'ಬೋರ್ಡ್ ಇರದ ಪಕ್ಷಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ'
ಗುಲ್ಬರ್ಗ: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಹೆಚ್ಚಿನ ಸಂಸ್ಥೆಗಳಲ್ಲಿ ತನ್ನ ಬಹುಮತ ಸಾಬೀತುಪಡಿಸುವ ಮೂಲಕ ಜನರ ಪ್ರೀತಿ- ವಿಶ್ವಾಸಕ್ಕೆ ಪಾತ್ರವಾಗಲಿದೆ ಎಂದು ಉಪ ಮುಖ್ಯಮಂತ್ರಿ ಆರ್. ಅಶೋಕ ಹೇಳಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರಕ್ಕಾಗಿ ಗುಲ್ಬರ್ಗ- ಸೇಡಂ ಸಂಚಾರದಲ್ಲಿರುವ ಅಶೋಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಚುನಾವಣೆಯಲ್ಲಿ ತಾವು ಬೋರ್ಡ್ ಇರದ ಪಕ್ಷಗಳ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳೋಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹೆಸರು ಪ್ರಸ್ತಾಪಿಸದೆ ಕೆಜೆಪಿ ಹಾಗೂ ಜೆಡಿಎಸ್ ಬಗ್ಗೆ ಲೇವಡಿ ಮಾಡಿದ ಅಶೋಕ ಈಗೇನಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೇ ರಾಷ್ಟ್ರೀಯ ಪಕ್ಷಗಳು. ಉಳಿದವೆಲ್ಲವೂ ಬೋರ್ಡ್ ಇರದ ಪಕ್ಷಗಳು. ಅಂತಹ ಪಕ್ಷಗಳ ಬಗ್ಗೆ, ಅವುಗಳ ಸಾಧನೆ, ನಾಯಕರ ವಿಚಾರಗಳ ಬಗ್ಗೆ ನಾನಂತೂ ಹೇಳೋದಿಕ್ಕೆ ಹೋಗೋದಿಲ್ಲ ಎಂದರು.
ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಹೊರತುಪಡಿಸಿ ಹೆಚ್ಚಿನ ಅಭಿವೃದ್ಧಿ ಹಣ ನೀಡಿದ್ದು ಬಿಜೆಪಿ. ಇದರಿಂದಾಗಿ ಜನತೆ ಪಕ್ಷದ ಈ ಕೆಲಸಕ್ಕೆ ಮೆಚ್ಚಿ ನಮ್ಮನ್ನೇ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಶೆಟ್ಟರ್ ಮುಂದಿನ ಸಿಎಂ: ಶೆಟ್ಟರ್ ಅವಧಿ ಈಗ ಸಂಕ್ಷಿಪ್ತವಾದರೂ ಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದರು.