ಗ್ರಾಮೀಣಾಭಿವೃದ್ಧಿ; 'ಸಹಕಾರಿ' ಪಾತ್ರ ಮುಖ್ಯ
ಯಾದಗಿರಿ: ಗ್ರಾಮೀಣಾಭಿವೃದ್ಧಿಯಲ್ಲಿ ಸಹಕಾರ ರಂಗದ ಪಾತ್ರ ಮುಖ್ಯವಾಗಿದೆ ಎಂದು ಜಿಪಂ ಉಪ ಕಾರ್ಯದರ್ಶಿ ಬಿ.ವಿ. ಬೋಸ್ಲೆ ಹೇಳಿದರು.
ನಗರದ ಜಿಪಂ ಸಭಾಭವನದಲ್ಲಿ ಬೆಂಗಳೂರಿನ ಪ್ರಾದೇಶಿಕ ಆಡಳಿತ ಸಹಕಾರ ನಿರ್ವಹಣಾ ಸಂಸ್ಥೆ, ಎನ್‌ಸಿಯುಐ ಸಹಕಾರ ಶಿಕ್ಷಣ ಅಭಿವೃದ್ಧಿ ಯೋಜನೆ ಆಶ್ರಯದಲ್ಲಿ ತಾಲೂಕಿನ ಆಯ್ದ ಸ್ವಸಹಾಯ ಸಂಘಗಳ ಸದಸ್ಯರಿಗೆ, ವ್ಯವಸಾಯ ಸೇವಾ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ಏರ್ಪಡಿಸಿದ್ದ ಸಹಕಾರ ನಾಯಕತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗುಲ್ಬರ್ಗ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸಿದ್ರಾಮರೆಡ್ಡಿ ಪಾಟೀಲ್, ಸರ್ಕಾರ ಡಿಸಿಸಿ ಬ್ಯಾಂಕ್ ಮೂಲಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರಗತಿಗಾಗಿ 5 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಕಾರಣ ಈ ಭಾಗದಲ್ಲಿ ನೀರಿನ ಸೌಕರ್ಯವಿರುವುದರಿಂದ ಸ್ವಸಹಾಯ ಸಂಘದವರು ಹೈನುಗಾರಿಕೆ ಪ್ರಗತಿಗೆ ಶ್ರಮಿಸುವುದರ ಜತೆಗೆ ಸ್ವಾವಲಂಬನೆ ಬದುಕು ಸಾಗಿಸಲು ಶ್ರಮಿಸಬೇಕೆಂದು ಸಲಹೆ ನೀಡಿದರು.
ಸಹಕಾರ ಇಲಾಖೆಯಿಂದ ಸ್ವ ಸಹಾಯ ಸಂಘದವರಿಗೆ ಯೋಜನೆಗಳ ಕುರಿತು ಅಗತ್ಯ ತರಬೇತಿ ಶಿಬಿರಗಳನ್ನು ಎಲ್ಲಾ ಕಡೆ ಹಮ್ಮಿಕೊಳ್ಳಲಾಗಿದೆ. ಸದಸ್ಯರು ಸಂಪೂರ್ಣ ಮಾಹಿತಿ ಪಡೆದು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಕರೆ ನೀಡಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಡಿ.ಡಿ. ಒಡೆಯರ್ ಮಾತನಾಡಿ, ಸ್ವ ಸಹಾಯ ಸಂಘಗಳಿಗೆ ಸಾಲ ಸೌಲಭ್ಯಗಳನ್ನು ನೀಡಲಾಗಿದ್ದು, ತೆಗೆದುಕೊಂಡ ಸಾಲವನ್ನು ಸೂಕ್ತ ಸಮಯದಲ್ಲಿ ಮರುಪಾವತಿ ಮಾಡಿ ಹೆಚ್ಚಿನ ಅನುಕೂಲತೆ ಪಡೆದುಕೊಳ್ಳಬೇಕು. ಇತರರಿಗೂ ಸಾಲ ಪಡೆದುಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಂಕರರೆಡ್ಡಿ ಯಲಸತ್ತಿ, ಚಂದ್ರಶೇಖರ, ಎನ್‌ಸಿಯುಐ ಯೋಜನಾಧಿಕಾರಿ ಎಸ್.ಜಿ. ರಾಮಚಂದ್ರ, ಅಮೃತ ಬಿರಾದಾರ, ಕಲ್ಪನಾ ಕೊಂಬಿನ್ ಇತರರಿದ್ದರು.