರ ಬೇಡಿಕೆಗಳ ಬಗ್ಗೆ ಅವರು ಚರ್ಚೆಗೆ ಬಂದರೆ ತಾವೂ ಚರ್ಚಿಸುವುದಾಗಿ ಹೇಳಿದರು.
ಜನ ಮೆಚ್ಚಿರುವ ನಗರಸ ಸಾರಿಗೆ ಸೇವೆಯಲ್ಲಿ ಯಾವುದೇ ಕೊರತೆ ಇರದಂತೆ ನೋಡಿಕೊಳ್ಳಲಾಗುತ್ತದೆ. ಗುಲ್ಬರ್ಗದಲ್ಲಿ ಈ ಸೇವೆ ಬರುವ ದಿನಗಲಲ್ಲಿ ಇನ್ನೂ ಬಲಗೊಳಿಸುತ್ತೇವೆ ಎಂದು ಅಶೋಕ ಹೇಳಿದ್ದಾರೆ. ಆಟೋ ಸೇರಿದಂತೆ ಖಾಸಗಿ ವಾಹನಗಳವರು ಇಂತಹ ಜನಪರ ಸೇವೆಯನ್ನು ಪೈಪೋಟಿಗೆ ತೆಗೆದುಕೊಳ್ಳದೆ ಬದಲಾವಣೆಗೆ ಹೊಂದಿಕೊಂಡು ತಾವೂ ಸೇವೆಯಲ್ಲಿ ತೊಡಗಬೇಕು, ಮುಷ್ಕರ ಕೈಬಿಡಬೇಕು ಎಂದರು.