ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾಲುವೆಗೆ ನೀರು; 2 ದಿನ ಗಡುವು

Rashmi Kasaragodu
Updated On : 1 Mar 2013, 10:53 am

ಹುಣಸಗಿ: ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಮಾ.30ರವರೆಗಾದರೂ ನೀರು ಬಿಡಬೇಕು. ಅದಕ್ಕಾಗಿ 2 ದಿನ ಕಾಲಾವಕಾಶ ನೀಡಲಾಗುವುದು. ಒಂದು ವೇಳೆ ಇದಕ್ಕೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಎಚ್ಚರಿಸಿದರು.
  ಗುರುವಾರ ನಾರಾಯಣಪುರದ ಕೆಬಿಜೆಎನ್ನೆಲ್ ಮುಖ್ಯ ಅಭಿಯಂತರ ಕಚೇರಿ ಮುಂದೆ ನೀರಿಗಾಗಿ ಸಾವಿರಾರು ರೈತರೊಂದಿಗೆ ಹಮ್ಮಿಕೊಂಡಿದ್ದ ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ಬೀದಿ ಪಾಲು: ಬೆಳೆದು ನಿಂತಿರುವ ಶೇಂಗಾ, ಸೆಜ್ಜೆ, ಹತ್ತಿ ಬೆಳೆಗಳಿಗೆ, ದನಕರುಗಳಿಗೆ ಅನುಕೂಲವಾಗುವಂತೆ ಮಾ.30ರವರೆಗೆ ನಾರಾಯಣಪುರ ಎಡದಂಡೆ ನಾಲೆಗೆ ನೀರು ಹರಿಸಬೇಕು. ಒಂದು ವೇಳೇ ನೀರು ಹರಿಸದಿದ್ದರೆ ಸುಮಾರು ಒಂದು ಲಕ್ಷಕ್ಕೂ ಮಿಕ್ಕು ಸಣ್ಣ, ಅತಿಸಣ್ಣ ರೈತ ಕುಟುಂಬಗಳು ಬೀದಿ ಪಾಲಾಗಲಿದ್ದಾರೆ. ಇಂತಹ ಕೀರ್ತಿಗೆ ಆಡಳಿತ ಪ್ರಭುಗಳು ಭಾಜನರಾಗುತ್ತಾರೆ. ಬರಲಿರುವ ಚುನಾವಣೆಯಲ್ಲಿ ರೈತರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಎಚ್ಚರಿಕೆ ನೀಡಿದರು. ಪದೇ ಪದೇ ಸುಳ್ಳು ಹೇಳುವ ರೈತರ ಜೀವ ಹಾನಿ ಮಾಡುವಂಥವರನ್ನು ಆಯ್ಕೆ ಮಾಡಬಾರದು. ನಿಮ್ಮನ್ನು ಸದಾ ದಾರಿ ತಪ್ಪಿಸುವವರಿಗೆ ಕೇಳುವ ಪ್ರಶ್ನೆ ನನಗೆ ಕೇಳಿದರೆ ಹೇಗೆ ಎಂದು ಕೆಲ ರೈತರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವು ಜರುಗಿತು. ಯಾರೋ ಹೇಳಿದರೆಂದು ಮಾರ್ಚ್ ಕೊನೆಯವರೆಗೆ ನೀರು ಬರುವುದೆಂದು ಅವರ ಮಾತು ಕೇಳಿ ನಾವು ಕೆಟ್ಟೆವು ಎಂದು ರೈತನೊಬ್ಬ ಗೊಣಗಿದಾಗ ವೆಂಕಟಪ್ಪ ನಾಯಕ ಈ ರೀತಿ ಉತ್ತರಿಸಿದರು.
ಉಪವಾಸ ಸತ್ಯಾಗ್ರಹ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಸುರಪುರ ತಾಲೂಕಿನ ಕೆಂಬಾವಿ, ಮಾಲಗತ್ತಿ, ಲಕ್ಷ್ಮೀಪುರ, ರುಕುಮಾಪುರ, ಸೂಗೂರ, ಶೆಳ್ಳಗಿ, ಕಕ್ಕೇರಿ, ತಿಂಥಣಿ, ಹಾಲಭಾವಿ, ನಾಗರಾಳ, ಹಂದ್ರಾಳ, ಕೋಣಾಳ, ದೇವತ್ಕಲ್, ಬೆನಕನಹಳ್ಳಿ, ವಜ್ಜಲ್, ಬೈಲಾಪುರ, ಹಣಮಸಾಗರ, ಗೆದ್ದಲಮರಿ, ಹುಲಿಕೇರಿ, ಕೋಡೆಕಲ್, ಬೂದಿಹಾಳ, ಬರದೇವನಾಳ, ಮಾರನಾಳ, ಅಮ್ಮಾಪುರ, ಜೋಗುಂಡಭಾವಿಯಿಂದ ನೂರಾರು ರೈತರು ತಂಡೋಪತಂಡವಾಗಿ ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
  ಕೆಬಿಜೆಎನ್ನೆಲ್ ನಾರಾಯಪುರ ವೃತ್ತದ ಅಧೀಕ್ಷಕ ಅಭಿಯಂತರ ಎಸ್.ಭೋಜಾನಾಯಕ ಕಟ್ಟಿಮನಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ನಂತರ ಮುಖಂಡರಾದ ಶಿವಣ್ಣ ಮಂಗಿಹಾಳ ಮಾತನಾಡಿ, ರೈತರಾದ ನಾವು ಬಹಳ ಜಾಗೃತರಾಗಬೇಕು. ಎಲ್ಲಿವರೆಗೆ ಮೋಸ ಹೋಗುತ್ತೇವೆಯೋ ಅಲ್ಲಿವರೆಗೆ ಮೋಸ ಮಾಡುವವರು ಇರುತ್ತಾರೆ. ರೈತರ ಶಾಪ ಅವರನ್ನು ತಟ್ಟದೆ ಬಿಡದು ಎಂದು ಆಕ್ರೋಶ ವ್ಯಕ್ತಪಡಿಸಿದರು.
  ಸೂಲಪ್ಪ ಕಮತಗಿ, ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ ಪಾಟೀಲ್, ಬಸನಗೌಡ ಯಡಿಯಾಪುರ ಮಾತನಾಡಿ, ಆಡಳಿತ ಚುಕ್ಕಾಣಿ ಹಿಡಿದವರ ಮೈ ಚಳಿ ಬಿಡಿಸಬೇಕಿದೆ. ರೈತರನ್ನು ಒಕ್ಕಲೆಬ್ಬಿಸಿದವರನ್ನು ಸುಮ್ಮನೆ ಬಿಡಬೇಡಿ ಎಂದು ಹೇಳಿದರು.
  ಪ್ರಭುಗೌಡ ಸಾಲೋಡಗಿ, ಯಮನಪ್ಪಾ ಮಾಸ್ತರ, ಸಿದ್ದಣ್ಣ ಮಲಗಲದಿನ್ನಿ, ವೆಂಕಟೇಶ ಹೊಸಮನಿ, ವೆಂಕೋಬ ಯಾದವ, ಶಿವನಗೌಡ ಚನ್ನೂರು, ಮಲ್ಲಣ್ಣಗೌಡ ಮಾಗನೂರು, ಗುಂಡಪ್ಪಾ ಶೋಲ್ಲಾಪುರ, ಲಕ್ಷ್ಮಣ ಲಿಂಗಾಪೂರ, ಪರಮಣ್ಣ ಜಂಪಾ, ರವೀಚಂಧ್ರ ಆಲ್ದಾಳ, ಗೌಡಪ್ಪಾ ಗೌಡ ಕುಪ್ಪಿ, ನಿಂಗನಗೌಡ ಬಿರಾದರ, ಲಿಯಾಕತ್ ಅಲಿ ಮೇಸ್ತ್ರಿ, ಬಾಬು ಚೌದ್ರಿ, ಅಣ್ಣಾಜಿ ಗೌಡ ಮುದನೂರು, ಚಂದಪ್ಪಾ ಹೇಮನೂರು, ಸುರೇಶ ತಂಬಾಕೆ, ಮಲ್ಲಣ್ಣ ಮಿಲಿಟರಿ, ಬಸವರಾಜ ಸಜ್ಜನ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement