ಶಿಕ್ಷಣ ಹಕ್ಕುಅನುಷ್ಠಾನಕ್ಕೆ ಆಗ್ರಹಿಸಿ ಜನಜಾಗೃತಿ
ಗುಲ್ಬರ್ಗ: ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವುದನ್ನು ಮತ್ತು ಮುಚ್ಚುವುದನ್ನು ವಿರೋಧಿಸಿ ಹಾಗೂ ಶಿಕ್ಷಣ ಹಕ್ಕಿನ ಕಾಯಿದೆ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಸಾಮಾಜಿಕ ಪರಿರ್ವತನ ಜನಾಂದೋಲನ ಸೋಮವಾರ ಜನಜಾಗೃತಿ ಸಪ್ತಾಹಕ್ಕೆ ಚಾಲನೆ ನೀಡಿದ್ದು, ಇದು 30ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜನಾಂದೋಲನದ ವಲಯ ಸಂಘಟಕ ವಿಠ್ಠಲ್ ಚಿಕಣಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 5ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಸಮೀಪದ ಸರ್ಕಾರಿ ಶಾಲೆಗಳೊಡನೆ ವಿಲೀನಗೊಳಿಸಲು ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಈ ಜನಜಾಗೃತಿ ಸಪ್ತಾಹವನ್ನು ಆಯೋಜಿಸಲಾಗಿದೆ ಎಂದರು.
ಖಂಡನೆ: ಶಾಲಾ ಶಿಕ್ಷಣದ ಸಂರಚನೆಯ ಉನ್ನತೀಕರಣ ಹಾಗೂ ಪುನರ್ ಸಂಘಟನೆಯ ಹೆಸರಿನಲ್ಲಿ ರಚಿಸಲಾಗಿರುವ ರಾಷ್ಟ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಆರ್. ಗೋವಿಂದ ನೇತೃತ್ವದ ಸಮಿತಿ 1ರಿಂದ 7ನೇ ತರಗತಿವರೆಗಿನ ಸರ್ಕಾರಿ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದರೆ, ಮುಂಬರುವ ದಿನಗಳಲ್ಲಿ ಅಂತಹ ಶಾಲೆಗಳನ್ನು ಸಮೀಪದ ಸರ್ಕಾರಿ ಶಾಲೆಗಳೊಡನೆ ವಿಲೀನಗೊಳಿಸುವಂತೆ ಶಿಫಾರಸ್ಸು ಮಾಡಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ರಾಜ್ಯದಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ 12,740 ಶಾಲೆಗಳಿದ್ದು, ಮುಂಬರುವ ದಿನಗಳಲ್ಲಿ ಈ ಶಾಲೆಗಳನ್ನು ಸಮೀಪದ ಸರ್ಕಾರಿ ಶಾಲೆಗಳೊಡನೆ ವಿಲೀನಗೊಳಿಸುವುದರ ಮೂಲಕ ಸರ್ಕಾರ ಆ ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚಲು ಹೊರಟಿದೆ ಎಂದು ಆರೋಪಿಸಿದರು.
ಘೋಷಣೆ: ಕಳೆದ ಒಂದು ದಶಕದಲ್ಲಿ 10,500ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚಿದ್ದು, ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಪ್ರವೇಶ ಪ್ರಮಾಣ 2006 ರಿಂದ 2011ರ ಅವಧಿಯಲ್ಲಿ 63, 31 ಲಕ್ಷದಿಂದ 54, 54 ಲಕ್ಷದವರೆಗೆ ಇಳಿಮುಖವಾಗಿದೆ. ಇದೇ ಅವಧಿಯಲ್ಲಿ ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಪ್ರಮಾಣ 23,08 ಲಕ್ಷದಿಂದ 28. 77 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಸ್ವತ ಸಾರ್ವಜನಿಕ ಶಿಕ್ಷಣ ಇಲಾಖೆಯೇ ಘೋಷಿಸಿದೆ ಎಂದು ವಿವರಿಸಿದರು.
ಸರ್ಕಾರ ವ್ಯವಸ್ಥಿತ ರೀತಿಯಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣ ಮಾಡಿ ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣಕ್ಕೆ ಮುಕ್ತ ಪರವಾನಗಿ ನೀಡುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯ ಶ್ರೈಶೀಲ್ ಘೂಳಿ, ಜೈಭೀಮ ಸೇನೆಯ ರಾಹುಲ್ ಉಪ್ಪಾರೆ, ಮಾನವ ಹಕ್ಕುಗಳ ಸಾಮಾಜಿಕ ನ್ಯಾಯ ಕೇಂದ್ರದ ಕಾನೂನು ಸಲಹೆಗಾರ ಸಂತೋಷ ಮೇಲ್ಮನಿ, ಪೀರಪ್ಪ ಹಾದಿಮನಿ, ಬಸವರಾಜ ಜವಳಿ ಇತರರು ಉಪಸ್ಥಿತರಿದ್ದರು.